ಸಾರಾಂಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಆಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆಯಲ್ಲಿ ಸಲಹೆಗಳ ಮಹಾಪೂರವೇ ಹರಿದು ಬಂದಿತು.
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಅಧಿಕಾರಿಗಳು ಪ್ರಮುಖವಾಗಿ ತಮ್ಮ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದರು. ಜಿಲ್ಲೆಯ ಹಲವು ತಾಲೂಕುಗಳಿಗೆ ಯಾವುದೇ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು ವರ್ಗಾವಣೆಯಾದರೂ ಬಾರದೇ ಇರುವುದು ಈ ತಾಲೂಕುಗಳಿಗೆ ನೇಮಕವಾಗುವವರಿಗೆ ವಿಶೇಷ ಭತ್ಯೆ ನೀಡಬೇಕು ಎಂಬ ಸಲಹೆ ವ್ಯಕ್ತವಾದರೆ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗೆ ಬದಲಾಗಿ ನೇಮಕವಾಗುವ ಅತಿಥಿ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.ನಿವೃತ್ತ ಪ್ರಾಂಶುಪಾಲ ಮಹೇಶ ಗೋಳಿಕಟ್ಟೆ, ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಯಾವುದೇ ವಿಶ್ವ ವಿದ್ಯಾಲಯ ಇಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ಅಡ್ವಾನ್ಸಡ್ ಕೋರ್ಸಗಳನ್ನು ಅಳವಡಿಸಬೇಕು, ಕೈಗಾ, ಸೀ ಬರ್ಡ್ ನಂತಹ ರಾಷ್ಟ ಮಟ್ಟದ ಸಂಸ್ಥೆಗಳಿದ್ದರೂ ಇಲ್ಲಿನ ಯುವ ಜನತೆಗೆ ಅಲ್ಲಿ ಉದ್ಯೋಗವಕಾಶವಿಲ್ಲ,ಈ ಸಂಸ್ಥೆಗಳಲ್ಲಿ ಇಲ್ಲಿನ ಯುವಕರಿಗೆ ನೇಮಕ ಮಾಡಿಕೊಳ್ಳಬೇಕು, ಈ ಕುರಿತಂತೆ ಅವರಿಗೆ ಅಪ್ರೆಂಟಿಸ್ ತರಬೇತಿ ನೀಡಬೇಕು, ಜಿಲ್ಲೆಯಲ್ಲಿಯೇ ಉನ್ನತ ಶಿಕ್ಷಣ ದೊರೆಯುವಂತಾಗಬೇಕು, ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು, ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಆಗಬೇಕು, ಮೊಬೈಲ್ ನೆಟ್‌ವರ್ಕ ಸಮಸ್ಯೆ ಸರಿಪಡಿಸಬೇಕು ಎಂಬ ಸಲಹೆಗಳು ವ್ಯಕ್ತವಾದವು.
ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪಕ್ಕದ ಸಣ್ಣ ಜಿಲ್ಲೆಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮ ಜಿಲ್ಲೆಯು ಅದಕ್ಕಿಂತ ದೊಡ್ಡ ಜಿಲ್ಲೆಯಾದರೂ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಗುತ್ತಿದೆ, 8 ನೇ ತರಗತಿ ನಂತರ ಶಾಲೆಗಳಲ್ಲಿ ಕಡ್ಡಾಯವಾಗಿ ಕೌಶಲ್ಯ ಶಿಕ್ಷಣ ಅಳವಡಿಸಬೇಕು, ಜಿಲ್ಲೆಯು ಕರಾವಳಿ, ಪಶ್ಚಿಮ ಘಟ್ಟ, ಬಯಲು ಸೀಮೆ, ಮಲೆನಾಡು ಪ್ರದೇಶ ಹೊಂದಿದ್ದು ಜಿಲ್ಲೆಗೆ ಸಂಬಂಧಿಸಿದಂತೆ ಪೀಪಲ್ ಪ್ಲಾನ್ರೂಪಿಸಿ ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡಬೇಕು,ಎಂಡೋ ಸಲ್ಫಾನ್ ಪೀಡಿತರಿಗೆ ಸೂಕ್ತ ನೆರವು ದೊರೆಯಬೇಕು ಎಂದು ಸ್ಕೂಡವೇಸ್ ಸಂಸ್ಥೆಯ ಡಾ. ವೆಂಕಟೇಶ್ ನಾಯಕ್ ಪ್ರಸ್ತಾಪಿಸಿದರು.
ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಅತ್ಯಂತ ಪರಿಣಾಮಕಾರಿಯಾದ ವರದಿ ಸಲ್ಲಿಕೆಗೆ ಅಧಿಕಾರಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ನೀಡುವ ಸಲಹೆಗಳು ಅತ್ಯಂತ ಪ್ರಮುಖವಾಗಿದ್ದು, ಈ ಎಲ್ಲ ಸಲಹೆಗಳನ್ನು ಕ್ರೂಢೀಕರಿಸಿ ಉತ್ತಮ ವರದಿ ಸಲ್ಲಿಸಲಾಗುವುದು ಎಂದು ಸಮಿತಿಯ ಸದಸ್ಯ ಡಾ. ಎಸ್.ಟಿ. ಬಾಗಲಕೋಟಿ ಹೇಳಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಡಿಎಫ್ಓ ರವಿಶಂಕರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮತ್ತಿತರರು ಇದ್ದರು.;Resize=(128,128))
;Resize=(128,128))