ಸಾರಾಂಶ
ರಾಮನಗರ: ದನದ ಕೊಟ್ಟಿಗೆಗೆ ತೆರಳುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ತಾಲೂಕಿನ ಕೈಲಾಂಚ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಗ್ರಾಮದ ಚಿಕ್ಕಬೋರಯ್ಯ ಕರಡಿ ದಾಳಿಗೆ ಒಳಗಾದವರು. ಚಿಕ್ಕಬೋರಯ್ಯ ಬೆಳಗಿನ ಜಾವ 4.30ರ ಸಮಯದಲ್ಲಿ ಮನೆಯ ಹಿಂಭಾಗ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯಲು ಹೋದಾಗ ಕರಡಿ ದಾಳಿ ಮಾಡಿ ತಲೆ ಭಾಗಕ್ಕೆ ತೀವ್ರ ಹಾನಿ ಮಾಡಿದೆ. ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟು ಚಿಕ್ಕಬೋರಯ್ಯ ಕಿರುಚಾಡಿದ್ದಾರೆ. ಅಷ್ಟರಲ್ಲಿ ಮಗ ಬಂದು ಕರಡಿ ಓಡಿಸಿದ್ದಾರೆ. ಕರಡಿ ತಲೆ ಮತ್ತು ಕತ್ತು ಭಾಗಕ್ಕೆ ಬಲವಾಗಿ ಪರಚಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಚಿಕ್ಕಬೋರಯ್ಯ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಚಿಕ್ಕಬೋರಯ್ಯನವರ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು. ಅಲ್ಲದೆ, ಗಾಯಾಳುವಿನ ಚಿಕಿತ್ಸಾ ವೆಚ್ಚವನ್ನು ಇಲಾಖೆ ನಿಯಮಾನುಸಾರ ಭರಿಸುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಡಿಎಫ್‌ಓ ರಾಮಕೃಷ್ಣಪ್ಪ ಗಾಯಾಳು ಕುಟುಂಬದವರಿಗೆ ಭರವಸೆ ನೀಡಿದರು.
ಸಂಗಬಸವನದೊಡ್ಡಿಯಲ್ಲಿ ಎರಡು ಕರಡಿಗಳು ಪ್ರತ್ಯಕ್ಷ :ರಾಮನಗರ: ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ಎರಡು ಕರಡಿಗಳು ಪ್ರತ್ಯಕ್ಷಗೊಂಡಿರುವುದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಆಹಾರ ಅರಸಿ ಗುಡ್ಡದಿಂದ ಗ್ರಾಮಕ್ಕೆ ಆಗಮಿಸಿರುವ ಎರಡು ಕರಡಿಗಳು ಹಳ್ಳಿಕಟ್ಟೆ ಬಳಿ ಓಡಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೂಡಲೇ ಕರಡಿಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.