ಸಾರಾಂಶ
ಕುರ್ಚಿಗಾಗಿ ಪುರಸಭೆ ಮಾಜಿ ಹಾಗೂ ಹಾಲಿ ಮುಖ್ಯಾಧಿಕಾರಿ ನಡುವೆ ಪಟ್ಟಣದಲ್ಲಿ ಮಂಗಳವಾರ ಫೈಟ್ ನಡೆದಿದೆ. ಸರ್ಕಾರದ ಆದೇಶವಿಲ್ಲದೇ ಏಕಾಏಕಿ ಮಾಜಿ ಮುಖ್ಯಾಧಿಕಾರಿ ಪಿ. ಶಿವಪ್ರಸಾದ್ ಅವರು ಹಾಲಿ ಮುಖ್ಯಾಧಿಕಾರಿ ಮಂಜುಳ ಜಾಗಕ್ಕೆ ಬಂದು ಕುಳಿತುಕೊಂಡಿದ್ದರು.
ಕುಣಿಗಲ್: ಕುರ್ಚಿಗಾಗಿ ಪುರಸಭೆ ಮಾಜಿ ಹಾಗೂ ಹಾಲಿ ಮುಖ್ಯಾಧಿಕಾರಿ ನಡುವೆ ಪಟ್ಟಣದಲ್ಲಿ ಮಂಗಳವಾರ ಫೈಟ್ ನಡೆದಿದೆ. ಸರ್ಕಾರದ ಆದೇಶವಿಲ್ಲದೇ ಏಕಾಏಕಿ ಮಾಜಿ ಮುಖ್ಯಾಧಿಕಾರಿ ಪಿ. ಶಿವಪ್ರಸಾದ್ ಅವರು ಹಾಲಿ ಮುಖ್ಯಾಧಿಕಾರಿ ಮಂಜುಳ ಜಾಗಕ್ಕೆ ಬಂದು ಕುಳಿತುಕೊಂಡಿದ್ದರು.
ಈ ಹಿಂದೆ ಎರಡು ಬಾರಿ ಕುಣಿಗಲ್ ಪುರಸಭೆ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಶಿವಪ್ರಸಾದ್ ಅವರನ್ನು ವರ್ಗಾವಣೆ ಮಾಡಿ ಗದ್ದಿಗೌಡರ್‌ನ್ನು ನೇಮಕ ಮಾಡಲಾಗಿತ್ತು. ಕೆಲ ಕಾರಣಾಂತರಗಳಿಂದ ಗದ್ದಿಗೌಡರ್ ಬೇರೆಡೆಗೆ ವರ್ಗಾವಣೆಗೊಂಡಿದ್ದರು. ಖಾಲಿಯಿದ್ದ ಸ್ಥಾನಕ್ಕೆ ಮಂಜುಳಾರನ್ನು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್ ಕಳೆದ ಮಾರ್ಚ್ 7 ರಂದು ನೇಮಕ ಮಾಡಿ ಆದೇಶ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಕೆಲಸ ನಿರ್ವಹಿಕೊಂಡು ಬಂದಿದ್ದ ಮಂಜುಳಾ ಬೆಳಗ್ಗೆ ಕಚೇರಿಗೆ ಬರುವ ಮೊದಲೇ ಮಂಜುಳಾ ಜಾಗಕ್ಕೆ ಪಿ. ಶಿವಪ್ರಸಾದ್ ಬಂದು ಕುಳಿತಿದ್ದರು. ಈ ವಿಷಯ ತಿಳಿದ ಕೂಡಲೇ ಪುರಸಭೆ ಸದಸ್ಯರು ಕಚೇರಿಗೆ ದೌಡಾಯಿಸಿದ್ದಾರೆ.ಸರ್ಕಾರದ ಆದೇಶ ಪ್ರತಿ ಇಲ್ಲದೇ ಕಚೇರಿಗೆ ಬಂದಿರುವುದು ತಪ್ಪು ಎಂದು ಶಿವಪ್ರಸಾದ್ ಮೇಲೆ ಪುರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಅಲ್ಲಿಂದ ಶಿವಪ್ರಸಾದ್ ತುಮಕೂರು ಡಿಸಿ ಕಚೇರಿಗೆ ಹೋಗುವುದಾಗಿ ಕಾರು ಹತ್ತಿ ಹೋದರು. ಬಳಿಕ ತನ್ನ ಕುರ್ಚಿಯಲ್ಲಿ ಕುಳಿತು ಹಾಲಿ ಪುರಸಭೆ ಮುಖ್ಯಾಧಿಕಾರಿ ಮಂಜುಳಾ ಕಾರ್ಯನಿರ್ವಹಿಸಿದರು.