ಕೇಂದ್ರ ಸಚಿವ ಸೋಮಣ್ಣ ರಂಭಾಪುರಿ ಪೀಠಕ್ಕೆ ಭೇಟಿ

| Published : Aug 17 2024, 12:51 AM IST

ಕೇಂದ್ರ ಸಚಿವ ಸೋಮಣ್ಣ ರಂಭಾಪುರಿ ಪೀಠಕ್ಕೆ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಆಗಮಿಸಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಪತ್ನಿ ಶೈಲಜಾ ಅವರನ್ನು ರಂಭಾಪುರಿ ಶ್ರೀ ಆಶಿರ್ವದಿಸಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಇಲ್ಲಿನ ರಂಭಾಪುರಿ ಪೀಠಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶುಕ್ರವಾರ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದ ಪಡೆದರು.ರಂಭಾಪುರಿ ಪೀಠಕ್ಕೆ ಆಗಮಿಸಿದ ಸಚಿವರು ಪೀಠದ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾಲಯ, ಜಗದ್ಗುರು ರೇಣುಕಾಚಾರ‍್ಯ ಮಂದಿರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ವೀರಭದ್ರಸ್ವಾಮಿ ದೇವಾಲಯದಲ್ಲಿನ ಕಲ್ಲಿನ ಕಂಬದಲ್ಲಿ ಬೆಳೆಯುತ್ತಿರುವ ನಂದಿ ವಿಗ್ರಹದ ಕುರಿತು ಮಾಹಿತಿ ಕೇಳಿ ಪಡೆದರು.ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ‍್ಯ ಸ್ವಾಮೀಜಿ ಅವರನ್ನು ಭೇಟಿಯಾಗಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ಈ ವೇಳೆ ಜಗದ್ಗುರು ಸಚಿವ ಸೋಮಣ್ಣ ಅವರಿಗೆ ಶಾಲು, ಹಾರ, ಫಲ ಮಂತ್ರಾಕ್ಷತೆ ಹಾಗೂ ಶ್ರೀ ಪೀಠದ ಬೆಳಗು ನೆನಪಿನ ಕಾಣಿಕೆ ನೀಡಿ ಆರ್ಶಿರ್ವದಿಸಿದರು.ರಂಭಾಪುರಿ ಡಾ.ವೀರಸೋಮೇಶ್ವರ ಶ್ರೀಗಳು ಸುದ್ದಿಗಾರರಿಗೆ ಮಾಹಿತಿ ನೀಡಿ, ಸಚಿವರು ಜಗದ್ಗುರುಗಳೊಂದಿಗೆ ಪ್ರಸ್ತುತ ವಿದ್ಯಮಾನಗಳ ಕುರಿತು ಕೆಲ ಕಾಲ ಚರ್ಚಿಸಿದ್ದು, ಪ್ರಮುಖವಾಗಿ ರಂಭಾಪುರಿ ಪೀಠಕ್ಕೆ ಭದ್ರಾ ನದಿಯಿಂದ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ. ಇದರೊಂದಿಗೆ ಮಲೆನಾಡಿನಲ್ಲಿ ಇಲ್ಲಿರುವ ಕೆಲವೊಂದು ಸೂಕ್ಷ್ಮ ಸಮಸ್ಯೆಗಳ ಬಗ್ಗೆಯೂ ಗಮನಸೆಳೆದಿದ್ದು, ಸಚಿವರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ ಜನರ ಸೇವೆ ಮಾಡಲು ಬದ್ಧನಿದ್ದೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

ಇದಲ್ಲದೇ ಶ್ರೀಪೀಠದಲ್ಲಿ ಐತಿಹಾಸಿಕವಾಗಿ ನಿರ್ಮಾಣ ಮಾಡುತ್ತಿರುವ ಜಗದ್ಗುರು ರೇಣುಕಾಚಾರ‍್ಯರ ೫೧ ಅಡಿ ಎತ್ತರದ ಶಿಲಾಮಯ ಮೂರ್ತಿಗೆ ಕೊಡುಗೆ ನೀಡಲು ಕೋರಿದ್ದು, ವೈಯುಕ್ತಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೆರೆಯಲ್ಲಿ ನಡೆಯುವ ರಂಭಾಪುರಿ ಪೀಠದ ದಸರಾ ಸಮ್ಮೇಳನಕ್ಕೆ ಸಚಿವರನ್ನು ಆಹ್ವಾನಿಸಿದ್ದು, ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ ಎಂದರು.ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚರ‍್ಯರು, ಶಾಸಕ ಟಿ.ಡಿ.ರಾಜೇಗೌಡ, ತಾಲೂಕು ಬಿಜೆಪಿ ವಕ್ತಾರ ಜಗದೀಶ್ಚಂದ್ರ, ಹೋಬಳಿ ಬಿಜೆಪಿ ನಿಯೋಜಿತ ಅಧ್ಯಕ್ಷ ಪ್ರದೀಪ್ ಕಿಚ್ಚಬ್ಬಿ, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚರ‍್ಯ, ಸದಸ್ಯ ಮಹೇಶ್ ಆಚರ‍್ಯ, ಹೋಬಳಿ ಬಿಜೆಪಿ ಅಧ್ಯಕ್ಷ ಮಹಮ್ಮದ್ ಹನೀಫ್ ಮತ್ತಿತರರು ಇದ್ದರು.ರೈಲ್ವೆ ಸಚಿವರಿಗೆ ವಿವಿಧ ಮನವಿ: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸಚಿವ ವಿ.ಸೋಮಣ್ಣ ಅವರಿಗೆ ಶೃಂಗೇರಿ ಕ್ಷೇತ್ರಕ್ಕೆ ರೈಲ್ವೆ ಸೌಲಭ್ಯ ನೀಡುವಂತೆ ಕೋರಿ ಮನವಿ ಸಲ್ಲಿಸಿದರು. ನಾಗರೀಕ ವೇದಿಕೆ ಸಂಚಾಲಕ ಹಿರಿಯಣ್ಣ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಇಂಟರ್‌ಸಿಟಿ ರೈಲು ಸೌಲಭ್ಯ ನೀಡಬೇಕು ಎಂದು ಕೋರಿ ಮನವಿ ನೀಡಿದರು.