ರಾಜಕೀಯ, ಅಪಘಾತ ವಿಷಯದಲ್ಲೇ ಸುದ್ದಿಯಾದ ಜಿಲ್ಲೆ

| Published : Dec 31 2024, 01:00 AM IST

ಸಾರಾಂಶ

A district that is in the news for politics and accidents

- 2024ರ ಕನ್ನಡಪ್ರಭ ಪತ್ರಿಕೆಯು ವರ್ಷದ ಘಟನಾವಳಿ ‘ಮರೆಯುವ ಮುನ್ನ’ ಶೀರ್ಷಿಕೆಯಡಿ ಮೆಲಕು ಹಾಕುವ ಆಯ್ದ ಕೆಲವು ವಿಷಯ

-----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಾಂಸ್ಕೃತಿಕ, ಅಪರಾಧ ಕೃತ್ಯಗಳು, ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪ ಹಾಗೂ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದ ಆರು ದಶಕಗಳ ಶರಾವತಿ ಸಂತ್ರಸ್ತರ ಭೂಮಿ ಹಕ್ಕಿನ ಸಮಸ್ಯೆ, ಸಹ್ಯಾದ್ರಿ ಉತ್ಸವ, ಲಿಂಗನಮಕ್ಕಿ ಚಲೋ ಸೇರಿದಂತೆ ಸಾಕಷ್ಟು ವಿಚಾರಗಳಿಗೆ ಜಿಲ್ಲೆ ಸಾಕ್ಷಿ. ಕನ್ನಡಪ್ರಭ ಪತ್ರಿಕೆಯು ವರ್ಷದ ಘಟನಾವಳಿ ‘ಮರೆಯುವ ಮುನ್ನ’ ಶೀರ್ಷಿಕೆಯಡಿ ಮೆಲಕು ಹಾಕುವ ಆಯ್ದ ಕೆಲವು ವಿಷಯಗಳನ್ನು ಪ್ರಕಟಿಸುತ್ತಿದೆ.

ಶರಾವತಿ ಸಮಸ್ಯೆ: ನಾಡಿಗೆ ಬೆಳಕು ನೀಡಲು ಮನೆ, ಜಮೀನು ಕಳೆದುಕೊಂಡು ಆರು ದಶಕ ಕಳೆದರೂ ಭೂಮಿ ಹಕ್ಕು ಸಿಗದೆ ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ನ್ಯಾಯ ಒದಗಿಸುವ ಸಲುವಾಗಿ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ಸಲ್ಲಿದೆ. ಡಿಸೆಂಬರ್‌ನಲ್ಲಿ ಮೊದಲ ವಿಚಾರಣೆ ನಡೆದಿದ್ದು, ಜ.20 ರಂದು ಎರಡನೇ ಹಂತದ ವಿಚಾರಣೆ ನಡೆಯಲಿದೆ.

ಲಿಂಗನಮಕ್ಕಿ ಚಲೋ: ಶರಾವತಿ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ತರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ನಡೆದ ಲಿಂಗನಮಕ್ಕಿ ಚಲೋ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು.

ಐದು ವರ್ಷದ ಬಳಿಕ ಸಹ್ಯಾದ್ರಿ ಉತ್ಸವ: ಸಹ್ಯಾದ್ರಿ ಉತ್ಸವ ಕೋವಿಡ್‌ ಹಿನ್ನೆಲೆ ಸ್ಥಗಿತಗೊಳಿಸಲಾಗಿತ್ತು. ಆ ನಂತರ ನಾನಾ ಕಾರಣಕ್ಕೆ ಉತ್ಸವ ನಡೆದಿರಲಿಲ್ಲ. ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ಸಹ್ಯಾದ್ರಿ ಉತ್ಸವ ಪುನಾರಂಭಕ್ಕೆ ಆಗ್ರಹಿಸಿದ್ದವು. ಡಿ.9, 10 ಮತ್ತು 11ರಂದು ಸಹ್ಯಾದ್ರಿ ಉತ್ಸವ ನಡೆದಿದೆ.

ರಸ್ತೆ ಅಪಘಾತಕ್ಕೆ: ಜಿಲ್ಲೆಯಲ್ಲಿ 326 ಮರಣಾಂತಿಕ ಅಪಘಾತ ಪ್ರಕರಣಗಳು ದಾಖಲಾಗಿದ್ದು ಬರೋಬ್ಬರಿ 346 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1,049 ಸಾಮಾನ್ಯ ಅಪಘಾತ ಸಂಭವಿಸಿದ್ದು 2,012 ಜನರು ಗಾಯಗೊಂಡಿದ್ದಾರೆ.

ಅಧಿಕ ಪ್ರಕರಣ: ಸಂಚಾರ ನಿಯಮ ಬಿಗಿಗೊಳಿಸಿರುವ ಪೊಲೀಸರು 95 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಿಸಿ 5.42 ಕೋಟಿ ದಂಡ ಸಂಗ್ರಹಿಸಿದ್ದಾರೆ.

ಜೀವ ಹಾನಿ: ರಿಪ್ಪನಪೇಟೆ ಬಳಿಯ ಬಸವಾಪುರದಲ್ಲಿ ದರಗೆಲೆ ತರಲು ಕಾಡಿಗೆ ಹೋಗಿದ್ದ ರೈತ ತಿಮ್ಮಪ್ಪ ಹಾಗೂ ಪುರದಾಳು ಸಮೀಪದ ಆಲದೇವರ ಹೊಸೂರು ಬಳಿ ಹನುಮಂತಪ್ಪ ಎಂಬ ಕೂಲಿಕಾರ್ಮಿಕನನ್ನು ಕಾಡಾನೆಗಳು ಬಲಿ ತೆಗೆದುಕೊಂಡಿವೆ.

ತ್ಯಾವರೆಕೊಪ್ಪಕ್ಕೆ ಹೊಸ ಅತಿಥಿ: ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿ ಐದು ಬಗೆಯ ಹೊಸ ಪ್ರಾಣಿ, ಪಕ್ಷಿಗಳು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಸೇರ್ಪಡೆ. ತ್ಯಾವರೆಕೊಪ್ಪದಲ್ಲಿ ಪ್ರಾಣಿ ಪ್ರಬೇಧಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

----......ಬಾಕ್ಸ್‌....ಅಗ್ನಿ ಪರೀಕ್ಷೆಯಲ್ಲಿ ಗೆದ್ದ ರಾಘವೇಂದ್ರ ಲೋಕಸಭಾ ಚುನಾವಣೆಯಲ್ಲಿ ಬಿ.ವೈ ರಾಘವೇಂದ್ರ ಗೆಲುವಿನ ನಗೆ ಬೀರಿದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನವರ ಪೈಪೋಟಿಯ ಪ್ರಚಾರದ ನಡುವೆಯೂ 2,43,024 ಭಾರೀ ಮತಗಳ ಅಂತರದಿಂದ ಜಯಭೇರಿ ಬಾರಿಸಿರುವ ಬಿ.ವೈ ರಾಘವೇಂದ್ರ ಸೋಲಿಲ್ಲದ ಸರದಾರರಾಗಿ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ.

---------------------

ಜ.12 ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಚಾಲನೆ.

ಜ.22 ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆ.

ಜ.23 ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ ಅಧಿಕಾರಿ ಸ್ವೀಕಾರ.

ಫೆ.1 ಮತ್ತು 2 ಗೋಪಿಶೆಟ್ಟಿಕೊಪ್ಪದಲ್ಲಿ 18ನೇ ಕನ್ನಡ ಸಾಹಿತ್ಯ ಸಮ್ಮೇಳನ,

ಫೆ.4 ಸಿಂಹಧಾಮದ ಸರ್ವಶ್ (13) ಸಿಂಹ ಸಾವನ್ನಪ್ಪಿತ್ತು.

ಫೆ.6 ಜೀವಂತ ಮೀನು ನುಂಗಿದ್ದ ಬಾಲಕನಿಗೆ ಸರ್ಜಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

ಫೆ.25 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶ.

ಮಾ.18 ಲೋಕಸಭಾ ಚುನಾವಣೆ ಪ್ರಚಾರ ಹಿನ್ನೆಲೆ ಪ್ರಧಾನಿ ಮೋದಿ.

ಏ.12 ಲೋ.ಚು. ಗೆ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದರು.

ಏ.15 ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ ಕುಮಾರ್ ಅವರು ನಾಮಪತ್ರ ಸಲ್ಲಿದ್ದರು.

ಏ.19 ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಸಿದ್ದರು.

ಜೂ.4 ಸಂಸದ ಬಿ.ವೈ.ರಾಘವೇಂದ್ರ ಜಯದ ಹಿನ್ನೆಲೆ ವಿಜಿಯೋತ್ಸವ ನಡೆದಿತ್ತು.

ಜು.11 ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಆರ್‌.ಎಂ.ಮಂಜುನಾಥ್‌ ಗೌಡ ಅವರು ಪುನರ್‌ ಆಯ್ಕೆ.

ಆ.5 ಸಿಂಹಧಾಮದ ಸಿಂಹ ಆರ್ಯ (19) ಅನಾರೋಗ್ಯದಿಂದ ಸಾವು.

ಆ.8 ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿ, 3 ಕ್ರೆಸ್ಟ್ ಗೇಟ್ ಮೂಲಕ ಶರಾವತಿ ನದಿಗೆ ನೀರು.

ಸೆ.17 ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನೆರವೇರಿತ್ತು.

ನ.1 ಜಿಲ್ಲೆಯಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ನ.14- ಚೆನ್ನೈ- ಶಿವಮೊಗ್ಗ ರೈಲಿಗೆ ಚಾಲನೆ.

ಡಿ.4 ಕೋಮು ಪ್ರಚೋದಿತ ಭಾಷಣ ಆರೋಪ ಕೆ.ಎಸ್‌.ಈಶ್ವರಪ್ಪ ವಿರುದ್ಧ ಸುಮೋಟ ಪ್ರಕರಣ ದಾಖಲಿಸಿದ್ದರು.

--------------------------