ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸಣ್ಣ ಸಣ್ಣ ಸಮುದಾಯಗಳು ಸಹ ಸಹಕಾರಿ ಸಂಘಗಳನ್ನು ಸ್ಥಾಪಿಸಿ, ಆರ್ಥಿಕವಾಗಿ ಬಲಿಷ್ಠರಾಗುವತ್ತ ಹೆಜ್ಜೆ ಇರಿಸಿದ್ದು, ಕುಲ ಕಸುಬ ಮಾಡುವವರಿಗೆ ಸಹಕಾರಿ ಸಂಸ್ಥೆಗಳಿಂದ ಹೆಚ್ಚಿನ ಸಾಲ ಸೌಲಭ್ಯ ದೊರೆತಿರುವುದು, ಅವರ ಆರ್ಥಿಕ ಸದೃಢತೆಗೆ ಬುನಾದಿ ಹಾಕಿದೆ ಎಂದು ಅಡಿಟರ್ ಟಿ.ಅರ್.ಅಂಜನಪ್ಪ ತಿಳಿಸಿದ್ದಾರೆ.ನಗರದ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಸಿಲ್ವರ್ ಜ್ಯುಬಲಿ ಕಟ್ಟಡದಲ್ಲಿ ಸ್ವಾಮಿ ವಿವೇಕಾನಂದ ಸಹಕಾರ ಸಂಘ, ಸ್ಫೂರ್ತಿ ವನಿತಾ ಮಂಡಳಿ,ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್, ಹಿಂದು ಸಾದರ ಕ್ಷೇಮಾಭಿವೃದ್ಧಿ ಸಂಘ, ಪರಮಹಂಸ ಪತ್ತಿನ ಸಹಕಾರ ಸಂಘ ಇವುಗಳ ಸಹಯೋಗದಲ್ಲಿ ಮಾಜಿ ಮಂತ್ರಿ ದಿವಂಗತ ಲಕ್ಷ್ಮೀನರಸಿಂಹಯ್ಯ (ಲಚ್ಚಣ್ಣ) ಅವರ 24ನೇ ಸಂಸ್ಮರಣೆ, ಸಹಕಾರರತ್ನ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ, ಪ್ರತಿಭಾಪುರಸ್ಕಾರ ಹಾಗೂ 2025ನೇ ವರ್ಷದ ಬ್ಯಾಂಕಿನ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕುಲಕಸುಬ ಮಾಡುತ್ತಿರುವ ಜನರಿಗೆ ಆಯಾಯ ಸಮುದಾಯಗಳ ಬ್ಯಾಂಕುಗಳು, ಅವರ ಅವಶ್ಯಕತೆಗಳನ್ನು ಅರಿತು ಸಾಲ ಸೌಲಭ್ಯ ನೀಡಿರುವ ಪರಿಣಾಮ, ಬ್ಯಾಂಕುಗಳ ಬೆಳೆಯುವುದರ ಜೊತೆಗೆ, ಸಮುದಾಯಗಳು ಅರ್ಥಿಕವಾಗಿ ಸದೃಢವಾಗುತ್ತಿವೆ ಎಂದರು.ಇಂದು ಬ್ಯಾಂಕುಗಳು ತಮ್ಮಲ್ಲಿರುವ ಜನರ ಹಣವನ್ನು ಉಳಿಸಿ, ಬೆಳೆಸಲು ಒಳ್ಳೆಯ ಸಾಲಗಾರರನ್ನು ಹುಡುಕಾಟದಲ್ಲಿವೆ. ಜನರ ಬಳಿ ಅಗತ್ಯಕ್ಕಿಂತಲೂ ಹೆಚ್ಚು ಹಣ ಇರುವ ಕಾರಣ ಹಣದುಬ್ಬರ ಕಾಡುತ್ತಿದ್ದರೆ. ಆರ್.ಬಿ.ಐ ರೇಪೋದರ ಹೆಚ್ಚಳ ಮಾಡದೆ, ಬ್ಯಾಂಕುಗಳು ಠೇವಣಿ ಇರಿಸುವ ಹಣದಲ್ಲಿ ಶೇ.50ರಷ್ಟು ಕಡಿಮೆ ಮಾಡುವ ಮೂಲಕ ಹಣದ ಒಳ ಹರಿವು ಹೆಚ್ಚಾಗಿ, ಸಣ್ಣ ಸಣ್ಣ ಸಮುದಾಯಗಳ ಸಹಕಾರಿ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಪೈಪೋಟಿ ನಡೆಸಲಾಗದ ಸ್ಥಿತಿ ತಂದೊಡ್ಡಿದೆ. ಇದು ಸಹಕಾರ ಚಳವಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ ಎಂದು ಆಡಿಟರ್ ಆಂಜನಪ್ಪ ನುಡಿದರು.
ಶಾಸಕರಾಗಿ, ಸಚಿವರಾಗಿ ಲಕ್ಷ್ಮೀನರಸಿಂಹಯ್ಯ ಊರಿಗೆ ಒಳ್ಳೆಯದನ್ನೇ ಬಯಸಿದವರು. 1996ರಲ್ಲಿ ಮಹಾಪೋಷಕರಾಗಿ ಸ್ವಾಮಿ ವಿವೇಕಾನಂದ ಸಹಕಾರ ಸಂಘವನ್ನು ಪ್ರಾರಂಭಿಸಲು ಸಹಕಾರ ನೀಡಿದವರು. ಅವರ ಒಡನಾಡಿಗಳು ಎಂದು ಹೇಳಿಕೊಳ್ಳುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಲಕ್ಷ್ಮೀನರಸಿಂಹಯ್ಯನವರಂಹ ರಾಜಕಾರಣಿಗಳು ವಿರಳ ಎಂದರು.ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಲಕ್ಷ್ಮೀನರಸಿಂಹಯ್ಯ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಅಂದಿನ ಕಾಲದಲ್ಲಿ ನಗರಸಭೆ ಅಧ್ಯಕ್ಷರೊಂದಿಗೆ ಜಗಳವಾಡಿ, ಜನತೆಯ ಹಿತದೃಷ್ಟಿಯಿಂದ ಕ್ಯಾತ್ಸಂದ್ರದಿಂದ ತುಮಕೂರಿನ ವರಗೆ ಬೀದಿ ದೀಪ ಅಳವಡಿಸುವಂತೆ ಮಾಡಿದವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿಗೆ ಹೋಗಿ, ದೊಡ್ಡವರ ಸಹವಾಸದಿಂದ ರಾಜಕಾರಣಕ್ಕೆ ಪದಾರ್ಪಣೆ ಮಾಡಿ, ಶಾಸಕರು ಆಗಿ, ಮಂತ್ರಿಯೂ ಆದರು.ಸಹಕಾರಿ ಸಂಘಗಳ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಬಿದಿದ್ದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ,ಕಳೆದ 24 ವರ್ಷಗಳಿಂದಲು ದಿ.ಲಕ್ಷ್ಮೀನರಸಿಂಹಯ್ಯ ನವರ ಪುಣ್ಯಸ್ಮರಣೆಯನ್ನು ಬ್ಯಾಂಕಿನ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ. 1996ರಲ್ಲಿ 600 ಜನ ಸದಸ್ಯರು, 6ಲಕ್ಷ ರು ಷೇರು ಬಂಡವಾಳದೊಂದಿಗೆ ಆರಂಭವಾದ ಸ್ವಾಮಿ ವಿವೇಕಾನಂದ ಸಹಕಾರ ಸಂಘ,ದಶಮಾನಸೋತ್ಸವ, ರಜತಮಹೋತ್ಸವ ದಾಟಿ,27ವರ್ಷಕ್ಕೆ ಮುನ್ನೆಡೆಯುತ್ತಿದೆ. ಇಂದು 124 ಕೋಟಿ ಬಂಡವಾಳ ಹೊಂದಿದೆ. ಇದರಲ್ಲಿ ದುಡಿಯುವ ಬಂಡವಾಳವೇ 30 ಕೋಟಿ ಇದೆ. 80ಕೋಟಿ ಸಾಲ ನೀಡಲಾಗಿದೆ. 2023-24ನೇ ಹಣಕಾಸು ವರ್ಷದಲ್ಲಿ 2.66 ಕೋಟಿ ಲಾಭ ಗಳಿಸಿದೆ ಎಂದರು.ಇದೇ ವೇಳೆ ನೀಟ್ ಪರೀಕ್ಷೆಯಲ್ಲಿ 1430ನೇ ರ‍್ಯಾಂಕ್ ಪಡೆದ ಸಾಯಿ ಕಿರಣ್ ಅವರಿಗೆ, ದ್ವಿತಿಯ ಪಿಯುಸಿಯಲ್ಲಿ ಐದನೇ ರ‍್ಯಾಂಕ್ ಪಡೆದ ಹಂಸ.ಬಿ.ಎಸ್ ಮತ್ತು 7ನೇ ರ‍್ಯಾಂಕ್ ಪಡೆದ ಗಗನಶ್ರೀ ಅವರುಗಳಿಗೆ ದತ್ತಿನಿಧಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಸಹಕಾರ ರತ್ನಪ್ರಶಸ್ತಿ ಪಡೆದ ವೀರಶೈವ ಬ್ಯಾಂಕಿನ ಮಲ್ಲಿಕಾರ್ಜುನ್,ಅಡಿಟರ್ ಅಂಜನಪ್ಪ, ಲಕ್ಷ್ಮೀನಾರಾಯಣ್, ಮೆಹಬೂಬ್ ಪಾಷ, ಗುರುಪ್ರಸಾದ್, ಶಿವಕುಮಾರ್ ಅಣ್ಣೇನಹಳ್ಳಿ, ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಬಿ.ಜಿ.ಕೃಷ್ಣಪ್ಪ ಸೇರಿದಂತೆ ಹಲವರನ್ನು ಅಭಿನಂದಿಸಿದರು.ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಹೆಚ್.ನಂಜುಂಡಯ್ಯ,ಕಾರ್ಯಕಾರಿ ಮಂಡಳಿ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.