ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ತುರ್ತು ಪರಿಸ್ಥಿತಿಯ ಕರಾಳ ದಿನಕ್ಕೆ 49 ವರ್ಷ ತುಂಬಿದೆ. ಇದರ ಹಿನ್ನಲೆಯಲ್ಲಿ ಬಿಜೆಪಿ ಸೋಮವಾರ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿತು. ಆದರೆ ಅದು ಯಶಸ್ವಿಯಾಗಲಿಲ್ಲ. ಬೆರೆಳೆಣಿಕೆಯಷ್ಟು ಆಗಮಿಸಿದ್ದ ಕಾರ್ಯಕರ್ತರನ್ನು ಪೊಲೀಸರು ಗ್ರಾಮಾಂತರ ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಿದರು.ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ಪಕ್ಷ ಕ್ಷಮೆ ಕೋರಬೇಕೆಂದು ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಚಿತ್ರದುರ್ಗ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗೆ ಸೂಕ್ತ ಸ್ಪಂದನೆ ಸಿಗಲಿಲ್ಲ. ಶಾಸಕರು, ಮಾಜಿ ಶಾಸಕರು ಯಾರೊಬ್ಬರೂ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಹಿಂದೆ ಸರಿದರು. ಪರಿಣಾಮ 25 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ ಅಲ್ಲಿಂದ ಕರೆದೊಯ್ದರು. ಪ್ರಧಾನಿ ಹುದ್ದೆ ದುರುಪಯೋಗ ಪಡಿಸಿಕೊಂಡ ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿ ವಿಪಕ್ಷದವರನ್ನು ಜೈಲಿಗಟ್ಟಿದ್ದರಲ್ಲದೇ ಮಾಧ್ಯಮದವರ ಕತ್ತು ಹಿಸುಕಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಕೊಟ್ಟಿರುವ ಸಂವಿಧಾನವನ್ನೇ ಬುಡಮೇಲು ಮಾಡಿದ್ದರು. ಹಾಗಾಗಿ ಅಜ್ಜಿ ಮಾಡಿದ ತಪ್ಪಿಗೆ ಮೊಮ್ಮಗ ರಾಹುಲ್‍ಗಾಂಧಿ ದೇಶದ ಜನರ ಕ್ಷಮೆ ಕೇಳುವಂತೆ ಬಿಜಿಪಿ ಕಾರ್ಯರ್ತರು ಆಗ್ರಹಿಸಿದರು. ಬಿಜೆಪಿಯವರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತಾರೆ ಎಂಬ ವಿಷಯ ತಿಳಿದ ಪೊಲೀಸರು ಬೆಳಿಗ್ಗೆ 10 ಗಂಟೆಯಿಂದಲೇ ಬಂದೋ ಬಸ್ತ್ ಕೈಗೊಂಡಿದ್ದರು. ಒನಕೆ ಓಬವ್ವ ಪ್ರತಿಮೆ ಮುಂಭಾಗ ಕಾಂಗ್ರೆಸ್ ಕಚೇರಿ ಇದ್ದು ಬ್ಯಾರಿಕೇಡ್ ಬೇಲಿ ಹಾಕಿ ಕಚೇರಿ ಮುಂಭಾಗ ಯಾರೂ ಹೋಗದಂತೆ ನಿರ್ಬಂಧ ವಿಧಿಸಿದ್ದರು. ಇದರಿಂದಾಗಿ ಅಂಬೇಡ್ಕರ್ ವೃತ್ತದ ಕಡೆಯಿಂದ ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿಗೆ ಬರುವವರಿಗೆ ತೊಂದರೆಯುಂಟಾಗಿತ್ತು.ಸಾರ್ವಜನಿಕರು ಸುತ್ತಿ ಬಳಸಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿಭಟನಾಕಾರರಿಗಿಂತ ಪೊಲೀಸರೇ ಅಧಿಕ ಪ್ರಮಾಣದಲ್ಲಿದ್ದರು.ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್‍ಸಿದ್ದಾಪುರ, ಜಿ.ಎಸ್.ಸಂಪತ್‍ಕುಮಾರ್, ಕೆ.ಮಲ್ಲಿಕಾರ್ಜುನ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ಜಿ.ಎಚ್.ಮೋಹನ್, ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ಎಸ್.ಕಲ್ಲೇಶಯ್ಯ, ನಂದಿ ನಾಗರಾಜ್, ತಿಪ್ಪೇಸ್ವಾಮಿ ಓಬವ್ವ, ಚಂದ್ರು, ಪರಶುರಾಮ್, ಕಲ್ಲಂಸೀತಾರಾಮರೆಡ್ಡಿ, ನಗರಸಭೆ ಸದಸ್ಯ ಹರೀಶ್, ಎನ್.ವೀಣ, ಶಾಂತಮ್ಮ, ಅರುಣಕುಮಾರಿ, ಸುಮ, ಕಾಂಚನ, ನಾಗರಾಜ್, ಅಭಿಲಾಷ್, ಕೆ.ಸಿ.ತಿರುಮಲೇಶ, ತಿಪ್ಪೇರುದ್ರಸ್ವಾಮಿ ಹೊಸಹಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.-----------ತುರ್ತು ಪರಿಸ್ಥಿತಿ ಹೇರಿ 49 ವರ್ಷಗಳಾಗಿರುವ ಹಿನ್ನಲೆ ರಾಹುಲ್ ಗಾಂಧಿ ಕ್ಷಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಂಧಿಸಿ ಕರೆದೊಯ್ದರು.
24 ಸಿಟಿಡಿ1ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಯಾರೂ ಸುಳಿಯದಂತೆ ಬ್ಯಾರಿಕೇಡ್ ಗಳ ಇಟ್ಟು ರಸ್ತೆ ಸಂಚಾರ ನಿರ್ಬಂಧಿಸಿದ್ದ ಪೋಲೀಸರು24 ಸಿಟಿಡಿ 2