ತಾಲೂಕಿನ ಕೈಗಾದಲ್ಲಿ ಅಣುವಿದ್ಯುತ್ ಉತ್ಪಾದನೆಯ 5 ಮತ್ತು 6ನೇ ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಭಾರೀ ಗಾತ್ರದ ಯಂತ್ರೋಪಕರಣದ ಭಾಗವನ್ನು ಹೊತ್ತ ಭಾರೀ ಸರಕು ಸಾಗಾಟದ ವಾಹನ ಬುಧವಾರ ನಗರದಲ್ಲಿ ಸಂಚರಿಸಿತು.
ಕನ್ನಡಪ್ರಭ ವಾರ್ತೆ ಕಾರವಾರತಾಲೂಕಿನ ಕೈಗಾದಲ್ಲಿ ಅಣುವಿದ್ಯುತ್ ಉತ್ಪಾದನೆಯ 5 ಮತ್ತು 6ನೇ ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಭಾರೀ ಗಾತ್ರದ ಯಂತ್ರೋಪಕರಣದ ಭಾಗವನ್ನು ಹೊತ್ತ ಭಾರೀ ಸರಕು ಸಾಗಾಟದ ವಾಹನ ಬುಧವಾರ ನಗರದಲ್ಲಿ ಸಂಚರಿಸಿತು.ಬೃಹತ್ ಗಾತ್ರದ ಸರಕು ಸಾಗಿಸುತ್ತಿದ್ದ ಹಿನ್ನಲೆ ನಗರದ ಸುಭಾಷ್ ವೃತ್ತದಿಂದ ಸವಿತಾ ಸರ್ಕಲ್ ಮಾರ್ಗವಾಗಿ ಕೈಗಾ ರಸ್ತೆಗೆ ಸಂಚರಿಸಿದ್ದು, ಪರಿಣಾಮ ನಗರದಲ್ಲಿ ಕೆಲಕಾಲ ವಿದ್ಯುತ್ ಅಡಚಣೆ ಹಾಗೂ ಸಂಚಾರ ಅಸ್ತವ್ಯಸ್ತ ಉಂಟಾಯಿತು.ಕಳೆದ ಕೆಲ ದಿನಗಳ ಹಿಂದೆ ಈ ಬೃಹತ್ ಸರಕನ್ನು ಸಾಗಿಸುವ ನಿಟ್ಟಿನಲ್ಲಿ ನಗರದ ಕೋರ್ಟ್‌ನಿಂದ ರಸ್ತೆಗೆ ಚಾಚಿಕೊಂಡಿದ್ದ ಬೃಹತ್ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಮಾರ್ಗವನ್ನು ಬೃಹತ್ ಸರಕು ಸಾಗಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಅದರಂತೆ ಬುಧವಾರ ನಗರ ಪ್ರವೇಶಿಸಿದ 18-20 ಅಡಿ ಎತ್ತರದ ಬೃಹತ್ ಸರಕು ಹೊತ್ತ ವಾಹನ ಗಂಟೆಗಳ ಕಾಲ ನಗರದ ಪ್ರಮುಖ ರಸ್ತೆ ಮಾರ್ಗದಲ್ಲಿ ಹಾದು ಹೋಗಿದ್ದು, ಈ ವೇಳೆ ಭಾರೀ ಯಂತ್ರದ ಭಾಗಕ್ಕೆ ಅಡ್ಡಲಾಗಿದ್ದ ವಿದ್ಯುತ್ ತಂತಿ, ಕೇಬಲ್‌ಗಳನ್ನು ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಸಂಚಾರ ಠಾಣೆಯ ಪೊಲೀಸರು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸುವ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಕಾರ್ಯ ಮಾಡಿದರು.ಬುಧವಾರ ನಗರಕ್ಕೆ ಆಗಮಿಸಿದ್ದ ಈ ವಾಹನ ದಿನಕ್ಕೆ ಕೇವಲ 8 ಕಿಮೀ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಇದೇ ಫೆಬ್ರುವರಿ ತಿಂಗಳಿನಲ್ಲಿ ಗುಜರಾತ್‌ನಿಂದ ಕೈಗಾಕ್ಕೆ ತನ್ನ ಪ್ರಯಾಣವನ್ನು ಆರಂಭಿಸಿತ್ತು. ಭಾರೀ ಎತ್ತರದ ಈ ಸರಕನ್ನು ಎತ್ತರದ ಅಗತ್ಯಕ್ಕೆ ತಕ್ಕಂತೆ ನಿಗದಿತ ಕೋನದಲ್ಲಿ ಅಡ್ಡ ತಿರುಗಿಸಿಯೂ ಸಾಗಿಸುವ ಯಾಂತ್ರಿಕ ವ್ಯವಸ್ಥೆ ವಾಹನದಲ್ಲಿದ್ದು, ಇದಕ್ಕಾಗಿ ತಜ್ಞರು ಹಾಗೂ ಸಾಕಷ್ಟು ಸಿಬ್ಬಂದಿ ಸರಕಿನ ಜೊತೆಗೆ ಸಂಚರಿಸುತ್ತಾರೆ.ಕಾರವಾರ-ಕೈಗಾ ಮಾರ್ಗ ಸಾಕಷ್ಟು ಅಗಲವಾದ, ಸಮರ್ಪಕ ರಸ್ತೆ ಹೊಂದಿಲ್ಲವಾಗಿದ್ದು, ರಸ್ತೆಯಲ್ಲಿ ಸಾಕಷ್ಟು ಕಡೆ ಮರಗಿಡಗಳು, ವಿದ್ಯುತ್ ಲೈನ್ ಹಾದುಹೋಗಿವೆ. ಅಲ್ಲದೇ ಕೆಲವೆಡೆ ದುರ್ಬಲ ಸೇತುವೆಗಳು ಸಹ ಇವೆ ಎನ್ನಲಾಗಿದೆ. ಹೀಗಾಗಿ ಈ ಬೃಹತ್ ಸರಕನ್ನು ಸುರಕ್ಷಿತವಾಗಿ ಸಾಗಿಸುವ ನಿಟ್ಟಿನಲ್ಲಿ ಮೊದಲೇ ಮಾರ್ಗವನ್ನು ಪರೀಕ್ಷಿಸಿಕೊಂಡು ಯಂತ್ರದ ಭಾಗದ ಎತ್ತರಕ್ಕೆ ಅನುಗುಣವಾಗಿ ಮಾರ್ಗ ಸುಗಮವಾಗಿರುವುದನ್ನು ಖಚಿತಪಡಿಸಿಕೊಂಡು ಭಾರೀ ಸರಕನ್ನು ಸಾಗಿಸುವ ಕಾರ್ಯ ಮಾಡಲಾಗುತ್ತಿದೆ. ಬಹುತೇಕ ರಾತ್ರಿ ವೇಳೆ ಇಲ್ಲವೇ ಬೆಳಗಿನ ಜಾವದಲ್ಲಿ ಕೈಗಾಕ್ಕೆ ತೆರಳುವ ಯಂತ್ರೋಪಕರಣಗಳನ್ನು ಸಾಗಾಟ ಮಾಡಲಾಗುತ್ತದೆ.ಇನ್ನು ಮೊದಲ ಬಾರಿಗೆ ನಗರದಲ್ಲಿ ಈ ರೀತಿಯ ಭಾರೀ ಗಾತ್ರದ ಯಂತ್ರದ ಭಾಗವನ್ನು ಸಾಗಿಸುತ್ತಿರುವುದನ್ನು ಜನಸಾಮಾನ್ಯರು ಹಾಗೂ ವಾಹನ ಸವಾರರು ಕುತೂಹಲದಿಂದ ವೀಕ್ಷಿಸಿದರು.