ಸಾರಾಂಶ
- 30ಕ್ಕೂ ಅಧಿಕ ಅಧಿಕ ಹುಲ್ಲಿನ ಬಣವೆ ಆಹುತಿ
- ಘನತ್ಯಾಜ್ಯ ಘಟಕಕ್ಕೂ ಹಬ್ಬಿದ ಬೆಂಕಿಯ ಕೆನ್ನಾಲಿಗೆ- ಅರಣ್ಯ ಸಿಬ್ಬಂದಿಗೆ ದೀಟೂರು ನಿರಂಜನ್ ಸ್ನೇಹ ಬಳಗ, ಗ್ರಾಮಸ್ಥರು ಸಾಥ್ - - - ಕನ್ನಡಪ್ರಭ ವಾರ್ತೆ ಹರಿಹರ ತಾಲೂಕಿನ ಸಾರಥಿ ಗ್ರಾಮದ ಆಂಜನೇಯ ದೇವಸ್ಥಾನದ ಗುಡ್ಡಕ್ಕೆ ಹೊತ್ತಿದ ಬೆಂಕಿ ಸುತ್ತಮುತ್ತ ಪಸರಿಸಿ ಸುಮಾರು 30 ಎಕರೆ ಬೆಳೆ ಹಾನಿಯಾಗಿದೆ. 30ಕ್ಕೂ ಅಧಿಕ ಹುಲ್ಲಿನ ಬಣವೆಗಳು ನಾಶವಾಗಿವೆ. ಗುಡ್ಡದ ಕೆಳಭಾಗದ ಸಾರಥಿ ಗ್ರಾಮದ ಘನತ್ಯಾಜ್ಯ ಘಟಕಕ್ಕೆ ಬೆಂಕಿ ಹಬ್ಬಿದ ಪರಿಣಾಮ ₹50 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಗುಡ್ಡದ ಮೇಲೆ ಬೆಂಕಿ ಕಾಣಿಸಿದೆ. ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ದಳ ಹಾಗೂ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಬೆಂಕಿ ನಂದಿಸಿ, ಹತೋಟಿಗೆ ತರುವ ಪ್ರಯತ್ನ ನಡೆಸಿದ್ದಾರೆ.ಅರಣ್ಯ ಇಲಾಖೆಯಿಂದ 2024-25ನೇ ಸಾಲಿನ ನರೇಗಾ ಯೋಜನೆಯಡಿ ಜೂನ್- ಜುಲೈ ತಿಂಗಳಲ್ಲಿ 900 ಅರಳಿ, ಗೋಣಿ, ಬಸರಿ ಗಿಡಗಳನ್ನು ತಾಲೂಕಿನ ದೀಟೂರಿನಿಂದ ಸಾರಥಿ ಗ್ರಾಮದ ಆಂಜನೇಯ ದೇವಸ್ಥಾನದವರೆಗೆ ನೆಟ್ಟಿದ್ದರು. ಈ ಹಿಂದೆ ಸುಮಾರು 300 ಮರಗಳು ಸಹ ಇದ್ದವು. ತಕ್ಷಣ ಬೆಂಕಿ ಹತೋಟಿಗೆ ಬಾರದ ಕಾರಣ ಅರಣ್ಯ ಸಿಬ್ಬಂದಿ ಗಿಡಗಳ ಸುತ್ತ ಹೊತ್ತಿದ್ದ ಬೆಂಕಿಯನ್ನು ಮೊದಲು ನಂದಿಸಿ ಗಿಡಗಳನ್ನು ರಕ್ಷಿಸಿದ್ದಾರೆ. ಆದರೂ ಹತ್ತಾರು ಗಿಡ, ಮರಗಳು ಸುಟ್ಟುಹೋಗಿವೆ.
ಗುಡ್ಡದ ಮೇಲ್ಭಾಗದಲ್ಲಿ ಹೊತ್ತಿದ ಬೆಂಕಿಯು ಗಾಳಿ ಬೀಸಿದ ರಭಸಕ್ಕೆ ಗುಡ್ಡದ ಕೆಳಭಾಗದಲ್ಲಿರುವ ರೈತರ ಹೊಲಗಳಲ್ಲಿ ಬೆಳೆದ ಸುಮಾರು 4 ಎಕರೆ ಅಲಸಂದೆ, 15 ಎಕರೆ ಜೋಳ, 10 ಎಕರೆ ತೊಗರಿ ಸೇರಿದಂತೆ ದನಕರುಗಳಿಗಾಗಿ ಶೇಖರಿಸಿಟ್ಟ 30ಕ್ಕೂ ಹೆಚ್ಚು ಬಣವೆಗಳನ್ನು ಸುಟ್ಟುಹಾಕಿದೆ.ಸಾರಥಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿದ್ದ ಘನತ್ಯಾಜ್ಯ ಘಟಕದಲ್ಲಿ ಅಳವಡಿಸಿದ್ದ ಜಾಲರಿ ಕಿಟಕಿಗಳ ಮೂಲಕ ಕಿಡಿಗಳು ಹಾರಿದ ಪರಿಣಾಮ ಘಟಕದಲ್ಲಿದ್ದ ಹಸಿಕಸ ಹಾಗೂ ಒಣಕಸಕ್ಕೆ ಸಂಪೂರ್ಣ ಬೆಂಕಿ ಹತ್ತಿಕೊಂಡು, ₹50 ಸಾವಿರದಷ್ಟು ನಷ್ಟವಾಗಿದೆ.
ಸಾರಥಿ ಸುತ್ತಮುತ್ತ ಸುಮಾರು ಆರೇಳು ಗುಡ್ಡಗಳಿದ್ದು, ಕಳೆದ ಮಳೆಗಾಲದಲ್ಲಿ ಸುರಿದ ಮಳೆಗೆ ಬಾದೆಹುಲ್ಲು ಆಳೆತ್ತರಕ್ಕೆ ಬೆಳೆದು ಸಂಪೂರ್ಣ ಒಣಗಿತ್ತು. ಸುತ್ತಮುತ್ತಲಿನ ಗುಡ್ಡಗಳ ಕಡೆ ಬೆಂಕಿ ತನ್ನ ಕಬಂಧ ಬಾಹುಗಳನ್ನು ಚಾಚಿದೆ.ಸುದ್ದಿ ತಿಳಿಯುತ್ತಿದ್ದಂತೆ ಆಗಮಿಸಿದ ಅಗ್ನಿಶಾಮಕ ದಳದ ಪ್ರಭಾರ ಎಎಸ್‍ಐ ಆರ್. ಸಂಜೀವ್‍ಕುಮಾರ್ ಹಾಗೂ ಸಿಬ್ಬಂದಿ ರೈತರ ಇತರ ಹೊಲಗಳಿಗೆ ಹರಡಬಹುದಾದ ಹೆಚ್ಚಿನ ಅನಾಹುತ ತಡೆದು. ಘನತ್ಯಾಜ್ಯ ಘಟಕದ ಬೆಂಕಿ ನಂದಿಸಿದ್ದಾರೆ. ನೀರು ಖಾಲಿ ಆಗುತ್ತಿದ್ದಂತೆ, ಸಮೀಪದ ಇಟ್ಟಿಗೆ ಭಟ್ಟಿಗೆ ಶೇಖರಿಸಿದ ನೀರನ್ನು ಬಳಸುವ ಮೂಲಕ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ.
ಬೆಂಕಿ ಹೊತ್ತಿದ್ದ ಮಾಹಿತಿ ತಿಳಿದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಪರಿಸರ ಪ್ರೇಮಿ ಹಾಗೂ ಬಿಜೆಪಿ ಮುಖಂಡ ದೀಟೂರು ನಿರಂಜನ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಆಗಮಿಸಿದ ನಿರಂಜನ್ ಮತ್ತು ಅವರ ಸ್ನೇಹ ಬಳಗ ಬೆಂಕಿ ಆರಿಸಲು ಸಿಬ್ಬಂದಿ ಜತೆ ಸಹಾಯ ಮಾಡಿದ್ದಾರೆ. ಫಾರೆಸ್ಟ್ ಸಿಬ್ಬಂದಿ ಹಾಗೂ ಇತರರಿಗೆ ಬಿಸ್ಕತ್ತು, ನೀರು ಸೇರಿದಂತೆ ವಿವಿಧ ಅವಶ್ಯಕತೆಗಳನ್ನು ಪೂರೈಸಿದರು ಎಂದು ಅರಣ್ಯ ಇಲಾಖೆ ಬೀಟ್ ಫಾರೆಸ್ಟರ್ ಧನ್ಯಕುಮಾರ್ ತಿಳಿಸಿದ್ದಾರೆ.- - - -26ಎಚ್‍ಆರ್‍ಆರ್03 -03ಎ- 03ಬಿ:
ಹರಿಹರ ತಾಲೂಕಿನ ಸಾರಥಿ ಸುತ್ತಮುತ್ತಲ ಗುಡ್ಡಗಳಲ್ಲಿ ಹೊತ್ತಿರುವ ಬೆಂಕಿಯನ್ನು ಅಗ್ನಶಾಮಕ ದಳ ಸಿಬ್ಬಂದಿ, ಅರಣ್ಯ ಸಿಬ್ಬಂದಿ ನಂದಿಸುವಲ್ಲಿ ಶ್ರಮಿಸಿದರು. - ಹರಿಹರ ತಾಲೂಕಿನ ಸಾರಥಿ ಗ್ರಾಪಂ ಘನತ್ಯಾಜ್ಯ ಘಟಕಕ್ಕೆ ಬೆಂಕಿ ಬಿದ್ದಿರುವುದು.