ಸಾರಾಂಶ
ಹುಬ್ಬಳ್ಳಿ: ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆಯು ಸತತವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಯಾರಾದರೂ ನಾನು ವೈದ್ಯನಾಗಿ ಎಲ್ಲವನ್ನೂ ಮುಗಿಸಿದ್ದೇನೆ. ಕಲಿತಿರುವೆ ಎಂದುಕೊಂಡಿದ್ದರೆ ಅವರಂತಹ ಮೂರ್ಖರು ಯಾರೂ ಇಲ್ಲ ಎಂದು ಕಿಮ್ಸ್‌ನ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹೇಳಿದರು.
ಇಲ್ಲಿನ ವಿದ್ಯಾನಗರದ ಕಿಮ್ಸ್ ಸಭಾಂಗಣದಲ್ಲಿ ಕರ್ನಾಟದ ರಾಜ್ಯ ಸರ್ಕಾರಿ ರೇಡಿಯಾಲೋಜಿ ಇಮೇಜಿಂಗ್ ಅಧಿಕಾರಿಗಳ ಸಂಘ (ಕೆಎಸ್‌ಜಿಆರ್‌ಐಒಎ) ದಿಂದ ಶನಿವಾರದಿಂದ 2 ದಿನಗಳ ಕಾಲ ಆಯೋಜಿಸಿರುವ 14ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ರೆಡಿಕಾನ್-14 ಉದ್ಘಾಟಿಸಿ ಮಾತನಾಡಿದರು.ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಹೊಸ ಆವಿಷ್ಕಾರಗಳ ಕುರಿತು ತಿಳಿದುಕೊಳ್ಳಲು, ಕಲಿಯಲು ಸಮ್ಮೇಳನಗಳ ಆಯೋಜನೆ ಅವಶ್ಯವಾಗಿದೆ. ಇಂದಿನ ಬದಲಾದ ತಂತ್ರಜ್ಞಾನ ಯುಗದಲ್ಲಿ ಬಹಳಷ್ಟು ಮುಂದುವರಿದ ಎಕ್ಸರೇ ತಜ್ಞರಿದ್ದಾರೆ. ಎರಡು ದಶಕಗಳ ಹಿಂದಿನದಕ್ಕೆ ಹೋಲಿಸಿದರೆ ಮೂಳೆ ತಜ್ಞರು ಬಾಧಿತರಿಗೆ ಸುಲಭವಾಗಿ ಚಿಕಿತ್ಸೆ ನೀಡುವಲ್ಲಿ ಎಕ್ಸರೇ ಇಮೇಜಿಂಗ್ ಅಧಿಕಾರಿಗಳ ಪಾತ್ರ ಸಲ್ಲುತ್ತದೆ ಎಂದರು.
ಕಿಮ್ಸ್‌ನ ಕ್ಷ-ಕಿರಣ ವಿಭಾಗದ ಪುನೀತ ನಾಯ್ಕ ಮಾತನಾಡಿ, ರೆಡಿಯೊಗ್ರಾಫರ್ಸ್ ಎಕ್ಸರೇಯ ಅಡಿಪಾಯವಾಗಿದ್ದಾರೆ. ಉತ್ತಮ ರೆಡಿಯಾಲೋಜಿ ರೋಗಿಯ ಚಿಕಿತ್ಸೆಗೆ ಹಾಗೂ ಗುಣಮಟ್ಟ ಸುಧಾರಿಸಲು ಅನುಕೂಲವಾಗುತ್ತದೆ. ರೆಡಿಯಾಲೋಜಿ ತಂತ್ರಜ್ಞರು ಮತ್ತು ವಿದ್ಯಾರ್ಥಿಗಳು ಈ ವೈಜ್ಞಾನಿಕ ಸಮ್ಮೇಳನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಿಮ್ಸ್‌ನ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ ಮಾತನಾಡಿ, ವೈದ್ಯಕೀಯ ಕ್ಷೇತ್ರಗಳಲ್ಲಿ ನಿರಂತರ ಬದಲಾವಣೆ, ಆವಿಷ್ಕಾರಗಳು, ಹೊಸ ಹೊಸ ಯೂನಿಟ್, ಯಂತ್ರೋಪಕರಣಗಳು, ಕೌಶಲ್ಯಗಳು ಬರುತ್ತಿವೆ. ವೈಜ್ಞಾನಿಕ ಕ್ಷೇತ್ರ ನಿಂತ ನೀರಲ್ಲ. ತಜ್ಞರು, ವಿದ್ಯಾರ್ಥಿಗಳು ಮುಂದುವರಿದ ತಂತ್ರಜಾನ ಕಲಿಯುವುದು ಅವಶ್ಯ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕೆಎಸ್‌ಜಿಆರ್‌ಐಒಎ ಅಧ್ಯಕ್ಷ ಡಾ. ಎಂ.ಆರ್. ರಾಮಚಂದ್ರರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಈಶ್ವರ ಹಸಬಿ, ಶರೀರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಎಫ್. ಕಮ್ಮಾರ, ಆವರಣಾಧಿಕಾರಿ ಉದಯಕುಮಾರ ಹೊನವಾಡಕರ, ಡಾ. ಜಿ.ಸಿ. ಪಾಟೀಲ, ಮಲ್ಲಿಕಾರ್ಜುನ ಬಳ್ಳಾರಿ, ಕೆಎಸ್‌ಜಿಆರ್‌ಐಒಎ ಸಂಸ್ಥಾಪಕ ಅಧ್ಯಕ್ಷ ಎಸ್.ಎ. ವಾಜೀದ್, ಪ್ರಧಾನ ಕಾರ್ಯದರ್ಶಿ ಮುನಿಅಂಜಿನಪ್ಪಾ, ಖಜಾಂಚಿ ವೆಂಕಟೇಶ ಬಾಬು, ರೆಡಿಕಾನ್-14ರ ಚೇರ್‌ಮನ್ ಅಶೋಕ ವಾಲ್ಮೀಕಿ, ರೆಡಿಕಾನ್-14ರ ಉಪಾಧ್ಯಕ್ಷ ಕಿಮ್ಸ್‌ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಹನುಮಂತಪ್ಪ ರಾಮದುರ್ಗ, ಲಕ್ಷ್ಮಣ ಮುದಗಣ್ಣವರ, ಶಿವಯೋಗಿ ದೊಟಾಳಿ, ಪರಶುರಾಮ ಗುಂಜಾಳ, ಮಂಜುನಾಥ ದೊಡ್ಡಮನಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸಂಘದ ಪದಾಧಿಕಾರಿಗಳು, ಎಕ್ಸರೇ ತಜ್ಞರು, ವಿದ್ಯಾರ್ಥಿಗಳಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))