ಸಾರಾಂಶ
ಹುನಗುಂದ: ರಾಜಕೀಯ ವೈಷಮ್ಯದ ಹಿನ್ನೆಲೆ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪುತ್ರ ಹಾಗೂ ಗ್ರಾಪಂ ಸದಸ್ಯನ ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಮೂವರು ಗಾಯಗೊಂಡ ಘಟನೆ ತಾಲೂಕಿನ ಧನ್ನೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಪಂ ಸದಸ್ಯ ಸುರೇಶ್ ತಳವಾರ, ಸುನಂದಾ ತಳವಾರ, ಸಂಜೀವ್ ತಳವಾರ ಗಾಯಗೊಂಡವರು. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಹುನಗುಂದ
ರಾಜಕೀಯ ವೈಷಮ್ಯದ ಹಿನ್ನೆಲೆ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪುತ್ರ ಹಾಗೂ ಗ್ರಾಪಂ ಸದಸ್ಯನ ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಮೂವರು ಗಾಯಗೊಂಡ ಘಟನೆ ತಾಲೂಕಿನ ಧನ್ನೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಪಂ ಸದಸ್ಯ ಸುರೇಶ್ ತಳವಾರ, ಸುನಂದಾ ತಳವಾರ, ಸಂಜೀವ್ ತಳವಾರ ಗಾಯಗೊಂಡವರು.ಘಟನೆಯ ಹಿನ್ನೆಲೆ: ಗುರುವಾರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿಷ್ಟಾಚಾರದ ಪ್ರಕಾರ ಗ್ರಾಪಂ ಅಧ್ಯಕ್ಷೆ, ಕಾಂಗ್ರೆಸ್ ಪಕ್ಷದ ಸಂಗಮ್ಮ ಶಿರಹಟ್ಟಿ ಹಾಗೂ ಗ್ರಾಪಂ ಸದಸ್ಯ ಬಿಜೆಪಿಯ ಸುರೇಶ್ ತಳವಾರ ವೇದಿಕೆ ಮೇಲಿದ್ದರು. ಕಾರ್ಯಕ್ರಮ ನಡೆದಾಗ ಮಧ್ಯೆ ಮಧ್ಯೆ ಸುರೇಶ ತಳವಾರ ಬೆಂಬಲಿಗರು ಶಿಳ್ಳೆ, ಕೇಕೆ ಹಾಕಿದ್ದರು ಎನ್ನಲಾಗಿದೆ. ನನಗೆ ಅವಮಾನ ಮಾಡಲೆಂದೇ ಈ ರೀತಿ ಮಾಡಿದ್ದಾರೆ ಎಂದು ಕೋಪಗೊಂಡ ಅಧ್ಯಕ್ಷೆಯ ಪುತ್ರ ಆನಂದ ಹಾಗೂ ಬೆಂಬಲಿಗರು ಶುಕ್ರವಾರ ಡೊಣ್ಣೆಗಳಿಂದ ಸುರೇಶ ತಳವಾರ ಹಾಗೂ ಬೆಂಬಲಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಸುರೇಶ ಹಾಗೂ ಸಂಬಂಧಿಗಳಾದ ಸುನಂದಾ ತಳವಾರ, ಸಂಜೀವ ತಳವಾರ ಗಾಯಗೊಂಡಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಸ್ಪರ ಹೊಡೆದಾಟದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
ಎಸ್ಪಿ ಅಮರನಾಥರೆಡ್ಡಿ, ಸಿಪಿಐ ಸುನೀಲ ಸವದಿ, ಡಿವೈಎಸ್ಪಿ ವಿಶ್ವನಾಥರಾವ ಕುಲಕರ್ಣಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದರು. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.