ಸಾರಾಂಶ
ಎಸ್‌ಟಿಜೆ ಕಾಲೇಜಿನ ಪಠ್ಯೇತರ ಚಳುವಟಿಕೆಗಳ ಸಮಾರೋಪ
ಕನ್ನಡಪ್ರಭವ ವಾರ್ತೆ, ಚಿಕ್ಕಮಗಳೂರುವಿದ್ಯೆ ವಿವೇಚನೆ ಕೊಡುತ್ತದೆ. ವಿದ್ಯೆ ಸಿಕ್ಕರೆ ಎಚ್ಚರದ ಘನತೆ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಸಾಹಿತಿ ವಿಮರ್ಶಕ ಡಾ.ಸತ್ಯನಾರಾಯಣ ಹೇಳಿದರು.
ಕುವೆಂಪು ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ನಗರದ ಎಸ್‌ಟಿಜೆ ಮಹಿಳಾ ಪದವಿ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಮತ್ತಿತರ ಪಠ್ಯೇತರ ಚಟುವಟಿಕೆಗಳ ವಾರ್ಷಿಕ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ದಿವ್ಯ ಶಕ್ತಿ ಇರುತ್ತದೆ. ಗಂಡು ಮಕ್ಕಳಿಗಿಂತ ಅಧಿಕ ಸಾಮರ್ಥ್ಯ ಅವರಲ್ಲಿ ಸಹಜ ವಾಗಿರುತ್ತದೆ. ಬಡತನದಿಂದ ಹೊರಬರಲು, ದೌರ್ಜನ್ಯದಿಂದ ಮುಕ್ತಿ ಪಡೆಯಲು ಶಿಕ್ಷಣ ಅತ್ಯಗತ್ಯ. ಹೆಣ್ಣು ಮಕ್ಕಳಿಗೆ ಮದುವೆಯೆ ಅಂತಿಮವೆಂಬ ಭಾವನೆ ಸಮಾಜದಲ್ಲಿ ಸಾರ್ವತ್ರಿಕವಾಗಿದೆ. ವಾಸ್ತವವಾಗಿ ಘನತೆ ಬಾಳು ಮುಖ್ಯವೆಂಬುದನ್ನು ಅರಿಯಬೇಕಾಗಿದೆ ಎಂದರು.ಮದುವೆ, ಸರ್ಕಾರಿ ನೌಕರಿ ಅಂತಿಮ ಅಲ್ಲ ಎಂಬುದನ್ನು ಅರಿಯಬೇಕು. ಘನತೆ ಆತ್ಮಪ್ರಜ್ಞೆ ಕಟ್ಟಿಕೊಳ್ಳುವ ನಿಜಶಿಕ್ಷಣ ಪಡೆದರೆ ಜಾತಿ, ಧರ್ಮ, ಅಂತಸ್ತು ಮೀರಿ ಬಡತನದಿಂದಲೂ ಹೊರಬಂದು ಬದುಕಬಹುದು. ವೃತ್ತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಯುವಜನತೆಗೆ ಸಿಗಬೇಕು. ಘನತೆಯಿಂದ ಬದುಕುವ ವೃತ್ತಿಗಳೆಲ್ಲವೂ ಶ್ರೇಷ್ಠವೇ. ಆದರೆ, ಇದನ್ನು ಅರ್ಥಮಾಡಿ ಕೊಳ್ಳುವಲ್ಲಿ ಸೋತಿದ್ದೇವೆ. ಬಹು ಬೇಡಿಕೆ, ಹೆಚ್ಚು ಸಂಪಾದನೆಯಾಗುವ ಟೈಪಿಂಗ್, ಟೈಲರಿಂಗ್‌ನಂತಹ ವೃತ್ತಿಗಳು ನಿರ್ಲಕ್ಷ್ಯಕೊಳಗಾಗಿವೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸೇನಾಧಿಕಾರಿ ಶಿವಶಂಕರ ರಡ್ಡಿ ಮಾತನಾಡಿ, ಶಿಸ್ತು, ದೇಶಭಕ್ತಿ ಬದುಕಿಗೆ ಅವಶ್ಯಕ. ವಿದ್ಯೆ ಕಲಿಕೆಗೆ ವಯಸ್ಸು ಮುಖ್ಯವಲ್ಲ. ಸೇನೆಯಿಂದ ನಿವೃತ್ತಿ ಬಳಿಕ ಪೊಲೀಸ್ ಸಬ್‌ಇನ್ಸಪೆಕ್ಟರ್ ಪರೀಕ್ಷೆ ಬರೆದು ಮುಂದೆ ಡಿಎಸ್‌ಪಿವರೆಗೆ ವಿವಿಧ ಇಲಾಖೆ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಬಡ್ತಿ ಹೊಂದಿದ್ದನ್ನು ವಿವರಿಸಿದರು.
ಭಾರತೀಯ ಸೇನೆ ವಿಶ್ವದಲ್ಲೆ ವಿಶಿಷ್ಟವಾದದ್ದು. ಸೈನ್ಯ ಎಂದರೆ ಯುವ ಜನರಿಗೆ ರೋಮಾಂಚನವಾಗುತ್ತದೆ. ಕಾರ್ಗಿಲ್ ಯುದ್ಧ ’ವಿಜೇತ್’ ಸೇರಿದಂತೆ 3 ಯುದ್ಧಗಳಲ್ಲಿ ಭಾಗವಹಿಸಿದ ಅದೃಷ್ಟ ತಮ್ಮದಾಗಿತ್ತು. ಪಾಕಿಸ್ತಾನದಲ್ಲಿ ಕೆಲಕಾಲ ಗೂಢ ಚರ್ಯೆ ನಡೆಸಿದ ಅನುಭವವೂ ಇದೆ. ದೇಶ ಕಾಪಾಡುವುದು ದೇಶವಾಸಿಗಳೆಲ್ಲರ ಕರ್ತವ್ಯ. ಹೆಣ್ಣು ಮಕ್ಕಳೂ ಸೇರಿದಂತೆ ಯುವಜನತೆ ಸೇನೆ ಸೇರಬೇಕು. ಸರ್ಕಾರ, ಅಧಿಕಾರಿಗಳು, ವಿಜ್ಞಾನಿಗಳು ಸೇರಿದಂತೆ ಹಲವರ ಪರಿಶ್ರಮ ಮತ್ತು ಸಂಶೋಧನೆ ಫಲವಾಗಿ ಭಾರತೀಯ ಸೇನೆ ಬತ್ತಳಿಕೆ ಸುಭದ್ರವಾಗಿದೆ ಎಂದ ಶಿವಶಂಕರ ರಡ್ಡಿ, ಅತ್ಯುತ್ತಮ ಸಲಕರಣೆಗಳು ನಮ್ಮಲ್ಲಿವೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಎಸ್.ಜೆ.ಭಾರತಿ ಮಾತನಾಡಿ, ಶಿಕ್ಷಣದ ಜೊತೆಗೆ ಮೌಲ್ಯಯುತ ಸದ್ಗುಣಗಳನ್ನು ಕಲಿತರೆ ಜೀವನ ಸಾರ್ಥಕ ಪಡಿಸಿಕೊಳ್ಳಬಹುದು. ಛಲ, ಹಠ, ಕಠಿಣ ಪರಿಶ್ರಮ ಇದ್ದರೆ ಏನನ್ನಾದರೂ ಸಾಧಿಸಬಹುದು. ನಿರಂತರ ಅಧ್ಯಯನಶೀಲತೆ ಮುಖ್ಯ. ಶಾಲಾ ಕಾಲೇಜು ದಿನಗಳಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಕೊಡುವುದರಿಂದ ಜ್ಞಾನ ಸಂಪಾದಿಸಬಹುದೆಂದರು.
ಕಾಲೇಜು ಸಲಹಾ ಮಂಡಳಿ ಅಧ್ಯಕ್ಷ ಡಾ.ಎಸ್.ವಿನಾಯಕ ಪ್ರತಿಭಾವಂತರನ್ನು ಸನ್ಮಾನಿಸಿ, ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಇಂಗ್ಲೀಷ್‌ನಲ್ಲಿ ಸಂಶೋಧನಾ ಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದ ಕಾಲೇಜಿನ ಉಪನ್ಯಾಸಕ ಡಾ.ಎಸ್.ಮುಜೀಬ್ ಹಾಗೂ ಸೇವೆಯಿಂದ ನಿವೃತ್ತರಾದ ಪ್ರಾಂಶಪಾಲೆ ಭಾರತಿ ಅವರನ್ನು ಸನ್ಮಾನಿಸಲಾಯಿತು.ಎನ್‌ಎಸ್‌ಎಸ್ ಕಾರ್‍ಯಕ್ರಮಾಧಿಕಾರಿ ಎಂ.ಆರ್.ಚಂದ್ರಶೇಖರ್, ವಿದ್ಯಾರ್ಥಿ ಪ್ರತಿನಿಧಿ ಸಂಗೀತಾ, ಯಶಸ್ವಿನಿ , ಪ್ರಿಯಾಂಕಾ, ಲಿಖಿತಾ ಮತ್ತು ಸಹನಾ, ಸಲಹಾ ಸಮಿತಿ ಸದಸ್ಯೆ ಲತಾ ಶೇಖರ್, ಉಪನ್ಯಾಸಕರಾದ ಡಾ.ಚಂದ್ರಶೇಖರ್ ಮತ್ತು ಹೇಮಂತ್, ಮುಖ್ಯ ಶಿಕ್ಷಕಿ ಚೇತನಾ ಗಣೇಶ್ ಇದ್ದರು. 15 ಕೆಸಿಕೆಎಂ 4ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಎಸ್‌ಟಿಜೆ ಮಹಿಳಾ ಪದವಿ ಕಾಲೇಜಿನ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭವನ್ನು ಡಾ. ಸತ್ಯನಾರಾಯಣ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಎಸ್.ಜೆ.ಭಾರತಿ, ಡಾ. ಎಸ್.ವಿನಾಯಕ್, ಚಂದ್ರಶೇಖರ್ ಇದ್ದರು.