ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಇಲ್ಲಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ತರಾವರಿ ಹೂಗಳದ್ದೇ ಕಾರು ಬಾರು. ಎತ್ತ ನೋಡಿದರೂ ಚೆಲುವೆಲ್ಲ ನನ್ನದೇ ಎಂದು ನಗೆ ಬೀರುತ್ತಿರುವ ಹೂಗಳ ರಾಶಿ. ಸಾಲದೆಂಬಂತೆ ಹೃನ್ಮನ ತಣಿಸುವ ಕಲಾಕೃತಿ. 22ರ ಭಾನುವಾರ ಸಂಜೆಗೆ ಹೂಗಳ ಈ ಬಾರಿಯ ಚೆಲವು ಮುಕ್ತಾಯಗೊಳ್ಳಲಿದೆ.

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಹೊರಮಠ, ಒಳಮಠ ದೃಶ್ಯ ಹಾಗೂ ಶ್ರೀ ತಿಪ್ಪೇರುದ್ರ ಸ್ವಾಮಿಯವರ ಭವ್ಯ ಕಲಾಕೃತಿ, ಸಾಹಿತಿ ಬಿ.ಎಲ್.ವೇಣು, ಜಾನೂರ್ ಕಲಾಕೃತಿಗಳು, ಐತಿಹಾಸಿಕ ಕೋಟೆ, ಒಂಟಿಕಲ್ಲು ಬಸವಣ್ಣ ಹಾಗೂ ವೀರವನಿತೆ ಒನಕೆ ಓಬವ್ವರ ಮರಳು ಕಲೆ ಪ್ರದರ್ಶನ, ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ, ಸಾಲುಮರದ ತಿಮ್ಮಕ್ಕ ಕಲಾಕೃತಿಗಳು 33ನೇ ಫಲ-ಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷ ಆಕರ್ಷಣೆ ಆಗಿವೆ.

ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತಿದೆ.

ನಾಯಕನಹಟ್ಟಿಯಲ್ಲಿ ನೆಲಸಿರುವ ಸುಪ್ರಸಿದ್ಧ ತಿಪ್ಪೇರುದ್ರಸ್ವಾಮಿ ಒಳ ಮಠದ ಪ್ರತಿರೂಪ ಈ ಬಾರಿಯ ವಿಶೇಷಣದಲ್ಲಿ ಒಂದಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಶಕ್ತಿ ಕೇಂದ್ರವಾಗಿರುವ ಹೊರಮಠ, ಒಳಮಠದ ದೃಶ್ಯವನ್ನು ಹಾಗೂ ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಲಾಗಿದೆ.


ಖ್ಯಾತ ಕತೆಗಾರ, ಸಂಭಾಷಣೆಕಾರ ಡಾ.ಬಿ.ಎಲ್ ವೇಣು ಅವರಿಗೆ ಸಂಭ್ರಮದ ಗೌರವ ಸಮರ್ಪಣೆಯ ಕಲಾಕೃತಿ ಸೂಜಿಗಲ್ಲಿನಂತೆ ನೋಡುಗರ ಹಿಡಿದಿಡುತ್ತಿದೆ. ಜಾನೂರು ಕಲೆ ಮಹಿಳೆಯರ ಆಕರ್ಷಣೆಗಳಲ್ಲಿ ಒಂದಾಗಿದೆ. ಜಾನೂರು ಕಲೆ ಇಂಡೊನೇಷ್ಯಾದ್ದಾಗಿದೆ. ಜಾನೂರು ಎಂದರೆ ತೆಂಗಿನ ಗರಿ, ಕೂನಿಂಗ್ ಎಂದರೆ ಹಳದಿ. ತೆಂಗಿನ ಎಲೆಗಳನ್ನು ಬಳಸಿ ಮಾಡುವ ಸಾಂಪ್ರದಾಯಿಕ ಕಲೆಯಾಗಿದ್ದು ಪರಿಚಯಿಸುವ ವಿವಿಧ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ಕೋಟೆಯ ದೃಶ್ಯ ಹಾಗೂ ಒನಕೆ ಓಬವ್ವ ಅವರ ಮರಳು ಕಲೆ, ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ, ಸಾಲು ಮರದ ತಿಮ್ಮಕ್ಕರವರ ಕಲಾಕೃತಿ ಈ ಬಾರಿಯ ಪ್ರದರ್ಶನ ಹೈಲೈಟ್. ಇದರ ಜೊತೆಗೆ ಜಟಕಾ ಬಂಡಿ (ಟಾಂಗಾ), ಹುಡುಗ, ಹುಡುಗಿ, ಟಾಂಗಾ ಹಾಗೂ ಕುದುರೆ ಕಲಾಕೃತಿಗಳಿಗೆ ಹೂವಿನಿಂದ ಅಲಂಕಾರ ಮಾಡಿ ವಿಶೇಷವಾಗಿ ಪ್ರದರ್ಶಿಸಲಾಗಿದೆ.

ಸುಮಾರು 70ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮೆಲಾಪೋಡಿಯಂ, ಕ್ಲಿಯೋಂ (ಸ್ಪೈಡರ್), ಹಾಲಿಯಾಕ್, ಗಾಕ್ಸೀನಿಯ, ಕೆಲಂಚಾ, ಇಂಪೇಷನ್ಸ್ (ಮಿಕ್ಸ್‍ಡ್), ಡಾಲಿಯಾ, ಸಾಲ್ವಿಯಾ (ಕೆಂಪು, ನೀಲಿ, ಬಿಳಿ,) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಪೆಟೂನಿಯಾ (ಸಿಂಗಲ್ ಮತ್ತು ಡಬಲ್ ವರ್ಲ್), ಕಾಸ್‍ಮಾಸ್ ಮಿಕ್ಸ್ (ಡ್ವಾರ್ಫ್ ಮತ್ತು ಟಾಲ್), ಬಾಲ್ಸಂ, ಜಿರೇನಿಯಂ ಮಿಕ್ಸ್, ಆಂಟಿರಿನಮ್ ಮಿಕ್ಸ್ ಡಯಾಂತಸ್ ಮಿಕ್ಸ್, ಕ್ಯಾಲೊಂಡುಲಾ, ಗಜೇನಿಯ ಮಿಕ್ಸ್ , ಪೆಂಟಾಸ್ ಮಿಕ್ಸ್, ಯುಪೋರ್ಬಿಯ ಮಿಲ್ಲಿ, ಬಿಗೋನಿಯಾ, ವಿಂಕಾ, ವರ್‍ಬೆನಾ ಪುಷ್ಪ ರಸಿಕರ ಮನ ತಣಿಸುತ್ತಿವೆ.