ಬಿಸಿಲಿನ ತಾಪಕ್ಕೆ ಹೆಚ್ಚುತ್ತಿರುವ ಅಗ್ನಿ ಅವಘಡ

| Published : Mar 23 2024, 01:07 AM IST

ಬಿಸಿಲಿನ ತಾಪಕ್ಕೆ ಹೆಚ್ಚುತ್ತಿರುವ ಅಗ್ನಿ ಅವಘಡ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯಾದ್ಯಂತ ಅಗ್ನಿಶಾಮಕ ದಳಕ್ಕೆ ೫೬೬ ಬೆಂಕಿ ಪ್ರಕರಣಗಳ ಬಗ್ಗೆ ಫೋನು ಕರೆಗಳು ಹೋಗಿದ್ದು, ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಬಿಸಿಲಿನ ಝುಳ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಬೆಂಕಿ ಪ್ರಕರಣಗಳು ಹೆಚ್ಚಾಗುತ್ತಿದೆ, ಅರಣ್ಯ ಪ್ರದೇಶಗಳಲ್ಲದೆ ಸ್ವಂತ ಜಮೀನುಗಳಿಗೂ ಬೆಂಕಿ ಬೀಳುತ್ತಿದ್ದು, ಇದರಿಂದಾಗಿ ರೈತರ ತೋಟ ಮತ್ತು ಫಸಲಿಗೆ ನಷ್ಟ ಉಂಟಾಗುತ್ತಿದೆ.

ಮಳೆಯಿಲ್ಲದ ಕಾರಣ ಗಿಡ-ಮರಗಳು ಒಣಗುವಂತಾಗಿದ್ದು, ಮರಗಳಿಂದ ಉದುರಿ ಬೀಳುವ ಎಲೆಗಳು ಮತ್ತು ಹುಲ್ಲು ಬೆಂಕಿಯನ್ನು ಆಹ್ವಾನಿಸುವಂತಿದ್ದು, ಬಿಸಿಲಿನ ತಾಪದಿಂದಾಗಿ ಅಥವಾ ಮನುಷ್ಯ ಮಾಡುವ ತಪ್ಪುಗಳಿಂದಾಗಿ ಇತ್ತೀಚೆಗೆ ಬೆಂಕಿ ಪ್ರಕರಣಗಳು ಹೆಚ್ಚಾಗತೊಡಗಿದೆ.

ಮಾವು ತೋಪಿನಲ್ಲಿ ಬೆಂಕಿ

ರಸ್ತೆಯ ಪಕ್ಕದಲ್ಲಿರುವ ರೈತರ ಮಾವಿನ ತೋಟ, ನೀಲಗಿರಿ ಸೇರಿದಂತೆ ಬೆಳೆಗಳಿಗಾಗಿ ಸುತ್ತಲೂ ಇರುವ ಬೇಲಿಗೆ ಬೆಂಕಿ ಬಿದ್ದು ಫಸಲು ಬರುತ್ತಿರುವ ಮಾವಿನ ಮರಗಳು, ನೀಲಗಿರಿ ಮರಗಳು ಬೆಂಕಿಗೆ ಆಹುತಿಯಾಗುತ್ತಿವೆ. ಬೆಂಕಿಯಿಂದ ಸುಟ್ಟ ಭೂಮಿಯಲ್ಲಿ ಮಳೆ ಬಂದರೆ ಹುಲ್ಲು ಮತ್ತು ಸುಟ್ಟ ಗಿಡಮರಗಳಲ್ಲಿ ಚಿಗುರು ಚೆನ್ನಾಗಿ ಬರುತ್ತದೆ ಎಂದು ದನ ಕಾಯುವವರು ಈ ರೀತಿ ಮಾಡುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ. ಯಾವುದೇ ಉದ್ದೇಶಕ್ಕಾಗಿ ಈ ರೀತಿ ಮಾಡಿದರೆ ಲಕ್ಷಾಂತರ ಬೆಲೆ ಬಾಳುವ ಮರಗಳು ಬೆಂಕಿಗೆ ಆಹುತಿಯಾಗುತ್ತಿವೆ. ಅಲ್ಲದೆ ಇದರಿಂದ ಜೀವ ಸಂಕುಲಕ್ಕೂ ತೊಂದರೆಯಾಗುತ್ತಿದೆ ಎಂದು ರೈತರು ಆರೋಪಿಸತೊಡಗಿದ್ದಾರೆ.ಜಿಲ್ಲೆಯಲ್ಲಿ 566 ಬೆಂಕಿ ಪ್ರಕರಣ

ಕಳೆದ ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯಾದ್ಯಂತ ಅಗ್ನಿಶಾಮಕ ದಳಕ್ಕೆ ೫೬೬ ಬೆಂಕಿ ಪ್ರಕರಣಗಳ ಬಗ್ಗೆ ಫೋನು ಕರೆಗಳು ಹೋಗಿದ್ದು, ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ.

ಕೋಲಾರ ತಾಲೂಕು ೧೫೪ ಕರೆಗಳು, ಕೆ.ಜಿ.ಎಫ್. ೭೮ ಕರೆಗಳು, ಮುಳಬಾಗಿಲು ೧೨೧ ಕರೆಗಳು, ಬಂಗಾರಪೇಟೆ ೬೫ ಕರೆಗಳು, ಶ್ರೀನಿವಾಸಪುರ ೮೨ ಕರೆಗಳು, ಮಾಲೂರು ೬೪ ಕರೆಗಳು ಹಾಗೂ ಮಧ್ಯಮ ಪ್ರಮಾಣದಲ್ಲಿ ೨ ಕರೆಗಳು ಸೇರಿ ೧೫೬ ಕರೆಗಳು ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಗ್ನಿ ಶಾಮಕದಳದಲ್ಲಿ ದಾಖಲಾಗಿವೆ.ಬಾಕ್ಸ್‌.................ಬೇಸಿಗೆಯಲ್ಲಿ ಸರ್ವೇಸಾಮಾನ್ಯ

ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಆರ್. ಹನುಮಂತರಾಯ ಅವರ ಪ್ರಕಾರ, ಬಿಸಿಲಿನ ತಾಪಕ್ಕೆ ಆಕಸ್ಮಿಕವಾಗಿ ಬೆಂಕಿ ಬೀಳುತ್ತವೆ. ಮರಗಿಡಗಳ ಕೆಳಗೆ ಒಣಗಿದ ಎಲೆ, ಹುಲ್ಲು ಇವುಗಳ ಗಾಜಿನ ಚೂರುಗಳು ಬಿದ್ದಿದ್ದರೆ ಬಿಸಿಲಿನ ರಿಫ್ಲೆಕ್ಷನ್‌ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಳ್ಳುವ ಸಂದರ್ಭಗಳು ಇರುತ್ತವೆ. ಇದಲ್ಲದೆ ದನ ಕಾಯುವವರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಹೋಗುವವರು ಬೀಡಿ ಸಿಗರೇಟಿನ ಬೆಂಕಿ ತುಂಡುಗಳನ್ನು ಬಿಸಾಡುವುದರಿಂದ ಬೆಂಕಿ ಹತ್ತಿಕೊಳ್ಳುತ್ತವೆ. ಇದುವರೆವಿಗೂ ಅಗ್ನಿ ಶಾಮಕ ಇಲಾಖೆಗೆ ಬಂದಿರುವ ಬೆಂಕಿ ಪ್ರಕರಣಗಳು ಸಾಮಾನ್ಯವೇ ಆಗಿವೆ. ಅನಾಹುತಗಳಾಗುವಂತಹ ಪ್ರಕರಣಗಳು ನಡೆದಿಲ್ಲ.