ನಾಲ್ಕು ತಲೆಮಾರುಗಳಿಂದ ಚಿಕಿತ್ಸೆ ನೀಡುತ್ತಿರುವ ನಾಟಿ ವೈದ್ಯರ ಕುಟುಂಬ

| Published : Mar 05 2024, 01:36 AM IST

ಸಾರಾಂಶ

ಯಾವುದೇ ಫಲಾಪೇಕ್ಷೆ, ಪ್ರಚಾರ ಬಯಸದೆ ಎಲೆಮರೆಕಾಯಿಯಂತೆ ನಾಲ್ಕು ತಲೆಮಾರಿನಿಂದ ನಾಟಿ ವೈದ್ಯರ ಕುಟುಂಬವೊಂದು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ.

ಗದಗ: ಯಾವುದೇ ಫಲಾಪೇಕ್ಷೆ, ಪ್ರಚಾರ ಬಯಸದೆ ಎಲೆಮರೆಕಾಯಿಯಂತೆ ನಾಲ್ಕು ತಲೆಮಾರಿನಿಂದ ನಾಟಿ ವೈದ್ಯರ ಕುಟುಂಬವೊಂದು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ.

ಗ್ರಾಮದ ಹಳ್ಳಿಕೇರಿ ಕುಟುಂಬದ ನಾಟಿ ವೈದ್ಯರಾದ ಶಿವಪುತ್ರಪ್ಪ ಹಳ್ಳಿಕೇರಿ ಹಾಗೂ ಅವರ ಸುಪುತ್ರ ಯಲ್ಲಪ್ಪ ಹಳ್ಳಿಕೇರಿ ಕುಟುಂಬದವರು ಹಿರಿಯರಿಂದ ಬಂದ ನಾಟಿ ವೈದ್ಯ ಪದ್ಧತಿಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಇವರು ಚರ್ಮರೋಗ, ಇಸುಬು, ಗಜಕರ್ಣ, ಗಾಯ, ಹಳೆಹುಣ್ಣಿಗೆ ಸೂಕ್ತ ಚಿಕಿತ್ಸೆ ನೀಡಿ ಹಲವರನ್ನು ಗುಣಮುಖ ಮಾಡಿದ್ದಾರೆ.

ದೇಹದ ಯಾವುದೇ ಭಾಗದ ಚರ್ಮರೋಗ, ಗಾಯ, ಹಳೆಹುಣ್ಣನ್ನು ಕೇವಲ ಮೂರ್ನಾಲ್ಕು ವಾರಗಳಲ್ಲಿ ಸರಳ ಚಿಕಿತ್ಸೆಯಿಂದ ಗುಣಮುಖರನ್ನಾಗಿ ಮಾಡುವ ಈ ಚಮತ್ಕಾರಿ ನಾಟಿ ವೈದ್ಯರ ಬಳಿ ಪ್ರತಿದಿನ ಗದಗ, ಹಾವೇರಿ, ಬಾಗಲಕೋಟೆ, ಬಾದಾಮಿ, ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ರೋಗಿಗೆ ಪ್ರಯಾಣಿಸಲು ಸಾಧ್ಯವಾಗದ ಸಂದರ್ಭದಲ್ಲಿ ಇವರೇ ರೋಗಿಯ ಬಳಿ ತೆರಳಿ ಚಿಕಿತ್ಸೆ ನೀಡಿ ಬರುತ್ತಾರೆ.

ನಾಗಸಮುದ್ರ ಗ್ರಾಮದಲ್ಲಿರುವ ಬನ್ನಿಮಹಾಂಕಾಳಿಯ ಗದ್ದುಗೆಯ ಸ್ಥಾನದಲ್ಲಿ ಜನಸೇವೆ ಎಂದು ನಾಟಿ ವೈದ್ಯಕೀಯ ಆರಂಭಿಸಿದರು. ಅದೀಗ ನಾಲ್ಕಾರು ಜಿಲ್ಲೆಗಳ ಜನ ಇವರತ್ತ ನೋಡುವಂತೆ ಮಾಡಿದೆ.

ರೋಗಿಗಳ ಬಳಿ ಇವರು ಹಣ ಪಡೆಯುವುದಿಲ್ಲ, ಏನಾದರೂ ಕೊಡಲಿಕ್ಕೆ ಬಂದರೆ ಅದನ್ನು ಬನ್ನಿಮಹಾಂಕಾಳಿ ಗದ್ದಿಗೆ ಮೇಲೆ ಹಾಕಲು ಹೇಳುತ್ತಾರೆ. ಇವರ ಸೇವೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯಲ್ಲಪ್ಪ ಹಳ್ಳಿಕೇರಿ ಮೊ.ಸಂ. ೮೭೨೨೮೮೫೨೨೧ ಅವರನ್ನು ಸಂಪರ್ಕಿಸಬಹುದಾಗಿದೆ.