ಸಾರಾಂಶ
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ:2026ರಲ್ಲಿ "ಪಶ್ಚಿಮ ಪದವೀಧರ ಕ್ಷೇತ್ರ "ದಿಂದ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಹಾಲಿ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಬಿಜೆಪಿಯಲ್ಲಿ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ.
ಎಸ್.ವಿ. ಸಂಕನೂರ ಅವರು ಇನ್ನೊಂದು ಅವಧಿ ಕಣಕ್ಕಿಳಿಯುವ ಉಮೇದಿಯಲ್ಲಿ ಇರುವಾಗಲೇ ದಶಕಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಬಿಜೆಪಿ ಕಟ್ಟಿ ಬೆಳೆಸಿದ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿರುವುದು ವರಿಷ್ಠರಿಗೆ ತಲೆನೋವಾಗುವ ಎಲ್ಲ ಸಾಧ್ಯತೆಗಳಿವೆ.ಅದರಲ್ಲೂ ಐವರು ಆಕಾಂಕ್ಷಿಗಳು ಸಂಘದ ಕಟ್ಟಾ ಅನುಯಾಯಿಗಳು. ಬಾಲ್ಯದಿಂದಲೇ ಸಂಘದ ವಿವಿಧ ವಿಭಾಗದಲ್ಲಿ ಸಕ್ರಿಯರಾದವರು. ಮೇಲಾಗಿ ಈ ಕ್ಷೇತ್ರ ಅಷ್ಟೇ ಅಲ್ಲ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಿರಾಯಾಸವಾಗಿ ಗೆಲ್ಲಿಸುವಲ್ಲಿ ತಮ್ಮ ರಾಜಕೀಯ ಚಾಣಾಕ್ಷತೆ ತೋರಿದವರು. ಅವರೀಗ ಸಂಘದ ಸೇವೆಯಿಂದ ರಾಜಕೀಯ ಅಖಾಡಕ್ಕೆ ಧುಮುಕಲು ರೆಡಿ ಆಗಿದ್ದಾರೆ.
ಎಚ್ಕೆಗೆ ಸೋಲಿನ ರುಚಿ:ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎದುರಾಳಿಗಳೇ ಇಲ್ಲ ಎನ್ನುವಂತೆ ನಿರಂತರವಾಗಿ 4 ಬಾರಿ ಜಯಭೇರಿ ಬಾರಿಸುತ್ತ ಬಂದ ಹುಲಕೋಟಿಯ ಹಿರಿಯ ಕಾಂಗ್ರೆಸ್ಸಿಗ ಎಚ್.ಕೆ.ಪಾಟೀಲ್ ಅವರಿಗೆ 2008ರಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದು, ಇದೇ ಸಂಘದ ಚುನಾವಣಾ ಸಂಘಟನೆಯ ಕಾರ್ಯಶೈಲಿ.
ತಮ್ಮನ್ನು ಸತತ ಮೇಲ್ಮನೆಗೆ ಕಳಿಸುತ್ತಿದ್ದ ಪದವೀಧರರನ್ನು ಧಿಕ್ಕರಿಸಿ ಎಚ್.ಕೆ.ಪಾಟೀಲರು ವಿಧಾನಸಭೆಗೆ ಸ್ಪರ್ಧಿಸಿದ್ದು ಕೂಡ ಆ ಸೋಲಿಗೆ ಪ್ರಮುಖ ಕಾರಣ. ಬಹುಶಃ ಇದೇ ಕ್ಷೇತ್ರದಲ್ಲಿ ಅವರು ಮುಂದುವರೆದಿದ್ದರೆ ಸಭಾಪತಿ ಬಸವರಾಜ ಹೊರಟ್ಟಿ ಅವರಂತೆ ಕಾಯಂ ಸದಸ್ಯರಾಗಿ ಉಳಿಯುವ ಸಾಧ್ಯತೆಗಳಿದ್ದವು. ಹೊಸ ಪ್ರಯೋಗ ಎಚ್.ಕೆ.ಪಾಟೀಲರಿಗೆ ಮುಳುವಾಯಿತು.ಅಂದು ಗೆಲುವು ಸಾಧಿಸಿದ ಮೋಹನ ಲಿಂಬಿಕಾಯಿ ಬಿಜೆಪಿಗೆ ಹೊಸಬರು. ಸಂಘದವರಂತೂ ಅಲ್ಲವೇ ಅಲ್ಲ. ಎಸ್.ವಿ.ಸಂಕನೂರ ಕೂಡ ಹೊರಗಿನವರು. ಆದಾಗ್ಯೂ ಸತತ ಅಮೋಘ ಗೆಲುವು ಲಭಿಸಿದ್ದು ಸಂಘದ ನಿಷ್ಠಾವಂತ ಕಾರ್ಯಕರ್ತರಿಂದ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ರೇಸ್‌ನಲ್ಲಿ ಯಾರು?ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಸೇರಿ ನಾಲ್ಕು ಜಿಲ್ಲೆಗಳನ್ನು ಒಳಗೊಂಡ ಕ್ಷೇತ್ರವಿದು. ಎಚ್.ಕೆ.ಪಾಟೀಲರ ನಿರ್ಗಮನದ ನಂತರ ಇಲ್ಲಿ ಬಿಜೆಪಿ ಪ್ರಬಲವಾಗಿದೆ. ಹಾಗಾಗಿ ಬಿಜೆಪಿಯಿಂದ ಯಾರೆ ಸ್ಪರ್ಧಿಸಿದರೂ ಗೆಲುವು ಗ್ಯಾರಂಟಿ ಎನ್ನುವ ವಿಶ್ವಾಸ ಮೂಡಿದ್ದರಿಂದ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಆಕಾಕ್ಷಿಗಳ ಸರದಿ ಹೆಚ್ಚುತ್ತಲೇ ಇದೆ.
ಹಾಲಿ ಸದಸ್ಯ ಎಸ್.ವಿ.ಸಂಕನೂರ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಮಾಜಿ ಮೇಯರ್ ಶಿವು ಹಿರೇಮಠ, ಸಂಘದ ಹಿರಿಯ ಜಯತೀರ್ಥ ಕಟ್ಟಿ, ಪಾಲಿಕೆ ಹಿರಿಯ ಸದಸ್ಯ ರಾಜಣ್ಣ ಕೊರವಿ, ಸಭಾಪತಿ ಬಸವರಾಜ ಹೊರಟ್ಟಿ ಪುತ್ರ ವಸಂತ ಹೊರಟ್ಟಿ, ಮಾಜಿ ಉಪಮೇಯರ್ ಲಕ್ಷ್ಮಿ ಉಪ್ಪಾರ ಪುತ್ರ ಕಿರಣ ಉಪ್ಪಾರ, ಗದಗಿನ ರವಿ ದಂಡಿನ, ಹಾವೇರಿಯ ಸಿದ್ಧರಾಜ ಕಲ್ಲಕೋಟಿ, ಭೋಜರಾಜ ಕರೂಡಿ ಅವರು ಈಗಾಗಲೆ ಸದಸ್ಯತ್ವ ಮಾಡಿಸುವ, ನಾಲ್ಕೂ ಜಿಲ್ಲೆಯ ಮುಖಂಡರಿಗೆ ಭೆಟಿಯಾಗಿ ತಮ್ಮ ಸ್ಪರ್ಧೆಯ ಇಂಗಿತ ಮನವರಿಕೆ ಮಾಡುತ್ತ, ಕ್ಷೇತ್ರದ ಯುವಕರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹಲವರು ತೆರೆಯ ಮರೆಯಲ್ಲೇ ಇದ್ದು ವರಿಷ್ಟರ ಮೇಲೆ ಒತ್ತಡ ಹೇರುತ್ತಿದ್ದಾರೆ.ಮೂರು ದಶಕಗಳಿಂದ ಹಲವು ಬಾರಿ ಅವಕಾಶ ವಂಚಿತರಾಗುತ್ತ ಬಂದಿರುವ ಲಿಂಗರಾಜ ಪಾಟೀಲ್, ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ಪ್ರಬಲ ಹಿಂದುಳಿದ ನಾಯಕ ಎನಿಸಿರುವ ರವಿ ದಂಡಿನ, ಸಂಘದಲ್ಲಿ ತಮ್ಮದೇಯಾದ ಹಿಡಿತ ಸಾಧಿಸಿರುವ ಜಯತೀರ್ಥ ಕಟ್ಟಿ, ಇದೊಂದು ಬಾರಿ ಹಾವೇರಿಗೆ ಕೊಡಿ ಎನ್ನುವ ಹಟ ಹಿಡಿದಿರುವ ಸಿದ್ಧರಾಜ ಕಲ್ಲಕೋಟಿ, ಶತಾಯಗತಾಯ ಈ ಬಾರಿ ಪುತ್ರ ವಸಂತನಿಗೆ ರಾಜಕೀಯ ಪಟ್ಟಗಟ್ಟುವ ಉತ್ಸಾಹದಲ್ಲಿರುವ ಬಸವರಾಜ ಹೊರಟ್ಟಿ ಅವರಿಗೆಲ್ಲ ಹೇಗೆ ಮನವರಿಕೆ ಮಾಡುವುದು ಮತ್ತು ಯಾರನ್ನು ಕಣಕ್ಕಿಳಿಸಿದರೆ ಗೆಲುವು ಸಲೀಸು ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರು ತಲ್ಲೀನರಾಗಿದ್ದಾರೆ.
ಈ ಆಕಾಂಕ್ಷಿಗಳಿಗೆ ಟಿಕೆಟ್ ದಕ್ಕಿಸಿಕೊಳ್ಳುವುದೇ ದೊಡ್ಡ ಸಾಹಸ ಎನಿಸಿದೆ.