2023ರಲ್ಲಿ ನಮ್ಮ ಒಬ್ಬ ಮಗಳನ್ನು ಮಡಿಕೇರಿ ವರನಿಗೆ ವಿವಾಹ ಮಾಡಿಕೊಡಲಾಗಿತ್ತು. ಆಕೆಯ ಪತಿ ಮದುವೆಯಾದ ಕೆಲತಿಂಗಳ ನಂತರ ತೀರಿಕೊಂಡರು. ಕೆಲ ತಿಂಗಳು ನಮ್ಮ ಮಗಳು ಪತಿಯ ಹಠಾತ್ ನಿಧನದ ಶಾಕ್ ನಿಂದ ಹೊರಬಾರದೇ ಕೋಮಾಕ್ಕೆ ಹೋಗಿದ್ದಳು. ನಮ್ಮ ಮಗಳು ಅಂತರ್ಜಾತಿ ವರನನ್ನು ವಿವಾಹವಾಗಿದ್ದಳು ಎಂಬ ವಿಚಾರದ ಹಿನ್ನೆಲೆ ನಮ್ಮ ಕುಟುಂಬಕ್ಕೆ ಗ್ರಾಮದ ಯಜಮಾನರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಮ್ಮ ಮಗಳನ್ನು ಬೇರೆ ಸಮುದಾಯದ ವರನ ಜತೆ ವಿವಾಹ ಮಾಡಿಕೊಡಲಾಗಿದೆ ಎಂದು ಆರೋಪಿಸಿ ನಮ್ಮ ಕುಟುಂಬಕ್ಕೆ ಗ್ರಾಮದ ಯಜಮಾನರು ಬಹಿಷ್ಕಾರ ಹಾಕಿದ್ದಾರೆ ಎಂದು ಬಂಡಿಗೆರೆ ಗ್ರಾಮದ ನಿವಾಸಿಗಳಾದ ಕೆ.ಕೆ. ಮಂಜುಳಾ ಮತ್ತು ಕೃಷ್ಣರಾಜು ಆರೋಪಿಸಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2023ರಲ್ಲಿ ನಮ್ಮ ಒಬ್ಬ ಮಗಳನ್ನು ಮಡಿಕೇರಿ ವರನಿಗೆ ವಿವಾಹ ಮಾಡಿಕೊಡಲಾಗಿತ್ತು. ಆಕೆಯ ಪತಿ ಮದುವೆಯಾದ ಕೆಲತಿಂಗಳ ನಂತರ ತೀರಿಕೊಂಡರು. ಕೆಲ ತಿಂಗಳು ನಮ್ಮ ಮಗಳು ಪತಿಯ ಹಠಾತ್ ನಿಧನದ ಶಾಕ್ ನಿಂದ ಹೊರಬಾರದೇ ಕೋಮಾಕ್ಕೆ ಹೋಗಿದ್ದಳು. ನಮ್ಮ ಮಗಳು ಅಂತರ್ಜಾತಿ ವರನನ್ನು ವಿವಾಹವಾಗಿದ್ದಳು ಎಂಬ ವಿಚಾರದ ಹಿನ್ನೆಲೆ ನಮ್ಮ ಕುಟುಂಬಕ್ಕೆ ಗ್ರಾಮದ ಯಜಮಾನರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಆದ ಕಾರಣ ನಾವು ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದು ಇದುವರೆಗೆ ನಮಗೆ ನ್ಯಾಯ ದೊರಕಿಲ್ಲ ಎಂದು ತಿಳಿಸಿದರು.

ನಂತರ ನಾವು ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಸಾಮಾಜಿ ಕಬಹಿಷ್ಕಾರ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಂಡಿಗೆರೆ ಗ್ರಾಮದ ಗೋವಿಂದಶೆಟ್ಟಿ, ಲಕ್ಷ್ಮಿ, ಕುಮಾರ ಅವರನ್ನು ಸಾಕ್ಷಿಗಳಾಗಿ ಹಾಕಿದ್ದು, ಆದರೆ ಯಜಮಾನರು ಸಾಕ್ಷಿಗಳಿಗೆ ಬೆದರಿಸಿದ್ದಾರೆ. ಎಲ್ಲರೂ ನೀವು ನ್ಯಾಯಾಲಯ ಹಾಗೂ ಠಾಣೆಯಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ ಹಾಗೂ ಕೃಷ್ಣರಾಜು ಕುಟುಂಬದವರ ಮೇಲೆ ಕೊಲೆ ಪ್ರಯತ್ನ ಹಾಗೂ ಗಲಾಟೆ ನಡೆದಿಲ್ಲವೆಂದು ಹೇಳಬೇಕು ಎಂದು ನ್ಯಾಯ ಪಂಚಾಯಿತಿಯಲ್ಲಿ ತಾಕೀತು ಮಾಡಿದ್ದಾರೆ. ಒಂದು ವೇಳೆ ಠಾಣೆಯಲ್ಲಿ ನಾವು ಹೇಳಿದ ಹಾಗೇ ಹೇಳದಿದ್ದರೆ ನಿಮ್ಮ ಮೂರು ಕುಟುಂಬದವರಿಗೂ ಬಹಿಷ್ಕಾರ ಹಾಕುತ್ತೇವೆ, ಶುಭ ಸಮಾರಂಭಗಳಿಗೆ ಕರೆಯುವುದಿಲ್ಲ ಹಾಗೂ ನಿಮ್ಮ ಕುಟುಂಬದವರೊಂದಿಗೆ ಮಾತನಾಡುವುದಿಲ್ಲ. ಕೂಲಿ ಕೆಲಸಕ್ಕೆ ಕರೆಯುವುದಿಲ್ಲ. ಬಂಡಿಗೆರೆ ಗ್ರಾಮದ ನ್ಯಾಯದಲ್ಲಿ ನಿಮಗೆ ದಂಡ ವಿಧಿಸುತ್ತೇವೆ ಎಂದು ಮೂರು ಜನ ಸಾಕ್ಷಿದಾರರನ್ನು ಬಲವಂತವಾಗಿ ಒಪ್ಪಿಸಿದ್ದಾರೆ. ನನ್ನ ಕುಟುಂಬದ ಸಾಮಾಜಿಕ ಬಹಿಷ್ಕಾರ ವಿಚಾರಕ್ಕೆ ಸಾಕ್ಷಿಗಳಿಂದ ಸುಳ್ಳು ಹೇಳಿಕೆ ನೀಡಿಸುತ್ತಿದ್ದಾರೆ. ಸಾಮಾಜಿಕ ಬಹಿಷ್ಕಾರ ವಾಪಸ್ ಪಡೆಯಬೇಕಾದರೆ 5 ಲಕ್ಷ ದಂಡಕಟ್ಟಬೇಕು ಎಂದು ಕಟ್ಟಾಜ್ಞೆ ಮಾಡಿದ್ದಾರೆ. ಪೋಲಿಸ್ ಹಾಗೂ ಜಿಲ್ಲಾಡಳಿತ ಕೂಡಲೇ ತಮ್ಮ ಕುಟುಂಬದವರಿಗೆ ಬಹಿಷ್ಕಾರ ಹಾಕಿರುವ ಯಜಮಾನರ ವಿರುದ್ಧ ಕ್ರಮ ಜರುಗಿಸಿ ನಮಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.