ಪ್ರಾದೇಶಿಕ ಕಲೆ, ಸಾಂಸ್ಕೃತಿಕ ಶ್ರೀಮಂತಿಕೆ ಪರಿಚಯಿಸುವ ಪ್ರತಿಭಾ ಕಾರಂಜಿ

| Published : Feb 09 2024, 01:46 AM IST

ಸಾರಾಂಶ

ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಗುರಿಗೆ ತಕ್ಕಂತೆ ತಮ್ಮ ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು. ಶಾಲೆಗಳಲ್ಲಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶ ನೀಡುತ್ತವೆ.

ಧಾರವಾಡ: ಪ್ರಾದೇಶಿಕವಾಗಿ ಭಾಷೆ, ಸಂಸ್ಕೃತಿ, ಕಲೆ, ವೇಷಭೂಷಣಗಳಲ್ಲಿ ವ್ಯತ್ಯಾಸಗಳಿರುತ್ತವೆ. ಆದರೆ ಮಕ್ಕಳು ತಮ್ಮಲ್ಲಿರುವ ಕಲೆ, ಪ್ರತಿಭೆಗಳ ಮೂಲಕ ನಾಡಿನ ಏಕತೆಯನ್ನು ಸಾರುತ್ತಾರೆ. ಈ ಕಾರ್ಯಕ್ಕೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಪೂರಕ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಇಲ್ಲಿಯ ವಿದ್ಯಾಗಿರಿ ಜೆಎಸ್‌ಎಸ್‌ ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಸಂಗೀತ ಪರಿಕರಗಳನ್ನು ನುಡಿಸಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಗುರಿಗೆ ತಕ್ಕಂತೆ ತಮ್ಮ ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು. ಶಾಲೆಗಳಲ್ಲಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶ ನೀಡುತ್ತವೆ. ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಜಿಲ್ಲೆಯ ಸಂಸ್ಕೃತಿ, ಸಾಹಿತ್ಯ, ಕಲೆಗಳನ್ನು ಪರಿಚಯಿಸಲು ಉತ್ತಮ ಅವಕಾಶ. ಕಾರ್ಯಕ್ರಮವನ್ನು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಸಂಘಟಿಸಿದ್ದು ಹೆಮ್ಮೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ಪ್ರತಿಭಾ ಕಾರಂಜಿ ಮೂಲಕ ಸರ್ಕಾರ ಮಾಡುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಸೋಲು, ಗೆಲುವು ಸಾಮಾನ್ಯ. ಇದರಿಂದ ಅವರಲ್ಲಿನ ಪ್ರತಿಭೆ ಬೆಳೆಯುತ್ತದೆ. ಸ್ಪರ್ಧೆಗಳು ಜೀವನದ ಪಾಠಗಳನ್ನು ಕಲಿಸುವ ಮೆಟ್ಟಿಲುಗಳು. ಶಿಕ್ಷಣ ಇಲಾಖೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಪ್ರಯತ್ನಿಸುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ಗುಪ್ತವಾಗಿರುವ ಕಲೆ, ಪ್ರತಿಭೆಗಳನ್ನು ಮುಕ್ತವಾಗಿ ಪ್ರಸ್ತುತ ಪಡಿಸಬೇಕು. ಯಾರಲ್ಲೂ ಸಾಧನೆಗೆ ಅಡ್ಡಿಯಾಗುವ ಹಿಂಜರಿಕೆ, ಕೀಳರಿಮೆ ಇರಬಾರದು. ತಮ್ಮಲ್ಲಿರುವ ಧೈರ್ಯ, ಆತ್ಮವಿಶ್ವಾಸಗಳನ್ನು ನಂಬಿ ಮುನ್ನಡೆಯಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ನಿರ್ದೇಶಕಿ ಮಮತಾ ನಾಯಕ ಮಾತನಾಡಿದರು. ಸಾನ್ನಿಧ್ಯ ವಹಿಸಿ, ಮುರಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಅಜಿತ ಪ್ರಸಾದ, ಜಂಟಿ ನಿರ್ದೇಶಕ ಈಶ್ವರ ನಾಯಕ್, ಡಯಟ್‌ ಪ್ರಾಚಾರ್ಯರಾದ ಜಯಶ್ರೀ ಕಾರೇಕರ, ಜೆಎಸ್‌ಎಸ್ ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯಾಯ, ಅಧಿಕಾರಿಗಳಾದ ಜಿ.ಎನ್. ಮಠಪತಿ, ಎಸ್.ಎಂ. ಹುಡೆದಮನಿ, ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮತ್ತಿತರರು ಇದ್ದರು.

ಫೋರ್ಥ್‌ ವೇವ್ ಸಂಸ್ಥೆಯ ಸಹಕಾರದಲ್ಲಿ ಧಾರವಾಡ ಶಹರದ ವಿಶೇಷಚೇತನ ಮಕ್ಕಳಿಂದ ನೃತ್ಯದೊಂದಿಗೆ ಜರುಗಿದ ಪ್ರಾರ್ಥನಾ ಕಾರ್ಯಕ್ರಮವು ಸಭಿಕರ ಗಮನ ಸೆಳೆಯಿತು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಸ್ವಾಗತಿಸಿದರು. ಕರಡಿಗುಡ್ಡ ಸರ್ಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಪೂರ್ಣಿಮಾ ಮುಕುಂದಿ ಕಾರ್ಯಕ್ರಮ ನಿರೂಪಿಸಿದರು. ಫೆ. 8 ಹಾಗೂ 9ರಂದು ಜೆಎಸ್‌ಎಸ್‌ ಕಾಲೇಜಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಜರುಗಲಿವೆ.