ವಿದೇಶಿಗರನ್ನು ಸೆಳೆಯುತ್ತಿರುವ ಜನಪದ ಶೈಲಿ

| Published : Jun 18 2024, 12:53 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಜನಪದ ಶೈಲಿ ಪ್ರತಿಯೊಬ್ಬರನ್ನೂ ಮನಸೂರೆಗೊಳ್ಳುತ್ತದೆ. ಜನಪದ ಸಾಹಿತ್ಯಕ್ಕೆ ವಿದೇಶಿಯರು ಮಾರುಹೋಗುತ್ತಿರುವುದು ಖುಷಿಯ ಸಂಗತಿ ಎಂದು ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜನಪದ ಶೈಲಿ ಪ್ರತಿಯೊಬ್ಬರನ್ನೂ ಮನಸೂರೆಗೊಳ್ಳುತ್ತದೆ. ಜನಪದ ಸಾಹಿತ್ಯಕ್ಕೆ ವಿದೇಶಿಯರು ಮಾರುಹೋಗುತ್ತಿರುವುದು ಖುಷಿಯ ಸಂಗತಿ ಎಂದು ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳ ೯೦ನೇ ಜಾತ್ರಾಮಹೋತ್ಸವದ ಅಂಗವಾಗಿ ಶ್ರೀಮಠ, ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸೊಗಡು ಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದಿನ ಆಧುನಿಕ ಕಾಲದಲ್ಲಿ ಜನಪದವೆಂದು ಅಶ್ಲೀಲವಾಗಿ ರಚನೆ ಮಾಡಿ ಹಾಡುತ್ತಿರುವುದು ಜನಪದ ಸಾಹಿತ್ಯಕ್ಕೆ ಧಕ್ಕೆ ಬರುವ ಸಾಧ್ಯತೆಯಿದೆ. ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ. ಅದು ಎಂದಿಗೂ ಅಳಿಯಲ್ಲ ಎಂದರು.

ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಅನುಭಾವದ ನುಡಿಗಟ್ಟುಗಳಿರುವುದರಿಂದ ಮಹತ್ವ ಪಡೆದುಕೊಂಡಿದೆ. ಗ್ರಾಮೀಣ ಜೀವನದಲ್ಲಿ ಜನಪದ ಸಾಹಿತ್ಯ ಹಾಸುಹೊಕ್ಕಾಗಿದೆ. ಜನಪದ ಉಳಿದರೆ ಸಾಹಿತ್ಯ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಜನಪದ ಗಾಯಕ ಬಸವರಾಜ ಹಾರಿವಾಳ, ಶಿಕ್ಷಕಿ ದ್ರಾಕ್ಷಾಯಿಣಿ ಮಂಟ್ಯಾಳ ಅವರು ಜನಪದ ಹಾಡುಗಳ ಮೂಲಕ ಜನಪದ ಸಾಹಿತ್ಯವನ್ನು ಅನಾವರಣಗೊಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಜನಪದ ವಿಶಿಷ್ಟ ಸಂಸ್ಕ್ರತಿ ಹೊಂದಿದೆ. ಜನಪದವಿಲ್ಲದೇ ಹೋದರೆ ಬದುಕು ಅಸ್ತಿರವಾಗಲಿದೆ. ಕೇಂದ್ರ ಸರ್ಕಾರದ ಬೇಟಿ ಪಡಾವೋ, ಬೇಟಿ ಬಚಾವೋ ರೀತಿಯಲ್ಲಿ ಬೇಟಾ ಪಡಾವೋ, ಬೇಟಾ ಬಚಾವೋ ಆಂದೋಲನ ಜಾರಿಗೆ ತರುವ ಅಗತ್ಯವಿದೆ ಎಂದರು.

ತಾಳಿಕೋಟಿಯ ಶಿವಲೀಲಾ ಮುರಾಳ, ತಾಲೂಕು ಕಜಸಾಪ ಅಧ್ಯಕ್ಷ ದೇವೇಂದ್ರ ಗೋನಾಳ ಉಪನ್ಯಾಸ ನೀಡಿದರು. ಮಸಬಿನಾಳದ ಸಿದ್ದರಾಮ ಶಿವಯೋಗಿಗಳು, ಪಡೇಕನೂರಿನ ಮಲ್ಲಿಕಾರ್ಜನ ಸ್ವಾಮೀಜಿ, ಚಡಚಣದ ಷಡಕ್ಷರಿ ಸ್ವಾಮೀಜಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ನಿವೃತ್ತ ಉಪ ಪ್ರಾಂಶುಪಾಲ ಎಸ್.ಎಸ್.ಝಳಕಿ, ಬಸವರಾಜ ಮೇಟಿ ಇತರರು ಇದ್ದರು. ರಶ್ಮಿ ಪಾಟೀಲ ಪ್ರಾರ್ಥಿಸಿದರು. ಶಿವು ಮಡಿಕೇಶ್ವರ ಸ್ವಾಗತಿಸಿದರು. ಕೊಟ್ರೇಶ ಹೆಗಡ್ಯಾಳ, ಶಾಂತಾ ಬಾರಿಕಾಯಿ ನಿರೂಪಿಸಿದರು, ಸಿದ್ದು ಬಾಗೇವಾಡಿ ವಂದಿಸಿದರು.