ಮುಂಗಾರು ಮುಗಿಸಿ ಹಿಂಗಾರಿಗೆ ಸಜ್ಜಾದ ರೈತ!

| Published : Oct 09 2025, 02:01 AM IST

ಸಾರಾಂಶ

ಮುಂಗಾರಿನಲ್ಲಿ ಅತಿವೃಷ್ಟಿಯಿಂದ ರೈತರು ತುಸು ಬೇಸತ್ತಿದ್ದರೂ ಇದೀಗ ಹಿಂಗಾರು ಹಂಗಾಮಿಗೆ ಸಜ್ಜಾಗಿದ್ದಾರೆ. ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಅಷ್ಟೋ ಇಷ್ಟೋ ಬೆಳೆ ತೆಗೆದ ರೈತರು, ಹಿಂಗಾರು ಬೆಳೆಗಳ ಮೇಲೆ ಅಪಾರ ನಿರೀಕ್ಷೆಯಿಂದ ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ.

ಧಾರವಾಡ:

ಮುಂಗಾರಿನಲ್ಲಿ ಅತಿವೃಷ್ಟಿಯಿಂದ ರೈತರು ತುಸು ಬೇಸತ್ತಿದ್ದರೂ ಇದೀಗ ಹಿಂಗಾರು ಹಂಗಾಮಿಗೆ ಸಜ್ಜಾಗಿದ್ದಾರೆ. ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಅಷ್ಟೋ ಇಷ್ಟೋ ಬೆಳೆ ತೆಗೆದ ರೈತರು, ಹಿಂಗಾರು ಬೆಳೆಗಳ ಮೇಲೆ ಅಪಾರ ನಿರೀಕ್ಷೆಯಿಂದ ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ.

ಇನ್ನೇನು ಮಳೆ ಅಬ್ಬರ ಕಡಿಮೆಯಾಗಿದ್ದು ಬಿಸಿಲು ವಾತಾವರಣ ಬೀಳುವ ತಡವೇ ಹಿಂಗಾರು ಬಿತ್ತನೆಗೆ ರೈತರು ಕಾರ್ಯೋನ್ಮುಖಗೊಂಡಿದ್ದಾರೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆ 118.8 ಮಿ.ಮೀ ಪೈಕಿ ಅಧಿಕ 180.3 ಮಿ.ಮೀ ಮಳೆ ಆಗುವ ಮೂಲಕ ಶೇ.52ರಷ್ಟು ಅಧಿಕ ಮಳೆಯಾಗಿದೆ. ಇನ್ನು ಸೆಪ್ಟೆಂಬರ್‌ನಲ್ಲಿ 120 ಮಿ.ಮೀ ವಾಡಿಕೆ ಮಳೆ ಪೈಕಿ 92.4 ಮಿ.ಮಿಯಷ್ಟೇ ಮಳೆಯಾಗಿದೆ. ಇದಲ್ಲದೇ ಅ. 1ರಿಂದ 3ರ ವರೆಗೆ ವಾಡಿಕೆ 17 ಮಿ.ಮೀ ವಾಡಿಕೆ ಮಳೆಯಲ್ಲಿ 5.5ರಷ್ಟು ಮಳೆಯಾಗಿದೆ. ಇದು ಮೇಲ್ನೋಟಕ್ಕೆ ಮಳೆ ಕೊರತೆ ಆಗಿದ್ದರೂ ಹಿಂಗಾರು ಬಿತ್ತನೆಗೆ ಪೂರಕ ಸೂಕ್ತ ವಾತಾವರಣವಿದೆ.

2.15 ಲಕ್ಷ ಹೆಕ್ಟೇರ್‌ ಗುರಿ:

ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಈ ಬಾರಿ 2.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ಗುರಿ ಇದೆ. ಪ್ರತಿ ಸಲದಂತೆ ಈ ಹಿಂಗಾರಿಗೂ ಕಡಲೆಯೇ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಒಟ್ಟು ಬಿತ್ತನೆಯ ಪೈಕಿ ಶೇ. 55ರಷ್ಟು ಕಡಲೆ ಅಂದರೆ 1. 22 ಲಕ್ಷ ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ನವಲಗುಂದದಲ್ಲಿಯೇ ಅತೀ ಹೆಚ್ಚು 32,100 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಸಾಧ್ಯತೆ ಇದೆ. ಇನ್ನುಳಿದಂತೆ ಧಾರವಾಡ ಗ್ರಾಮೀಣದಲ್ಲಿ 28,750 ಹೆಕ್ಟೇರ್‌, ಅಣ್ಣಿಗೇರಿಯಲ್ಲಿ 22,000 ಹೆಕ್ಟೇರ್‌, ಕುಂದಗೋಳದಲ್ಲಿ 17,500 ಹೆಕ್ಟೇರ್, ಹುಬ್ಬಳ್ಳಿ ಗ್ರಾಮೀಣದಲ್ಲಿ 17,750 ಹೆಕ್ಟೇರ್‌, ಹುಬ್ಬಳ್ಳಿ ಶಹರ ಭಾಗದಲ್ಲಿ 3850 ಹೆಕ್ಟೇರ್‌ ಹಾಗೂ ಕಲಘಟಗಿಯಲ್ಲಿ 50 ಹೆಕ್ಟೇರ್‌ ಗುರಿಯಿದೆ.

ಇನ್ನುಳಿದಂತೆ ಜೋಳ 40,000 ಹೆಕ್ಟೇರ್‌, ಗೋಧಿ 1800 ಹೆಕ್ಟೇರ್‌, ಮುಸುಕಿನ ಜೋಳ 8225 ಹೆಕ್ಟೇರ್‌, ಹೆಸರು 6680 ಹೆಕ್ಟೇರ್‌, ಕುಸುಬೆ 5000 ಹೆಕ್ಟೇರ್‌, ಹುರುಳಿ 4385 ಹೆಕ್ಟೇರ್, ಸೋಯಾಅವರೆ 4000 ಹೆಕ್ಟೇರ್, ಸೂರ್ಯಕಾಂತಿ 3500 ಹೆಕ್ಟೇರ್‌, ಮಡಿಕೆ 1005 ಹೆಕ್ಟೇರ್, ಸಾವೆ 1000 ಹೆಕ್ಟೇರ್, ಹತ್ತಿ 1000 ಹೆಕ್ಟೇರ್, ಶೇಂಗಾ 650 ಹೆಕ್ಟೇರ್, ಆಲಸಂಧಿ 150 ಹೆಕ್ಟೇರ್‌, ಅವರೆ 70 ಹೆಕ್ಟೇರ್, ಉದ್ದು 60 ಹೆಕ್ಟೇರ್‌ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.

ಜೋರು ಪಡೆದ ಬಿತ್ತನೆ:

ವಾಡಿಕೆಯಂತೆ ಸೀಗೆ ಹುಣ್ಣಿಮೆಯ ಹೊತ್ತಿಗೆ ಬೆಳೆಗಳು ಮೊಳಕೆಯೊಡೆಯಬೇಕು. ಆದರೆ, ಈ ಬಾರಿ ಭೂಮಿಯಲ್ಲಿ ತೇವಾಂಶ ಹೆಚ್ಚಿರುವ ಕಾರಣ ಬಿತ್ತನೆ ಕಾರ್ಯ ತುಸು ವಿಳಂಬವಾಗಿದ್ದು, ಸೀಗೆ ಹುಣ್ಣಿಮೆಯ ನಂತರ ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ಜೋರು ಪಡೆದಿದೆ. ಸಾಮಾನ್ಯವಾಗಿ ಹಸ್ತಾ ನಕ್ಷತ್ರದ ಅವಧಿಯೊಳಗೆ ಬಹುತೇಕ ಹಿಂಗಾರು ಬಿತ್ತನೆ ಕಾರ್ಯ ಮುಗಿಯುತ್ತದೆ. ಆದರೆ, ಈ ಸಲ ಹಸ್ತಾ ನಕ್ಷತ್ರದ ಅವಧಿಯಲ್ಲಿಯೇ ಭೂಮಿ ಹದವಿಲ್ಲದ ಕಾರಣ ಚಿತ್ತಾ ನಕ್ಷತ್ರದೊಳಗೆ ಬಿತ್ತನೆ ಕಾರ್ಯ ಮುಗಿಯುವ ಲಕ್ಷಣವಿದೆ. ಸದ್ಯ ಹಸ್ತಾ ನಕ್ಷತ್ರ ಸೆ. 27ರಿಂದ ಆರಂಭಗೊಂಡಿದ್ದು ಅ. 9ರ ವರೆಗೆ ಇದೆ. ಇದಾದ ಬಳಿಕ ಚಿತ್ತಾ ನಕ್ಷತ್ರ ಆರಂಭಗೊಳ್ಳಲಿದ್ದು, ಅ. 24ರ ವರೆಗೆ ಇದ್ದು, ದೀಪಾವಳಿ ವರೆಗೂ ಬಿತ್ತನೆ ಕಾರ್ಯ ಮುಗಿಯುವ ಸಾಧ್ಯತೆಗಳಿವೆ ಎಂದು ಕೃಷಿ ತಜ್ಞರು ಅಂದಾಜು ವ್ಯಕ್ತಪಡಿಸಿದರು.

ಈ ಬಾರಿ ಹಿಂಗಾರು ಬಿತ್ತನೆಯ ಚಟುವಟಿಕೆಗಳು ತುಸು ತಡವಾದರೂ ಒಂದು ವಾರದಿಂದ ಜೋರು ಪಡೆದಿದೆ. 2.15 ಲಕ್ಷ ಹೆಕ್ಟೇರ್‌ ಗುರಿ ಪೈಕಿ ಈಗಾಗಲೇ ಬಹುತೇಕ ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಖರೀದಿಸಿ ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಇಷ್ಟಾಗಿಯೂ ಧಾರವಾಡ ತಾಲೂಕಿನಲ್ಲಿ 2150 ಕ್ವಿಂಟಲ್‌ ಕಡಲೆ ಹಾಗೂ 28 ಕ್ವಿಂಟಲ್‌ ಜೋಳ ಸಂಗ್ರಹ ಇದೆ. ದೀಪಾವಳಿ ವರೆಗೆ ಬಹುತೇಕ ಸಂಪೂರ್ಣ ಬಿತ್ತನೆ ಕಾರ್ಯ ಮುಗಿಯುವ ಸಾಧ್ಯತೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಶೇಖ ಅಣಗೌಡರ ಮಾಹಿತಿ ನೀಡಿದರು.