ಸಾರಾಂಶ
ಕೊಪ್ಪಳ:
ಜಿಲ್ಲಾದ್ಯಂತ ಪ್ರಸಕ್ತ ವರ್ಷ 1780 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರೆ, ಮನೆಯಲ್ಲಿಯೂ ಸಾವಿರಾರು ಸಂಖ್ಯೆಯಲ್ಲೂ ವಿಘ್ನ ನಿವಾರಕನನ್ನು ಪೂಜಿಸಲಾಗಿದೆ. ಸಿಡಿಮದ್ದುಗಳ ಸದ್ದು, ಡಿಜಿ ಅಬ್ಬರ ನಡುವೆ ಗಣೇಶ ಮೂರ್ತಿಯನ್ನು ಬುಧವಾರ ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ.ಕೊಪ್ಪಳ ನಗರವೊಂದರಲ್ಲಿಯೇ 127 ಸಾರ್ವಜನಿಕರ ಗಣಪ ಪ್ರತಿಷ್ಠಾಪಿಸಿದ್ದು ಪ್ರತಿಯೊಂದನ್ನು ವಿಭಿನ್ನ ರೀತಿಯಲ್ಲಿ ತಯಾರಿಸಿದ ಮಂಟಪಗಳಲ್ಲಿ ಆಸಿನಗೊಳಿಸಲಾಗಿದೆ. ಬಹುತೇಕ ಗಣೇಶ ಮೂರ್ತಿಗಳನ್ನು ಬುಧವಾರವೇ ವಿಸರ್ಜಿಸಿದರೆ ಸಾರ್ವಜನಿಕ ಗಣಪನನ್ನು 5,9,11,21 ದಿನದ ವರೆಗೂ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಬಳಿಕ ವಿಸರ್ಜನೆ ಮಾಡಲಾಗುತ್ತದೆ.
20ರಿಂದ 30 ಅಡಿ ಗಣೇಶ ಮೂರ್ತಿ:ನಗರದಲ್ಲಿ 20ರಿಂದ 30 ಅಡಿ ಎತ್ತರದ ವಿವಿಧ ಭಂಗಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಭಕ್ತರನ್ನು ಆಕರ್ಷಿಸುತ್ತಿವೆ. ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ. ಜತೆಗೆ ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಇಲಿಗೂ ಪೂಜೆ:ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಗಣೇಶ ಮೂರ್ತಿ ಸ್ಥಾಪನೆ ಮರುದಿನ ಇಲಿ ಪೂಜೆ ಮಾಡಲಾಗುತ್ತದೆ. ನೇಕಾರ ಸಮುದಾಯ ನೇಯ್ದು ಬಟ್ಟೆ ಮತ್ತು ನೂಲು ಇಲಿಗಳು ಕಡಿಯದಿರಲಿ ಎಂದು ಪೂಜಿಸುತ್ತಾರೆ. ಹೀಗಾಗಿಯೇ ನೇಕಾರರ ಮನೆಯಲ್ಲಿ ಇಲಿಗಳು ಬಟ್ಟೆ ಕಡಿಯುವುದಿಲ್ಲ ಎನ್ನುವ ನಂಬಿಕೆ. ಜೀವಂತ ಇಲಿಗಾಗಿ ಕಾದು ಕುಳಿತು ಪೂಜೆ ಸಲ್ಲಿಸಿ ನೈವೇದ್ಯ ಮಾಡುತ್ತಾರೆ. ಆದರೆ, ಈಗ ಇಲಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಈ ಪದ್ಧತಿ ಅಷ್ಟಾಗಿ ಆಚರಣೆ ಮಾಡುತ್ತಿಲ್ಲ ಎನ್ನುತ್ತಾರೆ ನೇಕಾರರು.ಕೊಪ್ಪಳದ ಕಿನ್ನಾಳ ರಸ್ತೆಯ ಎನ್‌ಜಿಒ ಕಾಲನಿಯ ಈಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿಯಿಂದ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಯಿತು. ವಿಸರ್ಜನೆ ವೇಳೆ ಕಾಲನಿ ನಿವಾಸಿಗಳು, ಶಿವಶಕ್ತಿ ಮಹಿಳಾ ತಂಡದ ಸದಸ್ಯರು ಮಹಿಳಾ ತಂಡದ ಭಜನೆಯೊಂದಿಗೆ ಕಾಲನಿಯಲ್ಲಿ ಸಂಚರಿಸಿ ಬಳಿಕ ಬ್ಯಾರಲ್‌ನಲ್ಲಿ ವಿಸರ್ಜಿಸಿದರು. ಬಳಿ ಅನ್ನ ಪ್ರಸಾದ ನಡೆಯಿತು.