ಸಾರಾಂಶ
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದ ನಂತರ ಇದೇ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸುತ್ತಿರುವ ಎಚ್ಡಿಕೆ ಅವರ ಸ್ವಾಗತಕ್ಕೆ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಕಲ ಸಿದ್ಧತೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಂಡ್ಯ ಸಂಸದ ಹಾಗೂ ಕೇಂದ್ರ ಸರ್ಕಾರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜುಲೈ 21ರಂದು ಪಟ್ಟಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಅಭಿನಂದನಾ ಸಮಾರಂಭ ಬೃಹತ್ ವೇದಿಕೆಯನ್ನು ಸಿದ್ಧಗೊಳಿಸಲಾಗುತ್ತಿದ್ದು, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದ ನಂತರ ಇದೇ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸುತ್ತಿರುವ ಎಚ್ಡಿಕೆ ಅವರ ಸ್ವಾಗತಕ್ಕೆ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಕಲ ಸಿದ್ಧತೆ ನಡೆಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಪಟ್ಟಣಕ್ಕೆ ಆಗಮಿಸಲಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಟಿ.ಬಿ.ಬಡಾವಣೆಯ ಪುರಸಭೆ ಖಾಲಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಸಾವಿರಾರು ಬಿಜೆಪಿ- ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಹಿರಂಗ ಸಭೆ ನಂತರ ಭರ್ಜರಿ ಬಾಡೂಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.ಎಚ್ಡಿಕೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬಾವುಟಗಳು ಹಾರಾಡುತ್ತಿವೆ. ಕುಮಾರಣ್ಣನ ಸ್ವಾಗತದ ಫ್ಲೆಕ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ಸಮಾರಂಭಕ್ಕೆ ಸುಮಾರು 40 ಸಾವಿರಕ್ಕೂ ಅಧಿಕ ಜನರನ್ನು ಸೇರಿಸುವ ನಿರೀಕ್ಷೆಯಲ್ಲಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಕೆಲಸ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಜೊತೆಗೂಡಿ ಪ್ರತಿ ಹೋಬಳಿ ಕೇಂದ್ರಗಳಲ್ಲಿಯೂ ಈಗಾಗಲೇ ಸಭೆ ನಡೆಸಿರುವ ಶಾಸಕರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸಿ ಒಂದೇ ವೇದಿಕೆಯಡಿ ನಿಲ್ಲಿಸುತ್ತಿದ್ದಾರೆ.ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಗಳ ಮೇಲೆ ಕಣ್ಣಿಟ್ಟು ಸಂಘಟನೆಗೆ ಮತ್ತಷ್ಟು ಬಲ ನೀಡುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಆರಂಭಿಸುತ್ತಿದೆ ಎಂದು ಹೇಳಲಾಗುತ್ತಿದೆ.