ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕು ಕಚೇರಿಯಲ್ಲಿ ಹೊರಗುತ್ತಿಗೆ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಕೆಲಸ ತೊರೆದು, ತಂದೆ ಮಾಡುತ್ತಿದ್ದ ಕೃಷಿ ಕಾಯಕವನ್ನೇ ಮುಂದುವರೆಸಿದ್ದಾನೆ. ಇದೀಗ ಬೀನ್ಸ್‌ಗೆ ಬಂಗಾರದ ಬೆಲೆ ಬಂದಿದ್ದು ತನ್ನ 3 ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದು ಲಕ್ಷ ಲಕ್ಷ ಗಳಿಸಿದ್ದಾರೆ. 3 ಎಕರೆ ಬೀನ್ಸ್ನಿಂದ 17 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದ್ದಾರೆ ಎನ್ನಲಾಗಿದೆ.ಬರದ ನಡುವೆಯೂ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಯುವ ರೈತ ಗಿರೀಶ್, ಬಳ್ಳಿ ಹುರಳಿಕಾಯಿ (ಬೀನ್ಸ್) ಬೆಳೆ ಬೆಳೆದು ಬಂಪರ್ ಲಾಭ ಮಾಡಿ ಸುದ್ದಿಯಾಗಿದ್ದಾರೆ. ಬಿಸಿಲಿನಿಂದಾಗಿ ಬೀನ್ಸ್ ಕೊರತೆ
ಬಿಸಿಲಿನ ತಾಪದಿಂದಾಗಿ ರಾಜ್ಯದಲ್ಲಿ ಎಲ್ಲಿಯೂ ಬೀನ್ಸ್ ಬೆಳೆಯಲು ಸಾಧ್ಯವಾಗಿಲ್ಲ. ಹಲವು ಕಡೆ ಬಿಸಿಲಿಗೆ ಹೂ ಬಾಡಿ ಉದುರಿ ಹೋಗಿದೆ. ಇದರಿಂದ ಹುರುಳಿಕಾಯಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಒಂದು ಕೆ.ಜಿ. ಬೀನ್ಸ್ ಇನ್ನೂರು ರುಪಾಯಿಗೆ ಮಾರಾಟವಾಗುತ್ತಿದೆ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗ ಬೀನ್ಸ್ ಅನ್ನು ದುರ್ಬೀನು ಹಾಕಿ ಹುಡುಕುವಂತಾಗಿದೆ.ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಗಿರೀಶ್, ಬಿ.ಎ. ಪದವಿ ಮುಗಿಸಿ ತಾಲೂಕು ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಸೇರಿಕೊಂಡಿದ್ದರು. ಬರುವ 15 ಸಾವಿರ ಸಂಬಳ ಸಾಕಾಗುತ್ತಿರಲಿಲ್ಲ. ಇದರಿಂದ ಕೆಲಸ ಬಿಟ್ಟು ಊರಿಗೆ ಬಂದು ತಂದೆ ಕೃಷಿ ಮಾಡುತ್ತಿದ್ದ 8 ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ಆರ್ಕಾಟ್ ಬಳ್ಳಿ ಬೀನ್ಸ್ ಬೀಜ ನಾಟಿ ಮಾಡಿದ್ದರು. ಉಳಿದ 2 ಎಕರೆಯಲ್ಲಿ ರೋಜಾಹೂವು ಬೆಳೆದಿದ್ದಾರೆ.
ಕಷ್ಟಪಟ್ಟು ಬೆಳೆ ರಕ್ಷಣೆಬಿಸಿಲಿನಿಂದಾಗ ರೈತರು ಬೀನ್ಸ್ ಬೆಳೆಯಲು ಹಿಂದೇಟು ಹಾಕಿದ್ದರು. ಕೇಲವರು ಬೆಳೆದ ಬೀನ್ಸ್ ಬೆಳೆ ಮೊಳಕೆಯಲ್ಲೇ ಕಮರಿತ್ತು. ಇದೆಲ್ಲ ಗೊತ್ತಿದ್ದರೂ ಗಿರೀಶ್, ತನ್ನ ಕುಟುಂಬದ ಸದಸ್ಯರೊಂದಿಗೆ ಹಗಲು-ರಾತ್ರಿ ಕಷ್ಟಪಟ್ಟು 3 ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದಾರೆ. ಕರೆಂಟ್ ಸಮಸ್ಯೆ ಇದ್ದರೂ ಜನರೇಟರ್ ಇಟ್ಟು ಬೋರ್‌ವೆಲ್ ಮೂಲಕ ತೋಟಕ್ಕೆ ನೀರು ಹಾಯಿಸಿ ಬೆಳೆ ರಕ್ಷಿಸಿಕೊಂಡು ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ.
ಇದೀಗ ತಾನು ಬೆಳೆದ ಬೆಳೆಗೆ ಬಂಗಾರದಂತಹ ಬೆಲೆ ಬಂದಿದ್ದು ಎರಡು ಟನ್ ಹುರಳಿಗೆ ಬರೋಬ್ಬರಿ ಇಪ್ಪತ್ತು ಲಕ್ಷ ಗಳಿಸಿ ಬಂಪರ್ ಲಾಟರಿ ಹೊಡೆದಿದ್ದಾರೆ. ಬರದ ನಡುವೆಯೂ ಬೀನ್ಸ್ ಬೆಳೆದ ರೈತನಿಗೆ ಬಂಪರ್ ಲಾಭ ಬಂದಿದ್ದು ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.