ಆಳುವ ಸರ್ಕಾರಗಳಿಂದ ದೇಶಕ್ಕೆ ವಂಚನೆ

| Published : Mar 20 2024, 01:15 AM IST

ಸಾರಾಂಶ

ಕನಕಪುರ: ಬೆಂಗಳೂರು ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಬಿಎಸ್ಪಿ ಪಕ್ಷಕ್ಕೆ ಮತ ನೀಡಿ ಎಂದು ಬಿಎಪಿ ಪಕ್ಷದ ಲೋಕಸಭಾ ಅಭ್ಯರ್ಥಿ ಡಾ. ಚಿನ್ನಪ್ಪ ವೈ.ಚಿಕ್ಕಹಾಗಡೆ ಮನವಿ ಮಾಡಿದರು.

ಕನಕಪುರ: ಬೆಂಗಳೂರು ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಬಿಎಸ್ಪಿ ಪಕ್ಷಕ್ಕೆ ಮತ ನೀಡಿ ಎಂದು ಬಿಎಪಿ ಪಕ್ಷದ ಲೋಕಸಭಾ ಅಭ್ಯರ್ಥಿ ಡಾ. ಚಿನ್ನಪ್ಪ ವೈ.ಚಿಕ್ಕಹಾಗಡೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದರೂ ಆಳುವ ಸರ್ಕಾರಗಳು ಜನರಿಗೆ ಉಚಿತ ಶಿಕ್ಷಣ, ಆರೋಗ್ಯ, ಉದ್ಯೋಗ ಕಲ್ಪಿಸಿಕೊಡದೆ ವಂಚನೆ ಮಾಡಿವೆ. ಈ ಕ್ಷೇತ್ರದಲ್ಲಿ ಮೂರೂ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ ಲೋಕಸಭೆಯಲ್ಲಿ ಈ ಕ್ಷೇತ್ರದ ಸಮಸ್ಯೆ ಬಗ್ಗೆ ಧ್ವನಿ ಎತ್ತಿಲ್ಲ. ಮೂರು ಬಾರಿ ಸಂಸದರಾದ ಡಿ.ಕೆ. ಸುರೇಶ್ ಅವರು ಈ ಭಾಗದ ರೈತರ, ಬಡವರ ಪರವಾಗಿ ಶಾಶ್ವತವಾದ ಒಂದೇ ಒಂದು ಯೋಜನೆ ಜಾರಿಗೆ ತಂದಿಲ್ಲ. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆ ಜಾರಿ ಮಾಡುವುದಾಗಿ ಇಡೀ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗು ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ಮಾಡಿದ ನಾಯಕರು ಈಗ ಅವರದೇ ಸರ್ಕಾರ ಇದ್ದರೂ ಮೌನವಾಗಿ ಕೂತಿರುವುದೇಕೆ? ಕೇವಲ ಚುನಾವಣಾ ಪ್ರಚಾರಕ್ಕೆ ಮೇಕೆದಾಟು ಯೋಜನೆ ಬಳಸಿಕೊಂಡರು ಎಂದು ದೂರಿದರು.

ಹತ್ತು ವರ್ಷಗಳ ಇವರ ಸಾಧನೆಯೆಂದರೆ ಅವರ ಆಸ್ತಿ ದ್ವಿಗುಣಗೊಂಡಿರುವುದು ಹಾಗೂ ಸ್ವಜಾತಿಯ ಕೆಲ ಪುಡಾರಿಗಳ ಅಭಿವೃದ್ಧಿ ಬಿಟ್ಟರೆ ಮತ್ತೇನೂ ಆಗಿಲ್ಲ. ಬಾಬಾ ಸಾಹೇಬರ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುವುದು ನಮ್ಮ ಪಕ್ಷದ ಪ್ರಣಾಳಿಕೆಯಾಗಿದ್ದು, ಹಾಗಾಗಿ ಬಿಎಸ್ಪಿ ಪಕ್ಷಕ್ಕೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ ಮಾತನಾಡಿ, ಕ್ಷೇತ್ರದಲ್ಲಿ ಕಮಿಷನ್ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಕಾಮಗಾರಿಗಳ ಹೆಸರಿನಲ್ಲಿ ಅವರ ಹಿಂಬಾಲಕರ ಮೂಲಕ ಕಮಿಷನ್ ದಂಧೆ ಮಾಡುತ್ತಿದ್ದಾರೆ. ಸಂಸತ್ ನಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಸಂಸದ ಡಿ.ಕೆ.ಸುರೇಶ್ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರು ಮಾಡಬೇಕಾದ ಕೆಲಸವನ್ನು ತಾವೇ ಮಾಡುತ್ತಾ ಅವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ದೂರಿದರು.

ತಾಲೂಕಿನಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯ ಎಲ್ಲವೂ ಇವರೇ ಎಂಬಂತೆ ವರ್ತಿಸುತ್ತಿದ್ದು, ತಾಲೂಕಿನಲ್ಲಿ ಯಾವುದೇ ಕೆಲಸ ಆಗಬೇಕಾದರೂ ಶಿವಕುಮಾರ್, ಸುರೇಶ್ ಅವರ ಅಪ್ಪಣೆ ಬೇಕಿದೆ. ಬಡವರ ಕೆಲಸ ಕಾರ್ಯಗಳು, ಸರ್ಕಾರದ ಯೋಜನೆಗಳು ಇವರ ಚಾರಿಟಬಲ್ ಟ್ರಸ್ಟ್ ಮೂಲಕವೇ ನಡೆಯುತ್ತಿರುವುದು ದುರಂತ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಆರು ದಶಕಗಳಿಂದ ದೇಶವನ್ನು ಆಳಿದ ಕಾಂಗ್ರೆಸ್ ಅಭಿವೃದ್ಧಿ ಮೇಲೆ ಮತ ಕೇಳುವುದನ್ನು ಬಿಟ್ಟು ಗ್ಯಾರಂಟಿ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ ಅಂದರೆ ಇವರ ಕೊಡುಗೆ ಶೂನ್ಯ. ದಲಿತರು, ಹಿಂದುಳಿದವರ ಪರ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ದುಡ್ಡಿನ ಆಟ ಆಡುತ್ತಾರೆ. ಆಸೆ, ಆಮಿಷ ತೋರಿಸುತ್ತಿದ್ದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಚುನಾವಣಾ ಆಯೋಗ ನಿಷ್ಕ್ರಿಯಗೊಂಡು ಡಿ.ಕೆ.ಶಿವಕುಮಾರ್ ಡಿ.ಕೆ.ಸುರೇಶ್ ಆಯೋಗ ಜಾರಿಯಲ್ಲಿದೆ. ಈ ಚುನಾವಣೆಯಲ್ಲಿ ಅದಕ್ಕೆ ಅವಕಾಶ ಕೊಡದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ

ಬಿಎಸ್ಪಿ ಗೆಲ್ಲಿಸಿ ಎಂದರು.ರಾಜ್ಯ ಉಸ್ತುವಾರಿ ಎಂ.ನಾಗೇಶ್, ಜಿಲ್ಲಾ ಸಂಯೋಜಕ ಉಮೇಶ್, ವೆಂಕಟಾಚಲ ಜಿಲ್ಲಾ ಉಪಾಧ್ಯಕ್ಷ ಮಹದೇವ್, ಕಾರ್ಯದರ್ಶಿ ರಮೇಶ್, ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಕಾಂತರಾಜು, ಉಪಾಧ್ಯಕ್ಷ ಪಾಪಣ್ಣ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಮುತ್ತುರಾಜ್, ಮಹಿಳಾ ಘಟಕ ಪಾರ್ವತಮ್ಮ, ಬಸವ ಮಾದಮ್ಮ, ದೇವರಾಜ್, ಚಂದ್ರಕಾಂತ್, ಅಜೇಯ್, ಅರುಣ್, ಶಿವಲಿಂಗಯ್ಯ, ಸುರೇಶ್, ತಬರೇಜ್ ಪಾಷಾ, ಗೌರಿಶಂಕರ್ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:ಕನಕಪುರದಲ್ಲಿ ಬಿಎಸ್ಪಿ ಲೋಕಸಭಾ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಎಸ್ಟಿ ಮುಖಂಡರು ಹಾಜರಿದ್ದರು.