A drug store in Bhatkal also closed, demanding a ban on online drug sales.
ಕನ್ನಡಪ್ರಭ ವಾರ್ತೆ ಭಟ್ಕಳ
ಆನ್‌ಲೈನ್ ಮೂಲಕ ಔಷಧ ಮಾರಾಟ ನಿಷೇಧ ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಕರೆಯ ಮೇರೆಗೆ ಉತ್ತರ ಕನ್ನಡ ಕೆಮಿಸ್ಟ್ & ಡ್ರಗ್ಗಿಸ್ಟ್ ಅಸೋಸಿಯೇಶನ್‌ನ ಭಟ್ಕಳ ತಾಲೂಕು ಘಟಕದ ವತಿಯಿಂದ ಬುಧವಾರ ಮೆಡಿಕಲ್ ಬಂದ್ ಮಾಡಿ ಮುಷ್ಕರ ನಡೆಸಲಾಯಿತು.ಭಟ್ಕಳ ನಗರ, ಗ್ರಾಮೀಣ ಹಾಗೂ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 36 ಔಷಧ ಅಂಗಡಿಗಳು ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿದವು.
ಆನ್‌ಲೈನ್ ಔಷಧ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಔಷಧ ವ್ಯಾಪಾರಿಗಳು, ವಿತರಕರು ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಸಂಘಟಕರು ಆತಂಕ ವ್ಯಕ್ತಪಡಿಸಿದರು. ಗುಣಮಟ್ಟವಿಲ್ಲದ ಔಷಧಗಳ ಮಾರಾಟ ಹಾಗೂ ದರ ಪೈಪೋಟಿಯಿಂದ ಸಣ್ಣ ವ್ಯಾಪಾರಿಗಳಿಗೆ ತೀವ್ರ ಹೊಡೆತ ಬೀಳುತ್ತಿದೆ ಎಂದು ದೂರಿದರು . 2020ರ ಮಾರ್ಚ್ 26 ಹಾಗೂ 2018ರ ಆಗಸ್ಟ್ 28ರಂದು ಹೊರಡಿಸಿದ ಆನ್‌ಲೈನ್ ಔಷಧ ಮಾರಾಟ ಸಂಬಂಧಿತ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಕಾರ್ಪೋರೇಟ್ ಕಂಪನಿಗಳಿಗೆ ನೀಡಲಾಗುತ್ತಿರುವ ಭಾರಿ ರಿಯಾಯಿತಿ ನೀತಿಯನ್ನು ಹಿಂಪಡೆದು ಏಕರೂಪದ ರಿಯಾಯಿತಿ ದರ ಜಾರಿಗೊಳಿಸಬೇಕು. ನಕಲಿ ಹಾಗೂ ಕಲುಷಿತ ಔಷಧ ತಯಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಔಷಧಿ ಅಂಗಡಿ ಮಾಲಿಕರು ಆಗ್ರಹಿಸಿದರು.ಮುಂಡಗೋಡದಲ್ಲೂ ಔಷಧಿ ಅಂಗಡಿಗಳು ಬಂದ್ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ಮುಷ್ಕರ ಕೈಗೊಂಡ ಹಿನ್ನೆಲೆ ಬುಧವಾರ ಮುಂಡಗೋಡ ಪಟ್ಟಣದಲ್ಲಿ ಅಪೋಲೊ, ಮೆಡ್ ಪ್ಲಸ್ ಹಾಗೂ ಜನೌಷಧಿ ಕೇಂದ್ರ ಹೊರತುಪಡಿಸಿ ಇನ್ನುಳಿದ ಎಲ್ಲ ಔಷಧಿ ಅಂಗಡಿಗಳು ಬಂದ್ ಆಗಿದ್ದವು.
ಆನ್ ಲೈನ್ ಮೂಲಕ ಔಷಧ ವ್ಯಾಪಾರ ನಿಲ್ಲಿಸುವುದು ಹಾಗೂ ಕಾರ್ಪೋರೇಟ್ ಸಂಸ್ಥೆಗಳಿಂದ ಅತಿಯಾದ ರಿಯಾಯಿತಿ ದರದಲ್ಲಿ ಔಷಧ ಪೂರೈಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಮುಷ್ಕರ ಕೈಗೊಳ್ಳಲಾಗಿತ್ತು.