ಕಳೆದ ಎರಡು ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಪುನರಾರಂಭಗೊಂಡಿದ್ದು, ಬೇಸಿಗೆ ರಜೆಯ ಖುಷಿಯಲ್ಲಿದ್ದ ಮಕ್ಕಳು ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಕಳೆದ ಎರಡು ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಪುನರಾರಂಭಗೊಂಡಿದ್ದು, ಬೇಸಿಗೆ ರಜೆಯ ಖುಷಿಯಲ್ಲಿದ್ದ ಮಕ್ಕಳು ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಿದರು. ಬೇಸಿಗೆ ರಜೆ ಬಳಿಕ ಇಂದಿನಿಂದ ಆರಂಭವಾಗುತ್ತಿರುವ ಸರ್ಕಾರಿ ಶಾಲೆಗಳನ್ನು ವಿವಿಧ ಹೂವುಗಳು, ಬಾಳೆಕಂದು ಹಾಗೂ ಮಾವಿನ ತೋರಣದಿಂದ ಸಿಂಗಾರಗೊಳಿಸಿ ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ಆಚರಿಸುವ ಮುಖೇನ ವಿದ್ಯಾರ್ಥಿಗಳನ್ನು ಗುಲಾಬಿ ಹೂ, ಸಿಹಿ ತಿಂಡಿ ನೀಡಿ ಶಾಲೆಗಳಿಗೆ ಸ್ವಾಗತಿಸಲಾಯಿತು. 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಇಂದಿನಿಂದ ಪ್ರಾರಂಭವಾಗಿದ್ದು, ಮಕ್ಕಳು ಶಾಲೆಗೆ ಬರುವ ಮೊದಲ ದಿನವಾದ ಇಂದು ಶಾಲೆಗಳಲ್ಲಿ ಸಿಹಿಯೂಟ ಸಿದ್ಧಪಡಿಸಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸಿಹಿಯೂಟ ಬಡಿಸಲಾಯಿತು. ಕಳೆದ ಎರಡು ತಿಂಗಳಿನಿಂದ ರಜೆಯ ಖುಷಿಯಲ್ಲಿದ್ದ ವಿದ್ಯಾರ್ಥಿಗಳು ಇಂದು ಶಾಲಾ ಸಮವಸ್ತ್ರದೊಂದಿಗೆ ಹೆಗಲಿಗೆ ಶಾಲಾ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ನಗರ ಹಾಗೂ ಗ್ರಾಮೀಣ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಕಂಡು ಬಂತು. ನಗರದ ಹೈಸ್ಕೂಲ್ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಅಗ್ರಹಾರ, ಮರಳೂರು ದಿಣ್ಣೆ, ಎಂ.ಜಿ. ರಸ್ತೆ. ಆರ್ಯಬಾಲಿಕಾ ಶಾಲೆ, ಮೆಳೇಕೋಟೆ, ಗಂಗಸಂದ್ರ, ಗೂಳೂರು, ಸೇರಿದಂತೆ ಜಿಲ್ಲೆಯ 10 ತಾಲೂಕುಗಳಲ್ಲೂ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣದೊಂದಿಗೆ ಶಾಲೆಗಳನ್ನು ಪ್ರಾರಂಭಿಸಲಾಯಿತು.

ಈ ಎಲ್ಲಾ ಶಾಲೆಗಳಲ್ಲಿ ಎಸ್‌ಡಿಎಂಸಿ, ಪೋಷಕರು ಹಾಗೂ ಸಹ ಶಿಕ್ಷಕರ ಸಹಯೋಗದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಶಾಲಾ ಪ್ರಾರಂಭೋತ್ಸವ ದಿನವಾದ ಇಂದು ಮಕ್ಕಳನ್ನು ಶಾಲೆಗೆ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಕರೆತಂದು ಸ್ವಾಗತಿಸುವಂತೆ ಶಿಕ್ಷಣ ಇಲಾಖೆಯ ಆದೇಶವಿದೆ. ಇದರನ್ವಯ ಮಕ್ಕಳನ್ನು ಶಿಕ್ಷಕರು ಭವ್ಯವಾಗಿ ಸ್ವಾಗತಿಸಿದರು.ಶಾಲಾ ಪ್ರಾರಂಭೋತ್ಸವದ ದಿನವಾದ ಇಂದೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಸಹ ವಿತರಿಸಲಾಯಿತು. ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು, ನವೋದಯ ವಿದ್ಯಾಲಯ ಸೇರಿದಂತೆ ಬಹತೇಕ ಶಾಲೆಗಳಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳನ್ನು ಶಾಲೆಗಳಿಗೆ ಬರ ಮಾಡಿಕೊಳ್ಳಲಾಯಿತು.