ಬತ್ತದ ಸುಗ್ಗಿ ಆರಂಭವಾಗುತ್ತಿದ್ದಂತೆ ಲಗ್ಗೆ ಇಟ್ಟ ಕುರಿಗಳ ಹಿಂಡು

| Published : Nov 24 2025, 03:00 AM IST

ಸಾರಾಂಶ

ತೀವ್ರ ಅತಿವೃಷ್ಟಿಯ ನಡುವೆಯೂ ಮಳೆಗಾಲ ಮುಗಿದು ಬತ್ತ ಕಟಾವು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಯಲು ಸೀಮೆ ಪ್ರದೇಶದ ಕುರಿಗಳ ಹಿಂಡು ತಂಡೋಪತಂಡವಾಗಿ ಮುಂಡಗೋಡ ಕಡೆಗೆ ಪಾದಾರ್ಪಣೆ ಮಾಡುತ್ತಿದ್ದು, ಎಲ್ಲಿ ನೋಡಿದರೂ ಈಗ ಕುರಿಗಳ ಹಿಂಡು ಕಾಣಸಿಗುತ್ತಿದೆ.

ಬತ್ತ ಕಟಾವು ಪ್ರಕ್ರಿಯೆ ಆರಂಭ । ರೈತರ ಗದ್ದೆಯಲ್ಲಿ ತಮ್ಮ ಕುರಿಗಳೊಂದಿಗೆ ಠಿಕಾಣಿ

ಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ತೀವ್ರ ಅತಿವೃಷ್ಟಿಯ ನಡುವೆಯೂ ಮಳೆಗಾಲ ಮುಗಿದು ಬತ್ತ ಕಟಾವು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಯಲು ಸೀಮೆ ಪ್ರದೇಶದ ಕುರಿಗಳ ಹಿಂಡು ತಂಡೋಪತಂಡವಾಗಿ ಮುಂಡಗೋಡ ಕಡೆಗೆ ಪಾದಾರ್ಪಣೆ ಮಾಡುತ್ತಿದ್ದು, ಎಲ್ಲಿ ನೋಡಿದರೂ ಈಗ ಕುರಿಗಳ ಹಿಂಡು ಕಾಣಸಿಗುತ್ತಿದೆ.

ಮಳೆಗಾಲ ಮುಗಿದು ಬತ್ತದ ಸುಗ್ಗಿ ಆರಂಭವಾಗುತ್ತಿದ್ದಂತೆ ಕುರುಬರು ತಮ್ಮ ನೂರಾರು ಸಂಖ್ಯೆಯ ಕುರಿಗಳೊಂದಿಗೆ ಊರೂರು ಅಲೆದು ರೈತರ ಗದ್ದೆಯಲ್ಲಿ ತಮ್ಮ ಕುರಿಗಳೊಂದಿಗೆ ಟಿಕಾಣಿ ಹೂಡಿ ರೈತರಿಂದ ಧಾನ್ಯ ಪಡೆಯುವ ಸಂಪ್ರದಾಯ ಮೊದಲಿನಿಂದಲೂ ಬಂದಿದೆ. ಅದೇ ರೀತಿ ಈ ವರ್ಷವು ಕೂಡ ಕುರುಬರು ಕುರಿಗಳ ಹಿಂಡಿನೊಂದಿಗೆ ಕುಟುಂಬ ಸಮೇತ ತಮ್ಮ ಸಾಕು ಪ್ರಾಣಿ ಕುದುರೆ ಹಾಗೂ ನಾಯಿಗಳೊಂದಿಗೆ ಈ ಭಾಗಕ್ಕೆ ಲಗ್ಗೆ ಇಡುತ್ತಿದ್ದಾರೆ.

ಗೋಕಾಕ, ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಅಥಣಿ ಮುಂತಾದ ಕಡೆಯ ಕುರುಬರು ಮಳೆಗಾಲ ಮುಗಿಯುತ್ತಿದ್ದಂತೆ ಗುಳೇ ಹೊರಟು ಈ ಭಾಗಕ್ಕೆ ಲಗ್ಗೆ ಇಡುತ್ತಾರೆ. ಪ್ರತಿ ವರ್ಷ ಇಲ್ಲಿಯ ಪ್ರಧಾನ ಬೆಳೆ ಬತ್ತದ ಫಸಲು ಬರುವ ಈ ವೇಳೆಯಲ್ಲಿ ಈ ಭಾಗ ಪ್ರವೇಶಿಸುವ ಕುರುಬರು, ಕೆಲ ತಿಂಗಳುಗಳ ಕಾಲ ತಿರುಗಾಡಿ ತಮ್ಮ ಕುರಿಗಳ ಸಂತಾನೋತ್ಪತ್ತಿ ಮಾಡಿಕೊಂಡು ಮಳೆಗಾಲ ಆರಂಭವಾಗುವ ವೇಳೆಗೆ ಮರಳಿ ತಮ್ಮ ಊರಿಗೆ ಹೋಗುವುದು ಸಾಮಾನ್ಯ.

ಬತ್ತದ ಕಣಜ ಎಂದೇ ಹೆಸರುವಾಸಿಯಾಗಿರುವ ಮುಂಡಗೋಡ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಬರು ಬರುತ್ತಾರೆ. ಒಂದು ದಿನ ಒಂದು ಕಡೆ ಠಿಕಾಣಿ ಹೂಡಿದರೆ ಇನ್ನೊಂದು ದಿನ ಮತ್ತೊಂದು ಊರಿನ ರೈತರ ಭೂಮಿಯಲ್ಲಿ ಬೀಡು ಬಿಡುತ್ತಾರೆ. ಇದರಿಂದ ಕುರಿಗಳಿಗೆ ಮೇವು ಸಿಗುತ್ತದೆ ಅಲ್ಲದೆ ರೈತರ ಗದ್ದೆಗಳಿಗೆ ಗೊಬ್ಬರ ಸಿಕ್ಕಂತೆಯೂ ಆಗುತ್ತದೆ. ಇದರಿಂದ ರೈತರು ಕೂಡ ಕುರಿ ಹಿಂಡು ತಮ್ಮ ಗದ್ದೆಯಲ್ಲಿ ಬೀಡು ಬಿಡಲಿ ಎಂದು ಬಯಸುತ್ತಾರೆ.

ಕುರಿ ಕಾಯುವವರು ವರ್ಷದಲ್ಲಿ ೬ ತಿಂಗಳು ಹಗಲು ರಾತ್ರಿ ಚಳಿ, ಗಾಳಿ, ಬಿಸಿಲು ಎಂಬುವುದನ್ನು ಲೆಕ್ಕಿಸದೇ ವರ್ಷದಲ್ಲಿ ಅರ್ಧ ಕಾಲ ಕುಟುಂಬ ಸಮೇತ ಸಾಕು ಪ್ರಾಣಿ ನಾಯಿ, ಕುದುರೆ ಹೀಗೆ ತಮ್ಮ ಬಳಗವನ್ನು ಕಟ್ಟಿಕೊಂಡು ಊರು ಕೆರೆ ಅಲೆಯುತ್ತಾರೆ. ನೂರಾರು ಸಂಖ್ಯೆ ಕುರಿಗಳೊಂದಿಗೆ ಇಲ್ಲಿಗೆ ಆಗಮಿಸುವ ಇವರು, ಒಂದಕ್ಕೆ ನಾಲ್ಕು ಪಟ್ಟು ಕುರಿಗಳ ಸಂತತಿ ಹೆಚ್ಚಿಸಿಕೊಂಡು ಸಾವಿರಾರು ಕುರಿಗಳೊಂದಿಗೆ ಮರಳುತ್ತಾರೆ. ಅಲ್ಲದೆ ರೈತರ ಭೂಮಿಯಲ್ಲಿ ಬೀಡು ಬಿಡಲು ದಿನಕ್ಕೆ ಇಂತಿಷ್ಟು ದವಸ ಧಾನ್ಯದ ಫಸಲು ರೈತರಿಂದ ಪಡೆದುಕೊಳ್ಳುತ್ತಾರೆ. ಕುರಿಗಳ ತಂಡ ಕೃಷಿ ಗದ್ದೆಯಲ್ಲಿ ವಾಸ ಮಾಡಿ ಮೂತ್ರ ಹಾಗೂ ಹಿಕ್ಕಿ ಹಾಕುವುದರಿಂದ ಗದ್ದೆಗೆ ಫಲವತ್ತಾಗ ಗೊಬ್ಬರ ದೊರೆತಂತಾಗುತ್ತದೆ. ಹಾಗಾಗಿ ರೈತರೂ ಕೂಡ ಕುರಿಗಳ ತಂಡವನ್ನು ವಾಸ ಮಾಡಿಸಿಕೊಳ್ಳಲು ಮುಗಿಬೀಳುತ್ತಾರೆ. ಸದ್ಯ ಬತ್ತದ ಕೊಯ್ಲು ಆರಂಭವಾಗಿದ್ದು ಖಾಲಿಯಾಗುವ ಬತ್ತದ ಭೂಮಿಯಲ್ಲಿ ಬೀಡು ಬಿಡಲು ನಿತ್ಯ ಕುರಿಗಳ ದಂಡು ಆಗಮಿಸುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಫಸಲು ಕೂಡ ಉತ್ತಮವಾಗಿದೆ. ಈಗ ಬತ್ತದ ಫಸಲನ್ನು ಕಟಾವು ಮಾಡಿಸುತ್ತಿದ್ದಾರೆ. ಈ ಮಧ್ಯೆ ಪ್ರತಿ ವರ್ಷದಂತೆ ಈ ಬಾರಿ ಕೂಡ ಆಗಮಿಸಿದ್ದು, ಎಲ್ಲೆಂದರಲ್ಲಿ ಬೀಡು ಬಿಟ್ಟಿದ್ದಾರೆ. ಒಟ್ಟಾರೆ ಕುರಿಗಳ ಹಿಂಡು ಬೀಡು ಬಿಡುವುದರಿಂದ ರೈತರ ಭೂಮಿ ಫಲವತ್ತಾಗುವುದರೊಂದಿಗೆ ಕುರುಬರ ಕುರಿಗಳ ಸಂತಾನೋತ್ಪತ್ತಿ ಕೂಡ ಆಗುತ್ತದೆ.