ಸಾರಾಂಶ
ಬೆಳಗಿನ ಜಾವ ಹಾಗೂ ಸಂಜೆ ವೇಳೆ ಹನುಮಂತ ದೇವರಿಗೆ ಪೂಜೆ ನಡೆಯುವ ಸಂದರ್ಭದಲ್ಲಿ ಶ್ವಾನವೊಂದು ತನ್ನ ಧ್ವನಿಯ ಮೂಲಕ ನಮನ ಸಲ್ಲಿಸುತ್ತಿದೆ.
ಬೆಳಗ್ಗೆ ಮತ್ತು ಸಂಜೆಯ ಪೂಜೆ ವೇಳೆ ದೇಗುಲದ ಮುಂದೆ ಹಾಜರ್
ಎಂ. ಪ್ರಹ್ಲಾದ್ಕನ್ನಡಪ್ರಭ ವಾರ್ತೆ ಕನಕಗಿರಿ
ಬೆಳಗಿನ ಜಾವ ಹಾಗೂ ಸಂಜೆ ವೇಳೆ ಹನುಮಂತ ದೇವರಿಗೆ ಪೂಜೆ ನಡೆಯುವ ಸಂದರ್ಭದಲ್ಲಿ ಶ್ವಾನವೊಂದು ತನ್ನ ಧ್ವನಿಯ ಮೂಲಕ ನಮನ ಸಲ್ಲಿಸುತ್ತಿದೆ.!ಹೌದು.. ಪಟ್ಟಣದ ಉತ್ತರ ದಿಕ್ಕಿನಲ್ಲಿರುವ ಶ್ರೀ ತೊಂಡಿತೇವರಪ್ಪ ದೇವಸ್ಥಾನದಲ್ಲಿ ಪ್ರಾತಃ ಕಾಲದಲ್ಲಿ ಪೂಜೆ ಮುಗಿದು ಗಂಟೆ ಸದ್ದು ಮತ್ತು ಶಂಖನಾದಕ್ಕೆ ಎಲ್ಲಿದ್ದರೂ ದೇಗುಲದ ಬಳಿ ಬಂದು ತನ್ನ ಧ್ವನಿಯ ಮೂಲಕ ದೇವರಿಗೆ ಧನ್ಯತೆ ಮೆರೆಯುತ್ತಿದೆ.
ಹೀಗೆ ಸಂಜೆಯ ಕೊನೆಯ ಮಹಾ ಮಂಗಳಾರತಿಯ ಸಂದರ್ಭದಲ್ಲಿ ನಾರಾಯಣನ ಸ್ವರೂಪಿಯಾದ ಈ ಶ್ವಾನವು ಸಮಯಕ್ಕೆ ಸರಿಯಾಗಿ ಬಂದು ದೇಗುಲದ ಮುಂದೆ ಕುಳಿತುಕೊಳ್ಳುತ್ತದೆ. ನಂತರ ಗಂಟೆಯ ಸದ್ದು ಆರಂಭಗೊಂಡಾಗ ಶ್ವಾನವು ರಾಮನ ಬಂಟ ಹನುಮಂತನಿಗೆ ತನ್ನ ವಿಶಿಷ್ಟ ದನಿಯಲ್ಲಿಯೇ ಭಕ್ತಿ ಸಮರ್ಪಿಸುತ್ತಿದೆ.ಶ್ವಾನದ ವಿಶಿಷ್ಟ ಭಕ್ತಿಗೆ ಭಕ್ತರು ವಿಸ್ಮಯಗೊಂಡಿದ್ದಾರೆ. ಹನುಮ ಜಯಂತಿ ಹಿನ್ನೆಲೆ ಮಾಲೆ ಧರಿಸಿದ ಮಾಲಾಧಾರಿಗಳು ಸಹ ಶ್ವಾನದ ಭಕ್ತಿಗೆ ಅಚ್ಚರಿಗೊಂಡಿದ್ದಾರೆ. ಪೂಜೆಯ ವೇಳೆಯಲ್ಲಿ ಶ್ವಾನದ ಧ್ವನಿಯನ್ನು ಚಿತ್ರೀಕರಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪೂಜೆ ಸಂದರ್ಭದಲ್ಲಿ ಶ್ವಾನ ತನ್ನ ಧ್ವನಿಯ ಮೂಲಕ ಭಕ್ತಿ ಅರ್ಪಿಸುತ್ತಿದೆ. ಕಳೆದ ಎರಡು ತಿಂಗಳಿಂದಲೂ ಶ್ವಾನ ಪೂಜೆ ವೇಳೆ ವಿಶಿಷ್ಟ ಧ್ವನಿ ಮಾಡುತ್ತದೆ. ಗಂಟೆ ಶಬ್ದ ಹಾಗೂ ಶಂಖನಾದ ಮೊಳಗುತ್ತಿದ್ದಂತೆ ಕೂಗು ಆರಂಭಿಸುತ್ತದೆ ಎನ್ನುತ್ತಾರೆ ದೇವಸ್ಥಾನದ ಅಡುಗೆ ಸಹಾಯಕಿ ಪದ್ಮಾವತಿ.ಕಳೆದ ನಾಲ್ಕೈದು ದಿನಗಳಿಂದ ಗಮನಿಸುತ್ತಿದ್ದೇನೆ. ಬೆಳಗ್ಗೆ ಮತ್ತು ಸಂಜೆಯ ಪೂಜೆ ವೇಳೆ ಶಂಖ, ಗಂಟೆಯ ಸದ್ದಿಗೆ ಶ್ವಾನ ಓಡಿ ಬಂದು ತನ್ನ ವಿಶಿಷ್ಟ ಧ್ವನಿಯ ಮೂಲಕ ನಮನ ಅರ್ಪಣೆ ಮಾಡುತ್ತಿದೆ. ಇದನ್ನು ನೋಡಿ ಬೆರಗಾಗಿ ವಿಡಿಯೋ ಮಾಡಿರುವೆ ಎಂದು ಮಾಲಾಧಾರಿ ಸಂಪತ್ ತಿಳಿಸಿದ್ದಾರೆ.