ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ ಕಣ್ಮರೆಯಾಗಿದ್ದ ಸೇನಾ ವಿಮಾನ 8 ವರ್ಷಗಳ ಬಳಿಕ ಪತ್ತೆ

| Published : Jan 14 2024, 01:34 AM IST

ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ ಕಣ್ಮರೆಯಾಗಿದ್ದ ಸೇನಾ ವಿಮಾನ 8 ವರ್ಷಗಳ ಬಳಿಕ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ ಸೇರಿ 29 ಯೋಧರಿದ್ದ ವಾಯುಸೇನೆಯ ವಿಮಾನ ನಾಪತ್ತೆಯಾದ 8 ವರ್ಷಗಳ ಬಳಿಕ ಶುಕ್ರವಾರ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ. ಚೆನ್ನೈ ನೌಕಾನೆಲೆಯಿಂದ 310 ಕಿಲೋ ಮೀಟರ್​ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ ಸೇರಿ 29 ಯೋಧರಿದ್ದ ಭಾರತೀಯ ವಾಯುಸೇನೆಯ ವಿಮಾನ ನಾಪತ್ತೆಯಾದ 8 ವರ್ಷಗಳ ಬಳಿಕ ಶುಕ್ರವಾರ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ. 2016ರ ಜುಲೈ 22ರಂದು ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ಗೆ ಪ್ರಯಾಣದ ವೇಳೆ ಸಂಪರ್ಕ ಕಡಿತಗೊಂಡು ವಾಯುಸೇನೆಯ ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು. ಚೆನ್ನೈ ನೌಕಾನೆಲೆಯಿಂದ 310 ಕಿಲೋ ಮೀಟರ್​ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಸೇನಾ ಕರ್ತವ್ಯದ ನಿಮಿತ್ತ ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ಗೆ 2016ರ ಜುಲೈ 22ರಂದು ಪ್ರಯಾಣ ಬೆಳೆಸಿದ್ದ ಭಾರತೀಯ ವಾಯುಸೇನೆಯ ಎಎನ್‌-32 ಯುದ್ಧ ವಿಮಾನ ಬಂಗಾಳಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡಿತ್ತು. ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ಸುಳಿವು ನಿಗೂಢವಾಗಿತ್ತು. ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು, 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್‌ಬ್ಲೇರ್‌ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು. ಅಂದು ನಾಪತ್ತೆಯಾದ ವಿಮಾನ ಇದೀಗ ಪತ್ತೆಯಾಗಿದೆ ಎಂದು ವಾಯುಸೇನೆ ಪ್ರಕಟಣೆ ಹೊರಡಿಸಿದೆ. ಅಂದು ವಿಮಾನ ಪತ್ತೆಗಾಗಿ ಕೇಂದ್ರ ಸರ್ಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳ ಕಾಲ ನಡೆಸಿದ್ದ ಯತ್ನಗಳೆಲ್ಲವೂ ವಿಫಲವಾಗಿದ್ದವು. ಇದಕ್ಕಾಗಿ ಎರಡು ಪಿ-8ಎ ವಿಮಾನ, ಮೂರು ಡೋರ್ನಿಯರ್‌ ವಿಮಾನ, ಒಂದು ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ವಿಮಾನವೊಂದು ಕುರುಹೇ ಇಲ್ಲದಂತೆ ನಾಪತ್ತೆಯಾಗಿರುವುದು ವಾಯುಪಡೆಯ ಇತಿಹಾಸ‌ದಲ್ಲೇ ಮೊದಲು ಎನ್ನುವಂತಾಗಿತ್ತು.ಏಕನಾಥ ಶೆಟ್ಟಿ ಕುಟುಂಬ ಪರಿಸ್ಥಿತಿ ಹೇಗಿದೆ?: ಅಂದಿನಿಂದ ಇಂದಿನವರೆಗೂ ಪತಿ ಏಕನಾಥ ಶೆಟ್ಟಿ ಅವರ ಬರುವಿಕೆಯ ನಿರೀಕ್ಷೆಯಲ್ಲಿ ಪತ್ನಿ ಜಯಂತಿ ಶೆಟ್ಟಿ, ಮಕ್ಕಳಾದ ಅಕ್ಷಯ್‌, ಆಶಿಕಾ ಶೆಟ್ಟಿ ಮತ್ತು ಕುಂಬಸ್ಥರು ಕಾಯುತ್ತಿದ್ದಾರೆ. ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಭಾಗಿಯಾದ ಏಕನಾಥ ಅವರು ಮಾಜಿ ಸೈನಿಕ ದಿವಂಗತ ಕೃಷ್ಣ ಶೆಟ್ಟಿ ಮತ್ತು ಸುನಂದಾ ದಂಪತಿಯ ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ 1965ರ ಜೂ. 30ರಂದು ಮಂಗಳೂರಿನ ಕುತ್ತಾರಿನಲ್ಲಿ ಜನಿಸಿದ್ದರು. ಪಿಯುಸಿ ಮುಗಿಸಿ 1985ರಲ್ಲಿ ಭೂ ಸೇನೆ (ಮದ್ರಾಸ್‌ ರೆಜಿಮೆಂಟ್‌)ಗೆ ಸೇರ್ಪಡೆಗೊಂಡು ತಮಿಳುನಾಡಿನ ವೆಲ್ಲಿಂಗ್‌ಟನ್‌ನಲ್ಲಿ ತರಬೇತಿ ಮುಗಿಸಿ, ಶ್ರೀಲಂಕಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಕಾಶ್ಮೀರ ಸಹಿತ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು. 1999ರಲ್ಲಿ ಮದ್ರಾಸ್‌ ರೆಜಿಮೆಂಟ್‌ನಲ್ಲಿ ನಾಯಕ್‌ ಹುದ್ದೆಗೆ ಪದೋನ್ನತಿ ಹೊಂದಿ 1999ರಲ್ಲಿ ನಡೆದ ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕ (ಆಪರೇಷನ್‌ ವಿಜಯ್‌) ಪಡೆದುಕೊಂಡಿದ್ದರು.