ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ದಿ ಸಭಾಭವನದಲ್ಲಿ ಬಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಶಾಮುಕ್ತ ಯುವಜನತೆ ಅಭಿಯಾನದ ಅಂಗವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದ ನೇರಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.ಸಭಾಭವನದ ಬೃಹತ್ ಪರದೆಯ ಮೇಲೆ ವಿದ್ಯಾರ್ಥಿಗಳು ಮತ್ತು ಬೋಧಕರನ್ನೊಳಗೊಂಡು 2 ಸಾವಿರಕ್ಕೂ ಹೆಚ್ಚು ಜನ ಭಾಷಣದ ನೇರಪ್ರಸಾರವನ್ನು ವೀಕ್ಷಿಸಿದರು. ವಿಕಸಿತ ಭಾರತ ಸಂಕಲ್ಪಕ್ಕಾಗಿ ನಶಾಮುಕ್ತ ಯುವಜನತೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಧಾನಿ ಮಾತನಾಡಿದರು. ದೇಶಾದ್ಯಂತ 10 ಸಾವಿರ ಸ್ಥಳಗಳಲ್ಲಿ ಒಂದು ಕೋಟಿಗೂ ಹೆಚ್ಚು ಯುವಜನತೆ ಪಾಲ್ಗೊಂಡ ಬೃಹತ್ ಆನ್-ಲೈನ್ ಕಾರ್ಯಕ್ರಮ ಇದಾಗಿತ್ತು. ಕರ್ನಾಟಕದಲ್ಲಿ ಬಾಗಲಕೋಟೆ ಸೇರಿದಂತೆ ಆಯ್ದ ಜಿಲ್ಲೆಗಳಲ್ಲಿ ಪ್ರಧಾನಿ ಅವರ ಭಾಷಣದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಾಯೋಜನೆ, ಯೂತ್ ಕ್ಲಬ್, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಕಾರೇತರ ಸಂಸ್ಥೆಗಳು, ಆಧ್ಯಾತ್ಮಿಕ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದವು. ''''''''ನಶಾಮುಕ್ತ ಯುವಜನತೆ ವಿಕಸಿತ ಭಾರತದ ಬಹುದೊಡ್ಡ ಶಕ್ತಿ'''''''' ಎನ್ನುವ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದ ಮೂಲಕ ಸಾರಿದರು. ಬಾಗಲಕೋಟೆಯ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜ್ ಸೇರಿದಂತೆ ಕರ್ನಾಟಕದ ಹತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಪ್ರಧಾನಿ ಅವರೊಂದಿಗೆ ಸಂವಾದಕ್ಕಾಗಿ ಆಯ್ಕೆ ಮಾಡಲಾಗಿತ್ತು.ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಿಶಾಬೋಧ ಫೌಂಡೇಷನ್ ಡಾ.ಸತೀಶ ಯುವಜನತೆ ಮಾದಕದ್ರವ್ಯ ವ್ಯಸನಕ್ಕೆ ಬಲಿಯಾಗಬಾರದೆಂದು ಕಿವಿಮಾತು ಹೇಳಿದರು. ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ವ್ಯಸನಮುಕ್ತ ಪ್ರತಿಜ್ಞಾವಿಧಿ ಬೋಧಿಸಿದರು. ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ ಸ್ವಾಗತಿಸಿದರು. ಡಾ.ನಾರಾಯಣ ಮುತಾಲಿಕ ನಿರೂಪಿಸಿದರು.ಪ್ರಧಾನಿ ಅವರ ಭಾಷಣದ ನೇರಪ್ರಸಾರದ ಸಂದರ್ಭದಲ್ಲಿ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಡೆಂಟಲ್ ಕಾಲೇಜ್ ಪ್ರಾಚಾರ್ಯ ಡಾ.ರವಿರಾಜ ದೇಸಾಯಿ, ನರ್ಸೀಂಗ್ ಕಾಲೇಜ್ ಪ್ರಾಚಾರ್ಯ ದಿಲಿಪ್ ನಾಟೆಕರ್, ಮೆಡಿಕಲ್, ಡೆಂಟಲ್, ನರ್ಸಿಂಗ್ ಹಾಗೂ ಫಿಜಿಯೋಥೆರಪಿ ಕಾಲೇಜುಗಳ ಬೋಧಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ನಶಾಮುಕ್ತ ಯುವಜನತೆಯನ್ನು ರೂಪಿಸುವ ಹೊಣೆಗಾರಿಕೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದೆ. ಮೋದಿ ಅವರ ಪ್ರಾಮಾಣಿಕ ಮತ್ತು ಕರ್ತವ್ಯನಿಷ್ಠ ಆಡಳಿತದ ಪರಿಣಾಮ ವಿಕಸಿತ ಭಾರತದ ಕಲ್ಪನೆ ಸಾಕಾರಗೊಂಡಿದೆ. ಈ ದಿಸೆಯಲ್ಲಿ ಯುವಜನತೆಯ ಕೊಡುಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೇಶದ ಪ್ರಗತಿಗೆ ಲಭ್ಯವಾಗಬೇಕು. ಆರೋಗ್ಯಪೂರ್ಣ, ಸದೃಢ ಮತ್ತು ಹೆಚ್ಚು ಅಭಿವೃದ್ಧಿಹೊಂದಿದ ಭಾರತಕ್ಕಾಗಿ ನಶಾಮುಕ್ತ ಯುವಜನತೆ ಅಭಿಯಾನ ಯಶಸ್ವಿಯಾಗಬೇಕು.-ಡಾ.ವೀರಣ್ಣ ಸಿ.ಚರಂತಿಮಠ, ಕಾರ್ಯಾಧ್ಯಕ್ಷ, ಬಿವಿವಿ ಸಂಘ