ಯೂತ್ ಗ್ರೂಪ್‌ನಿಂದ ೫೦೦ ಮೀಟರ್ ಉದ್ದದ ತಿರಂಗ ಪ್ರದರ್ಶನ

| Published : Aug 17 2024, 12:51 AM IST

ಯೂತ್ ಗ್ರೂಪ್‌ನಿಂದ ೫೦೦ ಮೀಟರ್ ಉದ್ದದ ತಿರಂಗ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರೇ ಈ ದೇಶದ ಮುಂದಿನ ಪ್ರಜೆಗಳು. ಅವರೇ ಈ ದೇಶದ ಶಕ್ತಿ. ಹಾಗಾಗಿ ಯುವಕರು ಹಾದಿ ತಪ್ಪದೆ, ದುಶ್ಚಟಗಳಿಗೆ ದಾಸರಾಗದೆ ಗುರಿ ಸಾಧನೆಯ ಕಡೆ ಗಮನಹರಿಸಬೇಕು. ದೇಶದ ಸತ್ಪ್ರಜೆಗಳಾಗಿ ಬಾಳಬೇಕು. ಆಗ ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಲಿದೆ

ಕನ್ನಡಪ್ರಭ ವಾರ್ತೆ ಮಂಡ್ಯ

೭೮ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಂಡ್ಯ ಯೂತ್ ಗ್ರೂಪ್ ವತಿಯಿಂದ ೫೦೦ ಮೀಟರ್ ಉದ್ದದ ತಿರಂಗ ಪ್ರದರ್ಶನ ನಗರದಲ್ಲಿ ನಡೆಯಿತು. ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್‌ ಆನಂದ್ ನೇತೃತ್ವದಲ್ಲಿ ಪದಾಧಿಕಾರಿಗಳು ಶ್ವೇತ ವಸ್ತ್ರ ಧರಿಸಿ ತಿರಂಗಾ ಹಿಡಿದು ಮೆರವಣಿಗೆ ನಡೆಸಿದರು.

ನಗರದ ಆಸ್ಪತ್ರೆ ರಸ್ತೆಯಲ್ಲಿರುವ ನಿರಾಳ ಕ್ಲಿನಿಕ್ ಮುಂಭಾಗ ಡಾ.ಅನಿಲ್ ಆನಂದ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ರಾಷ್ಟ್ರಗೀತೆ ಹಾಡಲಾಯಿತು. ಬಳಿಕ ಆರಂಭವಾದ ೫೦೦ ಮೀ. ಉದ್ದದ ತಿರಂಗಾ ಹಿಡಿದ ಪದಾಧಿಕಾರಿಗಳು ಮೆರವಣಿಗೆಗೆ ಸಿದ್ಧರಾದರು. ತಿರಂಗಾ ಪ್ರದರ್ಶನ ಎಸ್.ಡಿ.ಜಯರಾಂ ವೃತ್ತ, ಬೆಂಗಳೂರು-ಮೈಸೂರು ಹೆದ್ದಾರಿ. ಮಹಾವೀರ ವೃತ್ತ,ವಿ.ವಿ.ರಸ್ತೆ, ಹೊಸಹಳ್ಳಿ ವೃತ್ತದ ಮೂಲಕ ಸಾಗಿ ನೂರಡಿ ರಸ್ತೆಯಲ್ಲಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಕೀಲುಗೊಂಬೆ, ಪೂಜಾ ಕುಣಿತ, ಇನ್ನಿತರ ಕಲಾತಂಡಗಳು ಮೆರುಗು ನೀಡಿದವು. ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾರ್ವಜನಿಕರು ವೀಕ್ಷಣೆ ನಡೆಸಿದರು. ತಿರಂಗಾ ಪ್ರದರ್ಶನಕ್ಕೆ ನಗರದ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.

ತಿರಂಗಾಗೆ ಎಲ್ಲಿಯೂ ಅಗೌರವ ಉಂಟಾಗದಂತೆ ಎಚ್ಚರಿಕೆ ಕಾಯ್ದುಕೊಂಡಿದ್ದ ಗ್ರೂಪ್‌ನ ಪದಾಧಿಕಾರಿಗಳು ಕೊನೆಯವರೆಗೂ ಎಚ್ಚರಿಕೆಯಿಂದ ಮುನ್ನಡೆಸಿದರು. ದಾರಿಯಲ್ಲಿ ಸಾಗುವ ವೇಳೆ ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಾ.ಅನಿಲ್ ಆನಂದ್ ಅವರು, ಸ್ವಾತಂತ್ರ್ಯ ಎನ್ನುವುದು ಎಂದಿಗೂ ಸ್ವೇಚ್ಛಾಚಾರವಾಗಬಾರದು. ಇಂದಿನ ಯುವಕರು ಸ್ವಾತಂತ್ರ್ಯದ ಮಹತ್ವವನ್ನು ಅರಿಯಬೇಕು. ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ದೊರಕಿರುವ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಂಡು ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಯುವಕರೇ ಈ ದೇಶದ ಮುಂದಿನ ಪ್ರಜೆಗಳು. ಅವರೇ ಈ ದೇಶದ ಶಕ್ತಿ. ಹಾಗಾಗಿ ಯುವಕರು ಹಾದಿ ತಪ್ಪದೆ, ದುಶ್ಚಟಗಳಿಗೆ ದಾಸರಾಗದೆ ಗುರಿ ಸಾಧನೆಯ ಕಡೆ ಗಮನಹರಿಸಬೇಕು. ದೇಶದ ಸತ್ಪ್ರಜೆಗಳಾಗಿ ಬಾಳಬೇಕು. ಆಗ ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಲಿದೆ ಎಂದರು.

ತಿರಂಗಾ ಪ್ರದರ್ಶನದಲ್ಲಿ ದರ್ಶನ್, ಮಲ್ಲೇಶ್, ಮೈಸೂರು ಮಂಜು, ಸ್ಟುಡಿಯೋ ಮಂಜು, ನವೀನ್, ಪ್ರವೀಣ್, ಪ್ರದೀಪ್, ರಕ್ಷಿತ್, ಹರ್ಷದ್, ಭರತ್, ಪ್ರತಾಪ್, ಕಿರಣ್, ಕೃಷ್ಣ, ಪ್ರಕಾಶ್, ಸೈಯ್ಯದ್, ನಂದೀಶ್ ಇತರರಿದ್ದರು.