ಸಾರಾಂಶ
ಅದರಂತೆ ಚುನಾವಣೆಯಲ್ಲಿ ದಾಖಲೆಯ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರೀಗ ಕೇಂದ್ರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರೂ ಆಗಿದ್ದಾರೆ. ಜೂ.೧೬ರಂದು ಮಂಡ್ಯ ನಗರಕ್ಕೂ ಆಗಮಿಸುತ್ತಿದ್ದು, ಜೆಡಿಎಸ್-ಬಿಜೆಪಿ ಕಾರ‍್ಯಕರ್ತರು ಮತ್ತು ಮಂಡ್ಯ ಜನರಿಂದ ನಾಗರಿಕ ಸನ್ಮಾನವನ್ನೂ ಸ್ವೀಕರಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಸಭಾ ಮಂಡ್ಯ ಕ್ಷೇತ್ರದ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದು ಕೇಂದ್ರ ಸಚಿವರಾದರೆ ಮಂಡಿ ಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದ ಅಭಿಯಾನಿಯೊಬ್ಬ ಮೇಲುಕೋಟೆಯಲ್ಲಿ ಗುರುವಾರ ಮಂಡಿಸೇವೆ ಮೂಲಕ ಬೆಟ್ಟವನ್ನೇರಿ ಶ್ರೀಯೋಗಾನರಸಿಂಹಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ್ದಾನೆ. ಬೆಟ್ಟದ ೪೦೦ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಮಂಡಿಗಾಲುಗಳಿಂದ ಹತ್ತಿ ಗಮನ ಸೆಳೆದಿದ್ದಾನೆ.ಮಂಡ್ಯ ತಾಲೂಕು ಚಿಕ್ಕಮಂಡ್ಯ ಗ್ರಾಮದ ಶಂಕರ್ ಎಂಬುವರ ಪುತ್ರ ಸಿ.ಎಸ್.ಲೋಕೇಶ್ ಎಂಬಾತನೇ ಮಂಡಿಸೇವೆ ಮಾಡಿ ದೇವರಿಗೆ ಹರಕೆ ತೀರಿಸಿರುವ ಎಚ್‌ಡಿಕೆ ಅಭಿಮಾನಿ. ಚುನಾವಣೆ ಪೂರ್ವದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಲಿ, ಹಾಗೆಯೇ ಕೇಂದ್ರ ಸಚಿವರೂ ಆಗಲೆಂದು ಮೇಲುಕೋಟೆಯ ಶ್ರೀ ಯೋಗಾ ನರಸಿಂಹಸ್ವಾಮಿ ದೇವರಿಗೆ ಹರಕೆ ಹೊತ್ತಿದ್ದರು.ಅದರಂತೆ ಚುನಾವಣೆಯಲ್ಲಿ ದಾಖಲೆಯ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರೀಗ ಕೇಂದ್ರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರೂ ಆಗಿದ್ದಾರೆ. ಜೂ.೧೬ರಂದು ಮಂಡ್ಯ ನಗರಕ್ಕೂ ಆಗಮಿಸುತ್ತಿದ್ದು, ಜೆಡಿಎಸ್-ಬಿಜೆಪಿ ಕಾರ‍್ಯಕರ್ತರು ಮತ್ತು ಮಂಡ್ಯ ಜನರಿಂದ ನಾಗರಿಕ ಸನ್ಮಾನವನ್ನೂ ಸ್ವೀಕರಿಸಲಿದ್ದಾರೆ.
ಹೀಗಾಗಿ ಲೋಕೇಶ್ ಅವರು ಗುರುವಾರ ಮುಂಜಾನೆಯೇ ಸ್ನೇಹಿತ ಚಂದನ್ ಜಾಕ್ ಅವರೊಂದಿಗೆ ಮಂಡ್ಯದಿಂದ ಮೇಲುಕೋಟೆಗೆ ಬೈಕ್‌ನಲ್ಲಿ ತೆರಳಿ, ಯೋಗಾನರಸಿಂಹಸ್ವಾಮಿ ಬೆಟ್ಟವನ್ನು ಮಂಡಿಗಾಲುಗಳಿಂದಲೇ ಹತ್ತಿ, ಹರಕೆ ತೀರಿಸಿದ್ದಾರೆ. ಹಾಗೆಯೇ ಎಚ್‌ಡಿಕೆ ಅವರ ಆರೋಗ್ಯ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅರ್ಚನೆ ಮಾಡಿಸಿ ಸಂಕಲ್ಪ ಮಾಡಿಸಿದ್ದಾರೆ.‘ನಾನು ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದೇನೆ. ಕಾರ‍್ಯಕ್ರಮವೊಂದಕ್ಕಾಗಿ ಮೇಲುಕೋಟೆಗೆ ಆಗಮಿಸಿದ್ದ ಸಂದರ್ಭದಲ್ಲಿ ಚುನಾವಣೆ, ಎಚ್‌ಡಿಕೆ ಗೆಲುವಿನ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೆ. ಆಗ ಎಚ್‌ಡಿಕೆ ಗೆದ್ದರೆ ಏನು ಮಾಡುತ್ತೀಯಾ? ಎಂದು ಸ್ನೇಹಿತರು ಪ್ರಶ್ನಿಸಿದರು. ತಡ ಮಾಡದೆ ನಾನು ಇದೇ ಮೇಲುಕೋಟೆಗೆ ಬಂದು ಮಂಡಿಸೇವೆ ಮೂಲಕ ಬೆಟ್ಟ ಹತ್ತಿ ದೇವರಿಗೆ ಪೂಜೆ ಸಲ್ಲಿಸುತ್ತೇನೆ ಎಂದಿದ್ದೆ. ಅದರಂತೆ ಈಗ ಕುಮಾರಣ್ಣ ಗೆದ್ದು, ಸೆಂಟ್ರಲ್ ಮಿನಿಸ್ಟರ್ ಆಗಿದ್ದಾರೆ. ಹೀಗಾಗಿ ಮಂಡಿಸೇವೆ ಮೂಲಕ ಹರಕೆ ತೀರಿಸಿದ್ದೇನೆ.’ಸಿ.ಎಸ್.ಲೋಕೇಶ್, ಎಚ್‌ಡಿಕೆ ಅಭಿಮಾನಿ, ಚಿಕ್ಕಮಂಡ್ಯ