ಸಾರಾಂಶ
ಸಿಸೇರಿಯನ್ ಮಾಡಿ ಮಗುವನ್ನು ತಾಯಿಯ ಗರ್ಭದಿಂದ ಹೊರೆ ತೆಗೆಯುವ ವೇಳೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದು, ಮರ್ಮಾಂಗವನ್ನೇ ಕತ್ತರಿಸಿ ಕೂಸಿನ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಮೃತ ಕೂಸಿನ ಕುಟುಂಬದವರು ಶುಕ್ರವಾರ ಇಲ್ಲಿನ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಿಸೇರಿಯನ್ ಮಾಡಿ ಮಗುವನ್ನು ತಾಯಿಯ ಗರ್ಭದಿಂದ ಹೊರೆ ತೆಗೆಯುವ ವೇಳೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದು, ಮರ್ಮಾಂಗವನ್ನೇ ಕತ್ತರಿಸಿ ಕೂಸಿನ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಮೃತ ಕೂಸಿನ ಕುಟುಂಬದವರು ಶುಕ್ರವಾರ ಇಲ್ಲಿನ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.ನಗರದ ನಿವಾಸಿ ಅಮೃತಾ ಎಂಬುವರನ್ನು ಹೆರಿಗೆಗಾಗಿ ಜೂ.26ರಂದು ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ದಾಖಲು ಮಾಡಲಾಗಿತ್ತು. ಅವರಿಗೆ ಬಿ.ಪಿ.ಹೆಚ್ಚಾಗಿದ್ದರಿಂದ ಸಹಜ ಹೆರಿಗೆ ಬದಲು, ಸಿಸೇರಿಯನ್ ಮಾಡಿ, ಕೂಸನ್ನು ಹೊರ ತೆಗೆಯಲು ವೈದ್ಯರು ನಿರ್ಧರಿಸಿದ್ದರು. ಅದರಂತೆ ಜೂ.27ರಂದು ಸಿಸೇರಿಯನ್ ಮಾಡಿ ಮಗುವನ್ನು ಹೊರ ತೆಗೆಯುವ ವೇಳೆ ವೈದ್ಯ ಡಾ.ನಿಜಾಮುದ್ದೀನ್ ಎಂಬುವರು ನಿರ್ಲಕ್ಷ್ಯ ತೋರಿ, ಕೂಸಿನ ಮರ್ಮಾಂಗವನ್ನೇ ಕತ್ತರಿಸಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಶಿಶುವನ್ನು ಬಾಪೂಜಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಂತಾಜನಕ ಸ್ಥಿತಿಯಲ್ಲಿದ್ದ ಶಿಶು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಹೀಗಾಗಿ, ಮಗುವಿನ ಸಾವಿಗೆ ಕಾರಣರಾದ ವೈದ್ಯರನ್ನು ಸೇವೆಯಿಂದ ಅಮಾನತುಪಡಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಳಿಕ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದರು.ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಮಕ್ಕಳ ವಿಭಾಗದಲ್ಲಿ ಸಿಸೇರಿಯನ್ ಹೆರಿಗೆ ಮಾಡಿದ ವೈದ್ಯರಿಗೆ ಅಧೀಕ್ಷಕರು ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.