ಸಾರಾಂಶ
ಬ್ಯಾಡಗಿ: ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ಸ್ತ್ರೀಯರ ಲಿಂಗ ಅನುಪಾತ ನಿಯಮಿತವಾಗಿ ಕಡಿಮೆಯಾಗುತ್ತಿದೆ. ದೇಶದಲ್ಲಿ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳುವುದು ಅವಶ್ಯಕವಾಗಿದ್ದು, ಅವರ ಹಕ್ಕು ಮತ್ತು ರಕ್ಷಣೆಗೆ ಸಮಾಜ ಮತ್ತು ಸರ್ಕಾರ ದೃಢ ನಿರ್ಧಾರ ಕೈಗೊಳ್ಳದಿದ್ದರೆ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಜೆ. ಹಿರಿಕುಡೆ ಎಚ್ಚರಿಸಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಇಲಾಖೆ ಇವರ ಸಂಯಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಗಂಡುಮಕ್ಕಳಷ್ಟೇ ಹೆಣ್ಣುಮಕ್ಕಳು ಮುಖ್ಯವಾಗಿದ್ದಾರೆ. ಅಷ್ಟಕ್ಕೂ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಬೇಕು, ಹೆಣ್ಣುಭ್ರೂಣ ಹತ್ಯೆ, ವರದಕ್ಷಿಣೆ ಸಾವು, ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗ ತಾರತಮ್ಯ ಮತ್ತು ಇನ್ನೂ ಹೆಚ್ಚಿನವುಗಳಂತಹ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಂದ ಕೆಲವು ವರ್ಷಗಳ ಹಿಂದೆ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ ಎಂದರು.
ಸಿವಿಲ್ ನ್ಯಾಯಾಧೀಶರಾದ ಸುರೇಶ ವಗ್ಗನವರ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಗುವನ್ನು ಉಳಿಸುವ ಬಗ್ಗೆ ಭಾರತ ಸರ್ಕಾರ ಕೆಲ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡ ಉದಾಹರಣೆಗಳಿವೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ (2005), ಹೆಣ್ಣು ಶಿಶುಹತ್ಯೆ ನಿಷೇಧ, ದೆಹಲಿ ಮತ್ತು ಹರಿಯಾಣ ಸರ್ಕಾರ 2008ರಲ್ಲಿ ಲಾಡ್ಲಿ ಬೆಹನ್ ಯೋಜನೆ ಪ್ರಾರಂಭಿಸಿದೆ. ಒಟ್ಟಾರೆ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಹೆಣ್ಣು ಮಕ್ಕಳನ್ನು ಉಳಿಸುವ ವಿಷಯ ಭಾರತದಾದ್ಯಂತ ಪ್ರಚಾರಗೊಳ್ಳಬೇಕಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಚಂದ್ರಶೇಖರ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಮಂಜುನಾಥ ಹಂಜಗಿ, ಸಹ ಕಾರ್ಯದರ್ಶಿ ಎನ್. .ಬಿ. ಬಳಿಗಾರ, ಹಿರಿಯ ವಕೀಲ ಪ್ರಭು ಶೀಗಿಹಳ್ಳಿ, ಎಂ.ಜೆ. ಮುಲ್ಲಾ, ಭಾರತಿ ಕುಲಕರ್ಣಿ, ಪ್ಯಾನಲ್ ವಕೀಲರಾದ ಎಂ.ಜೆ. ಪಾಟೀಲ್ ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.