ತೋಟಕ್ಕೆ ನೀರು ಬಿಡಲು ಹೋಗುತ್ತಿದ್ದ ರೈತನ ತುಳಿದು ಕೊಂದ ಕಾಡಾನೆ

| Published : Apr 01 2024, 12:46 AM IST

ಸಾರಾಂಶ

ಸ್ಕೂಟಿಯಲ್ಲಿ ಹೋಗುತ್ತಿದ್ದ ರೈತನನ್ನು ಎದುರಿನಿಂದ ಬಂದ ಕಾಡಾನೆ ತುಳಿದು ಸಾಯಿಸಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ತೋಟಕ್ಕೆ ಮೋಟಾರ್ ಚಲಾಯಿಸಲು ಸ್ಕೂಟಿಯಲ್ಲಿ ಹೋಗುತ್ತಿದ್ದ ರೈತನನ್ನು ಎದುರಿನಿಂದ ಬಂದ ಕಾಡಾನೆ ತುಳಿದು ಸಾಯಿಸಿದ ಘಟನೆ ಭಾನುವಾರ ಬೆಳಗ್ಗೆ ಹೊಸಗುತ್ತಿ ಗ್ರಾಮದಲ್ಲಿ ನಡೆದಿದೆ.

ಹೊಸಗುತ್ತಿ ಗ್ರಾಮದ ಎಚ್.ಆರ್.ಜಗದೀಶ್ ಅಲಿಯಾಸ್ ಕಾಂತ (49) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಭಾನುವಾರ ಬೆಳಗ್ಗೆ 6.15ರ ಸುಮಾರಿಗೆ ಜಗದೀಶ್, ತಮ್ಮ ಮನೆಯಿಂದ ಸ್ಕೂಟಿಯಲ್ಲಿ ಹೊಸಗುತ್ತಿ-ಹೊನ್ನೆಕೊಪ್ಪಲು-ಮುಳ್ಳೂರು ಕಡೆಗೆ ಹೋಗುವ ರಸ್ತೆ ಬದಿಯಲ್ಲಿರುವ ತನ್ನ ಕಾಫಿತೋಟಕ್ಕೆ ನೀರು ಹಾಯಿಸುವ ಸಲುವಾಗಿ ಮೋಟರ್ ಆನ್ ಮಾಡಲು ಹೋಗುತ್ತಿದ್ದರು. ತೋಟದ ಬಳಿ ಸ್ಕೂಟರ್ ನಿಲ್ಲಿಸುತ್ತಿದ್ದ ವೇಳೆ ಎದುರಿನಿಂದ ರಸ್ತೆಯಲ್ಲಿ ಬರುತ್ತಿದ್ದ ಕಾಡಾನೆಯನ್ನು ಕಂಡು ಗಾಬರಿಗೊಂಡ ಜಗದೀಶ್, ಸ್ಕೂಟರ್ ಅಲ್ಲೇ ಬಿಟ್ಟು ರಸ್ತೆಯಲ್ಲಿ ಓಡತೊಡಗಿದರು.

ರಸ್ತೆಯ ಎರಡೂ ಬದಿಗಳಲ್ಲಿ ತೋಟಗಳಿದ್ದ ಕಾರಣದಿಂದ ಜಗದೀಶ್ ಹೆಚ್ಚು ದೂರ ಓಡಲು ಸಾಧ್ಯವಾಗಲಿಲ್ಲ. ಸುಮಾರು 40 ಅಡಿಯಷ್ಟು ಅಂತರದಲ್ಲಿ ಜಗದೀಶ್ ಅವರನ್ನು ಅಟ್ಟಾಡಿಸಿಕೊಂಡು ಬರುತ್ತಿದ್ದ ಕಾಡಾನೆ, ಸೊಂಡಿಲಿನಿಂದ ಹಿಡಿದು ನೆಲಕ್ಕೆ ಅಪ್ಪಳಿಸಿ ಜಗದೀಶ್ ಅವರ ತೊಡೆಯನ್ನು ತುಳಿದು ಹಾಕಿದೆ. ಕಾಡಾನೆ ದಾಳಿಯಿಂದ ಜಗದೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಗದೀಶ್ ಅವರನ್ನು ತುಳಿದು ಸಾಯಿಸಿದ ಕಾಡಾನೆ ಪಕ್ಕದ ತೋಟದೊಳಗೆ ಓಡಿ ಹೋಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದರು.

ಈ ಕಾಡಾನೆ ಬೆಳಗ್ಗೆ 6 ಗಂಟೆ ಸುಮಾರಿಗೆ ಹೊನ್ನೆಕೊಪ್ಪಲು ಬಳಿ ಕಾಣಿಸಿಕೊಂಡಿದನ್ನು ಗಮನಿಸಿದ ಗ್ರಾಮಸ್ಥರು, ಕಾಡಾನೆಯನ್ನು ಓಡಿಸಿದ್ದಾರೆ. ಇದೇ ಕಾಡಾನೆ ರಸ್ತೆಯಲ್ಲಿ ಸಂಚರಿಸುತಿತ್ತು ಎಂದು ಸ್ಥಳೀಯರು ಹೇಳಿದರು.

ಸ್ಥಳೀಯರ ಆಕ್ರೋಶ: ಕಾಡಾನೆ ದಾಳಿಯ ಬಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು, ಅಕ್ಕ ಪಕ್ಕದ ಗ್ರಾಮಸ್ಥರು, ರೈತರು ತಂಡೋಪ ತಂಡವಾಗಿ ಸ್ಥಳಕ್ಕೆ ಬಂದು ಜಮಾಯಿಸಿದರು. ಮಾಹಿತಿ ತಿಳಿದ ಶನಿವಾರಸಂತೆ ಆರ್‌ಎಫ್‍ಒ ಗಾನಶ್ರೀ, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಶನಿವಾರಸಂತೆ ಸುತ್ತಮುತ್ತ ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯ ಬೀಳಿಸುತ್ತಿವೆ, ಹೀಗಿದ್ದರೂ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಓಡಿಸುತ್ತಿಲ್ಲ ಮತ್ತು ನಮ್ಮ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಕಾಟ ಇದೆ. ಕಾಡು ಪ್ರಾಣಿಗಳಿಂದ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳಲು ಕೆಲವು ರೈತರ ಬಳಿ ಕೋವಿ ಇದ್ದರೂ ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಠೇವಣಿ ಇಟ್ಟುಕೊಂಡಿದ್ದಾರೆ. ನಮಗೆ ಠೇವಣಿ ಮಾಡಿಕೊಂಡಿರುವ ರೈತರ ಕೋವಿಗಳನ್ನು ವಾಪಾಸು ಕೊಡಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಾಡಾನೆ ದಾಳಿಗೆ ಬಲಿಯಾದ ಸಂಸಾರಕ್ಕೆ ಸ್ಥಳದಲ್ಲೇ ಸೂಕ್ತ ಪರಿಹಾರ ಕೊಡಬೇಕು, ದಾಳಿಗೆ ಬಲಿಯಾದ ಜಗದೀಶ್ ಪತ್ನಿಗೆ ಮಾಶಾಸನ ಕೊಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.ಸ್ಥಳಕ್ಕೆ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಉಪ ಅರಣ್ಯ ಸಂರಕ್ಷಾಧಿಕಾರಿ ಭಾಸ್ಕರ್, ಎಸಿಎಫ್ ಗೋಪಾಲ್, ಕುಶಾಲನಗರ ಡಿವೈಎಸ್‍ಪಿ ಗಂಗಾಧರಪ್ಪ ಭೇಟಿ ನೀಡಿದರು.

ಗ್ರಾಮಸ್ಥರ ಬೇಡಿಕೆಗೆ ಡಿಎಫ್‍ಒ ಸ್ಪಂದಿಸಿದರು. ಕಾಡಾನೆ ದಾಳಿಯಿಂದ ಮೃತಪಟ್ಟ ಜಗದೀಶ್ ಅವರ ಹಿರಿಯ ಪುತ್ರಿಗೆ ಅರಣ್ಯ ಇಲಾಖೆಯಿಂದ 15 ಲಕ್ಷ ರು. ಪರಿಹಾರದ ಚೆಕ್ ಅನ್ನು ಡಿಎಫ್‍ಒ ಭಾಸ್ಕರ್ ಮತ್ತು ಶಾಸಕ ಮಂತರ್ ಗೌಡ ಸ್ಥಳದಲ್ಲೇ ವಿತರಿಸಿದರು.

ಮೃತನ ಪತ್ನಿಗೆ ಪ್ರತಿ ತಿಂಗಳು ಮಾಸಿಕ 4 ಸಾವಿರ ರು. ಮಾಶಾಸನ ನೀಡುವ ಕುರಿತಾದ ದಾಖಲೆಗಳನ್ನು ಸ್ಥಳದಲ್ಲೇ ಅಧಿಕಾರಿಗಳು ತಯಾರಿಸಿದರು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ಗಮನಹರಿಸಲಾಗುವುದೆಂದು ಶಾಸಕ ಡಾ.ಮಂತರ್ ಗೌಡ ಆಶ್ವಾಸನೆ ನೀಡಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.