ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ರೈತ ಮುತ್ತಪ್ಪ ಹಗೇದಾಳ ಅವರು ಒಣಗುತ್ತಿರುವ ಬೆಳೆ ನೋಡಲಾಗದೆ ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಮಾರುಕಟ್ಟೆಯಲ್ಲಿ ಬಿಳಿಜೋಳಕ್ಕೆ ಕ್ವಿಂಟಲ್‌ಗೆ ₹8ರಿಂದ 10 ಸಾವಿರದ ವರೆಗೆ ಬೆಲೆ ಇದೆ. ಆದರೆ, ಬೆಳೆಯ ಕೈಹಿಡಿಯಬೇಕಾದ ಮಳೆ ಮಾತ್ರ ಕೈಕೊಟ್ಟಿದೆ. ಕಣ್ಣೆದುರೇ ಒಣಗುತ್ತಿರುವ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಖರೀದಿಸಿ ಜಮೀನಿಗೆ ಹಾಯಿಸುವ ಅನಿವಾರ್ಯತೆ. ಲಾಭದ ಲೆಕ್ಕಾಚಾರಕ್ಕಿಂತ ಮನೆಯ ಹೊಟ್ಟೆಗೆ ಒಂದಿಷ್ಟು ಜೋಳ ಸಿಗಲಿ ಎಂಬ ರೈತನ ಹಂಬಲ ಈಗ ಬರದ ಬವಣೆಯ ನಡುವೆ ಅನಾವರಣಗೊಂಡಿದೆ.

ಇದು ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ರೈತ ಮುತ್ತಪ್ಪ ಹಗೇದಾಳ ಅವರ ಸಂಕಷ್ಟದ ಚಿತ್ರಣ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬಿಳಿಜೋಳ ಮಳೆಯಿಲ್ಲದೆ ಒಣಗುತ್ತಿರುವುದನ್ನು ಕಂಡು ಸಹಿಸಲಾಗದೆ ದುಬಾರಿ ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಮಳೆಯಾಶ್ರಿತ ಕೃಷಿಯನ್ನೇ ನಂಬಿರುವ ತಾಲೂಕಿನ ರೈತರಿಗೆ ಮಳೆ ಕೈಕೊಟ್ಟಿದ್ದರಿಂದ ಜಮೀನುಗಳಲ್ಲಿನ ಬೆಳೆಗಳು ಒಣಗುತ್ತಿವೆ. ಬಿತ್ತನೆ ಬೀಜ, ಗೊಬ್ಬರ, ಕೂಲಿ ಸೇರಿದಂತೆ ಕೃಷಿಗಾಗಿ ಈಗಾಗಲೇ ಸಾವಿರಾರು ರುಪಾಯಿ ಹೂಡಿಕೆ ಮಾಡಿರುವ ರೈತರಿಗೆ ಟ್ಯಾಂಕರ್ ನೀರಿನ ಖರ್ಚು ಮತ್ತೊಂದು ಹೊರೆಯಾಗಿದೆ. ಹಿಂದೆ ₹600ಕ್ಕೆ ಸಿಗುತ್ತಿದ್ದ ಟ್ಯಾಂಕರ್ ನೀರಿನ ದರ ಈಗ ₹1,000ಕ್ಕೆ ಏರಿಕೆಯಾಗಿದೆ. ಆದರೂ ಕೈಗೆ ಬಂದ ಬೆಳೆಯನ್ನು ಕಳೆದುಕೊಳ್ಳಬಾರದೆಂಬ ಹಂಬಲದಿಂದ ರೈತರು ಸಾಲ ಮಾಡಿ ನೀರು ಖರೀದಿಸುತ್ತಿದ್ದಾರೆ.

ಉತ್ತಮ ಬೆಲೆ; ಬೆಳೆಯುವವರೇ ಕಡಿಮೆ!: ಬಿಳಿಜೋಳಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದ್ದರೂ ಅದರ ಕೃಷಿ ಕ್ಷೇತ್ರ ಮಾತ್ರ ಕುಸಿಯುತ್ತಿದೆ. ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿರುವುದರಿಂದ ಬಿಳಿಜೋಳ, ಸಜ್ಜೆಯಂತಹ ಸಾಂಪ್ರದಾಯಿಕ ಆಹಾರ ಧಾನ್ಯಗಳ ಕೃಷಿಗೆ ಹಿನ್ನಡೆಯಾಗುತ್ತಿದೆ.

ಒಂದು ಕಾಲದಲ್ಲಿ ಮನೆಯ ಆಹಾರದ ಪ್ರಮುಖ ಆಧಾರವಾಗಿದ್ದ ಬಿಳಿಜೋಳ ಈಗ ನೀರಿನ ಲಭ್ಯತೆ, ಕೃಷಿ ವೆಚ್ಚ ಮತ್ತು ಮಾರುಕಟ್ಟೆಯ ಲೆಕ್ಕಾಚಾರದಲ್ಲಿ ಸಿಲುಕಿದೆ. ಬೆಲೆ ಇದ್ದರೂ ನೀರಿಲ್ಲದೆ ಬೆಳೆ ಉಳಿಸಿಕೊಳ್ಳಲಾಗದ ಸ್ಥಿತಿ ರೈತರನ್ನು ಕಾಡುತ್ತಿದೆ. ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡುವ ಭರಾಟೆಯಲ್ಲಿ ಸ್ವಂತ ಆಹಾರದ ಅಗತ್ಯಕ್ಕಾಗಿ ಬೆಳೆಯುತ್ತಿದ್ದ ಧಾನ್ಯಗಳ ಕೃಷಿಯೂ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

2,350 ಹೆಕ್ಟೇರ್ ಬಿತ್ತನೆ: ಕುಷ್ಟಗಿ ತಾಲೂಕಿನಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ 13,200 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಈ ವರೆಗೆ ಕೇವಲ 2,350 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆಯ ಕೊರತೆ ಹಾಗೂ ವಾಣಿಜ್ಯ ಬೆಳೆಗಳತ್ತ ರೈತರ ಒಲವು ಹೆಚ್ಚುತ್ತಿರುವುದು ಆಹಾರ ಧಾನ್ಯಗಳ ಕೃಷಿಯ ಮೇಲೆ ಪರಿಣಾಮ ಬೀರಿದೆ.

ಆಹಾರ ಭದ್ರತೆಯ ಆತಂಕ: ಆಹಾರ ಧಾನ್ಯಗಳ ಉತ್ಪಾದನೆ ಕುಸಿದರೆ ಮುಂದಿನ ದಿನಗಳಲ್ಲಿ ಸ್ಥಳೀಯ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಪೂರೈಸುವುದು, ನೀರು ಖರೀದಿಸುವ ರೈತರಿಗೆ ಸಹಾಯಧನ ನೀಡುವುದು ಹಾಗೂ ಬಿಳಿಜೋಳ, ಸಜ್ಜೆಯಂತಹ ಸಾಂಪ್ರದಾಯಿಕ ಬೆಳೆಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಅಗತ್ಯವಿದೆ. ರೈತ ತನ್ನ ಹೊಟ್ಟೆಗಾಗಿ ಬೆಳೆಯುವ ಧಾನ್ಯವೇ ಸಮಾಜದ ಆಹಾರ ಭದ್ರತೆಯ ಆಧಾರ ಎಂಬುದನ್ನು ಸರ್ಕಾರ ಮನಗಾಣಬೇಕಿದೆ.

ಹೊಟ್ಟೆಗೆ ಜೋಳ ಇರಲಿ ಎಂಬ ಹಂಬಲ!: ಟಕ್ಕಳಕಿ ಗ್ರಾಮದ ರೈತ ಮುತ್ತಪ್ಪ ಹಗೇದಾಳ ಅವರು ಬೆಳೆದ ಬಿಳಿಜೋಳ ಮಳೆಯಿಲ್ಲದೆ ಒಣಗುತ್ತಿದೆ. ಇದನ್ನು ನೋಡಲಾಗದೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಕೇವಲ ಲಾಭದ ಉದ್ದೇಶದಿಂದಲ್ಲ, ಮುಂದಿನ ದಿನಗಳಲ್ಲಿ ಮನೆಯ ಆಹಾರದ ಅಗತ್ಯಕ್ಕೆ ಜೋಳ ಇರಬೇಕು ಎಂಬ ಕಾರಣಕ್ಕೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಬೆಳೆ ಒಣಗುತ್ತಿದೆ:‌ ಈಗ ಬಿಳಿಜೋಳ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ. ನಾನು ಬೆಳೆದ ಜೋಳ ಮಳೆಯಿಲ್ಲದೆ ಒಣಗುತ್ತಿದೆ. ಇದನ್ನು ನೋಡಲಾಗದೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದೇನೆ. ಬಿಳಿಜೋಳಕ್ಕೆ ಕ್ವಿಂಟಲ್‌ಗೆ ₹8 ಸಾವಿರಕ್ಕೂ ಹೆಚ್ಚು ಬೆಲೆ ಇದ್ದರೂ, ಮುಂದಿನ ದಿನಗಳಲ್ಲಿ ನಮ್ಮ ಹೊಟ್ಟೆಗೆ ಊಟ ಮಾಡಲು ಜೋಳ ಇರಬೇಕು ಎಂಬ ಉದ್ದೇಶದಿಂದ ಬೆಳೆ ಉಳಿಸಿಕೊಳ್ಳುತ್ತಿದ್ದೇನೆ. ರೈತರು ವಾಣಿಜ್ಯ ಬೆಳೆಗಳ ಜತೆಗೆ ಬಿಳಿಜೋಳ, ಸಜ್ಜೆಯಂತಹ ಆಹಾರ ಧಾನ್ಯಗಳನ್ನೂ ಬೆಳೆಯಬೇಕು ಎಂದು ಟಕ್ಕಳಕಿ ರೈತ ಮುತ್ತಪ್ಪ ಹಗೇದಾಳ ಹೇಳಿದರು.

ಸಹಾಯಧನ ನೀಡಬೇಕು:‌ ಬರಗಾಲದಲ್ಲಿ ರೈತರು ಸ್ವಂತ ಹಣ ಖರ್ಚು ಮಾಡಿ ಟ್ಯಾಂಕರ್ ನೀರು ಖರೀದಿಸುವುದು ಕಷ್ಟಕರವಾಗಿದೆ. ₹600 ಇದ್ದ ಟ್ಯಾಂಕರ್ ನೀರಿನ ದರ ₹1,000ಕ್ಕೆ ಏರಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಸರ್ಕಾರ ರೈತರ ಜಮೀನುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ನೀರು ಖರೀದಿಸುವ ರೈತರಿಗೆ ಸೂಕ್ತ ಸಹಾಯಧನ ನೀಡಿ ಬೆಳೆ ಉಳಿಸಿಕೊಳ್ಳಲು ನೆರವಾಗಬೇಕು ಎಂದು ಕುಷ್ಟಗಿ ರೈತ ಮುಖಂಡ ನಜೀರಸಾಬ ಮೂಲಿಮನಿ ಹೇಳಿದರು.