500 ಡಿಗ್ರಿ ಉಷ್ಣಾಂಶದಲ್ಲೂ ಕಾರ್ಯನಿರ್ವಹಿಸುವ ಡ್ರೋಣ್‌!

| Published : Jun 07 2024, 12:30 AM IST

500 ಡಿಗ್ರಿ ಉಷ್ಣಾಂಶದಲ್ಲೂ ಕಾರ್ಯನಿರ್ವಹಿಸುವ ಡ್ರೋಣ್‌!
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ಎರಡುವರೆ ವರ್ಷಗಳಿಂದ ಈ ಸಂಶೋಧನೆ ನಡೆದು ಅಂತಿಮ ಹಂತಕ್ಕೆ ಬಂದಿದೆ. ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಕೊನೆ ಹಂತದ ಸಿದ್ಧತೆಯಲ್ಲಿದ್ದೇವೆ. ಅಗ್ನಿ ಅವಘಡವಾದಾಗ ಚಿಕ್ಕ ಹಾಗೂ ಹೆಚ್ಚಿನ ತಾಪಮಾನ ಹಾಗೂ ಹೊಗೆ ಇದ್ದರೂ ಇದರಲ್ಲಿರುವ ಸೆನ್ಸಾರ್ ಹಾಗೂ ಕ್ಯಾಮೆರಾಗಳ ಮೂಲಕ ಅಲ್ಲಿನ ದೃಶ್ಯಗಳನ್ನು ನೋಡುವಂತೆ ವಿನ್ಯಾಸಗೊಳಿಸಲಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ಎಂಜಿನಿಯರಿಂಗ್‌ ಕಾಲೇಜುಗಳು ಒಂದಿಲ್ಲೊಂದು ಹೊಸ ಬಗೆಯ ತಂತ್ರಜ್ಞಾನ ಬಳಸಿ ಸಾರ್ವಜನಿಕರಿಗೆ ಅನುಕೂಲಕರ ಸಂಶೋಧನೆಗಳನ್ನು ನಿರಂತರವಾಗಿ ಮಾಡುತ್ತಿವೆ. ಇದಕ್ಕೆ ಪೂರಕವಾಗಿ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯು ಅಗ್ನಿ ಅವಘಡಗಳಲ್ಲಿ ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಕ್ಕೆ ಸಹಾಯಕವಾಗಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಡ್ರೋಣ್‌ವೊಂದನ್ನು ಆವಿಷ್ಕರಿಸಿದೆ.

ವಾಣಿಜ್ಯ ಸಂಕೀರ್ಣ, ಮಾಲ್‌, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ರಕ್ಷಣಾ ಕಾರ್ಯ ಕಷ್ಟದಾಯಕ. ಬೆಂಕಿ ಹತ್ತಿ ದಟ್ಟವಾದ ಹೊಗೆಯ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಪರಿಸ್ಥಿತಿ ನಿಭಾಯಿಸುವುದು ಕಷ್ಟಸಾಧ್ಯ. ಬೆಂಕಿ ಹತ್ತಿರುವ ಪ್ರದೇಶದಲ್ಲಿ ಏನಾಗುತ್ತಿದೆ? ಎಷ್ಟು ಜನರು ಅವಘಡದಲ್ಲಿ ಸಿಲುಕಿದ್ದಾರೆ? ಅವರ ಸ್ಥಿತಿ-ಗತಿ ಏನು? ಎಂಬುದರ ಮಾಹಿತಿಯನ್ನು ರವಾನಿಸುವ ಮೂಲಕ ಜನರ ಜೀವ ರಕ್ಷಣೆಗೆ ಸಹಾಯವಾಗುವ ರೀತಿಯಲ್ಲಿ ಈ ಡ್ರೋಣ್‌ ಸಿದ್ಧಪಡಿಸಲಾಗುತ್ತಿದೆ.

ಧಾರವಾಡ ಐಐಟಿಯ ಅಗ್ನಿಶಾಮಕ ಮತ್ತು ಉಷ್ಣ ಸಂಶೋಧನಾ ಪ್ರಯೋಗಾಲಯ ಮತ್ತು ರೋಬೋಟಿಕ್ ಲ್ಯಾಬೊರೇಟರಿ ವಿಭಾಗದ ವತಿಯಿಂದ ಈ ಡ್ರೋಣ್‌ ಅಭಿವೃದ್ಧಿಪಡಿಸಲಾಗಿದೆ. ವಿಭಾಗದ ಮಾಸ್ಟರ್‌ ಇನ್‌ ಸೈನ್ಸ್‌ ವಿದ್ಯಾರ್ಥಿ ರಜತ್‌ ಜೋಶಿ ತಮ್ಮ ಪ್ರೊಜೆಕ್ಟ್‌ ವರ್ಕ್‌ ಮೂಲಕ ಪ್ರೊ. ಸುಧೀರ್ ಸಿದ್ದಾಪುರೆಡ್ಡಿ ಮತ್ತು ಪ್ರೊ. ಅಮೀರ್ ಮುಲ್ಲಾ ಅವರ ತಂಡವು ತಿಹಾನ್ ಫೌಂಡೇಶನ್ ಮತ್ತು ಹೈದ್ರಾಬಾದ್ ಐಐಟಿಯ ಆರ್ಥಿಕ ಸಹಾಯದಿಂದ ಪ್ರಾಥಮಿಕ ಹಂತದಲ್ಲಿ ಈ ಡ್ರೋಣ್‌ ಸಿದ್ಧಪಡಿಸಲಾಗಿದೆ.

ಸಾಮಾನ್ಯವಾಗಿ ಅಗ್ನಿ ಅವಘಡಗಳಲ್ಲಿ ಒಳಗಿನ ಸ್ಥಿತಿ ಏನೂ ಅರಿಯದೇ ರಕ್ಷಣಾ ಕಾರ್ಯ ವಿಳಂಬವಾಗುವ ಸಾಧ್ಯತೆಗಳೇ ಹೆಚ್ಚು. ಇಂತಹ ಸ್ಥಿತಿಯಲ್ಲಿ ಸಾವು-ನೋವು ಹೆಚ್ಚಾಗಬಹುದು. ಈಗ ನಾವು ಆ‍ವಿಷ್ಕರಿಸಿದ ಡ್ರೋಣ್‌ ಬೆಂಕಿ ಹತ್ತಿರುವ ಕಟ್ಟಡದೊಳಗೆ ಹೋಗಿ ಅಲ್ಲಿನ ಸ್ಥಿತಿ-ಗತಿಯನ್ನು ರವಾನಿಸುವ ಮೂಲಕ ಜನರ ರಕ್ಷಣೆ, ಆಸ್ತಿ-ಪಾಸ್ತಿ ಹಾನಿ ತಡೆಯಲು ಸಾಧ್ಯವಾಗಲಿದೆ. ಈ ಡ್ರೋಣ್‌ 500 ಡಿಗ್ರಿ ಉಷ್ಣಾಂಶದಲ್ಲಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲದು. ಅಲ್ಲದೇ ಇದರಲ್ಲಿ ಅಳವಡಿಸಿರುವ ಸೆನ್ಸಾರ್ ಹಾಗೂ ಇತರೆ ಸಾಧನಗಳು ಕೂಡ ಅಷ್ಟೇ ಉಷ್ಣಾಂಶದಲ್ಲಿ ಕೆಲಸ ನಿರ್ವಹಿಸುತ್ತವೆ. ಮುಖ್ಯವಾಗಿ ಈ ಡ್ರೋಣ್‌ನಲ್ಲಿನ ಕ್ಯಾಮೆರಾಗಳು ಕಟ್ಟಡದ ಪ್ರತಿಯೊಂದು ಭಾಗಕ್ಕೂ ಹೋಗಿ, ಅಲ್ಲಿನ ದೃಶ್ಯಗಳನ್ನು ರವಾನಿಸಬಲ್ಲವು. ಈ ಡ್ರೋಣ್‌ನಿಂದಾಗಿ ಕಟ್ಟಡದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪ್ರೊ. ಸುಧೀರ ಸಿದ್ದಾಪುರರೆಡ್ಡಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಸುಮಾರು ಎರಡುವರೆ ವರ್ಷಗಳಿಂದ ಈ ಸಂಶೋಧನೆ ನಡೆದು ಅಂತಿಮ ಹಂತಕ್ಕೆ ಬಂದಿದೆ. ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಕೊನೆ ಹಂತದ ಸಿದ್ಧತೆಯಲ್ಲಿದ್ದೇವೆ. ಅಗ್ನಿ ಅವಘಡವಾದಾಗ ಚಿಕ್ಕ ಹಾಗೂ ಹೆಚ್ಚಿನ ತಾಪಮಾನ ಹಾಗೂ ಹೊಗೆ ಇದ್ದರೂ ಇದರಲ್ಲಿರುವ ಸೆನ್ಸಾರ್ ಹಾಗೂ ಕ್ಯಾಮೆರಾಗಳ ಮೂಲಕ ಅಲ್ಲಿನ ದೃಶ್ಯಗಳನ್ನು ನೋಡುವಂತೆ ವಿನ್ಯಾಸಗೊಳಿಸಲಾಗಿದೆ. ಬೆಂಕಿ ಅವಘಡ ಸೇರಿದಂತೆ ತುರ್ತು ಸಂದರ್ಭಗಳಲ್ಲೂ ಈ ಡ್ರೋಣ್‌ ಸಹಾಯಕವಾಗಲಿದೆ. ಇದೇ ಕಾರಣಕ್ಕೆ ಇದೀಗ ಈ ಡ್ರೋಣ್‌ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುವ ಸಾಧ್ಯತೆ ಇದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು. ಅಗ್ನಿ ಅವಘಡಗಳಲ್ಲಿ ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಕ್ಕೆ ಸಹಾಯಕವಾಗುವ ಡ್ರೋಣ್‌ವೊಂದನ್ನು ಧಾರವಾಡ ಐಐಟಿ ಆವಿಷ್ಕರಿಸಿದೆ. ಪ್ರಾಯೋಗಿಕವಾಗಿ ಆರೇಳು ಅಡಿ ಎತ್ತರದ ಬೆಂಕಿ ಪರಿಸ್ಥಿತಿಯಲ್ಲಿ ಈ ಡ್ರೋಣ್‌ ಯಶಸ್ವಿಯಾಗಿದ್ದು, ದೊಡ್ಡ ಪ್ರಮಾಣದ ಬೆಂಕಿ ಅವಘಡಗಳಲ್ಲೂ ಈ ಡ್ರೋಣ್‌ ಕೆಲಸ ಮಾಡುವಂತೆ ಹೆಚ್ಚಿನ ಸಂಶೋಧನೆ ಕಾರ್ಯ ಪ್ರಗತಿಯಲ್ಲಿದೆ. ಯಶಸ್ವಿಯಾದರೆ ಧಾರವಾಡ ಐಐಟಿಯಿಂದ ದೊಡ್ಡ ಪ್ರಮಾಣದ ಕೊಡುಗೆ ನೀಡಿದಂತಾಗಲಿದೆ ಎಂದು ಧಾರವಾಡ ಐಐಟಿ ನಿರ್ದೇಶಕರಾದ ಪ್ರೊ. ವೆಂಕಪ್ಪಯ್ಯ ದೇಸಾಯಿ

ಹೇಳಿದರು.