ನಗರಸಭೆ ಆವರಣದಲ್ಲಿಯೇ ಎರಡು ಗುಂಪುಗಳ ನಡುವೆ ಮಾರಾಮಾರಿ

| Published : Mar 29 2025, 12:31 AM IST

ನಗರಸಭೆ ಆವರಣದಲ್ಲಿಯೇ ಎರಡು ಗುಂಪುಗಳ ನಡುವೆ ಮಾರಾಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ ಆವರಣದಲ್ಲಿ ಕಚೇರಿ ಸಮಯದ ಅವಧಿಯಲ್ಲಿಯೇ ಎರಡು ಗುಂಪುಗಳು ಕೈ ಕೈ ಮಿಲಾಯಿಸಿದ್ದಲ್ಲದೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ನಗರಸಭೆ ಆವರಣದಲ್ಲಿ ಕಚೇರಿ ಸಮಯದ ಅವಧಿಯಲ್ಲಿಯೇ ಎರಡು ಗುಂಪುಗಳು ಕೈ ಕೈ ಮಿಲಾಯಿಸಿದ್ದಲ್ಲದೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಈ ಘಟನೆಯಲ್ಲಿ ಎರಡು ಗುಂಪಿನ ನಾಲ್ಕೈದು ಮಂದಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ:

ನಗರಸಭಾ ಕಾಂಗ್ರೆಸ್ ಸದಸ್ಯ ಅಜ್ಮತ್ ಮತ್ತು ಜೆಡಿಎಸ್ ಮುಖಂಡ ರಿಯಾಜ್ ಕಳೆದ ನಗರಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ಚುನಾವಣೆಯಲ್ಲಿ ಅಜ್ಮತ್ ಗೆಲುವು ಸಾಧಿಸಿದ್ದರು. ಅಂದಿನಿಂದ ಇಬ್ಬರ ನಡುವೆ ರಾಜಕೀಯ ವೈಷಮ್ಯ ಇತ್ತು.

ಅಜ್ಮತ್ ಮತ್ತು ರಿಯಾಜ್ ರವರು ಖಾತೆ ವಿಚಾರವಾಗಿ ನಗರಸಭೆಯ ಕಂದಾಯ ಶಾಖೆಗೆ ಆಗಮಿಸಿದ್ದಾರೆ. ಮೊದಲು ಅಜ್ಮತ್ ಅಧಿಕಾರಿಗಳ ಬಳಿಯೇ ಕುಳಿತು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇದನ್ನು ಕಂಡ ರಿಯಾಜ್ ದೂರದಲ್ಲಿ ನಿಂತಿದ್ದರು.

ಸುಮಾರು ಒಂದು ತಾಸಾದರೂ ಅಜ್ಮತ್ ರವರ ಕೆಲಸ ಮುಗಿಯದಿದ್ದಾಗ ಅಲ್ಲಿಗೆ ತೆರಳಿದ ರಿಯಾಜ್ ತಮ್ಮ ಕೆಲಸಕ್ಕೂ ಅವಕಾಶ ಮಾಡಿಕೊಡುವಂತೆ ಕೇಳಿದ್ದಾರೆ. ಆಗ ಹಾಸ್ಯ ಚಟಾಕಿಯಲ್ಲಿ ತೊಡಗಿದ್ದ ಇಬ್ಬರು, ಕ್ಷಣಾರ್ಧದಲ್ಲಿ ಒಬ್ಬರನ್ನೊಬ್ಬರು ಅಪಹಾಸ್ಯ ಮಾಡಿಕೊಂಡಿದ್ದಾರೆ.

ಇದು ವಿಕೋಪಕ್ಕೆ ತಿರುಗಿ ಅಜ್ಮತ್ ಮತ್ತು ರಿಯಾಜ್ ಮಾತಿನ ಚಕಮಕಿಯಲ್ಲಿ ತೊಡಗಿದ್ದರಿಂದ ನೂಕಾಟ- ತಳ್ಳಾಟದಿಂದ ಹೈಡ್ರಾಮ ನಡೆದಿದೆ. ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿರವರು ಇಬ್ಬರಿಗೂ ಬುದ್ಧಿ ಮಾತು ಹೇಳಿ ಸಮಾಧಾನಪಡಿಸಲು ಪ್ರಯತ್ನ ಮಾಡಿದ್ದಾರೆ.

ಗಲಾಟೆ ವಿಚಾರ ತಿಳಿದು ಅಜ್ಮತ್ ಪರವಾಗಿ ಅಮ್ಜದ್ ಸೇರಿ ಐದಾರು ಯುವಕರು ಹಾಗೂ ರಿಯಾಜ್ ಪರವಾಗಿ ಅವರ ಇಬ್ಬರು ಸಹೋದರರು ಸೇರಿ ನಾಲ್ಕೈದು ಯುವಕರು ನಗರಸಭೆಯೊಳಗೆ ನುಗ್ಗಿದ್ದಾರೆ. ಎರಡು ಗುಂಪಿನ ಪೈಕಿ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದ ಯುವಕರು ಹಲ್ಲೆ ಕೂಡ ಮಾಡಿದ್ದಾರೆ. ಘಟನೆಯಲ್ಲಿ ಅಜ್ಮತ್ ಮತ್ತು ರಿಯಾಜ್ ಸಹೋದರರಿಗೆ ಗಾಯಗಳಾಗಿವೆ. ಈ ಘಟನೆಯಿಂದಾಗಿ ನಗರಸಭೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.

ಎರಡು ಗುಂಪಿನಲ್ಲಿ ಗಾಯಗೊಂಡವರು ಜಿಲ್ಲಾಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಎಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ಪೊಲೀಸರು ಕ್ರಮ ವಹಿಸಬಹುದಾಗಿದೆ.

ಈ ಘಟನೆ ಕುರಿತಂತೆ ನಗರಸಭೆ ಅಧಿಕಾರಿಗಳು ರಾಮನಗರ ಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

---

ನಗರಸಭೆ ಆವರಣದಲ್ಲಿ ನಡೆದ ಘಟನೆ ಕುರಿತಂತೆ ಅಧಿಕಾರಿಗಳು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.

- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.