ಸಾರಾಂಶ
ಉಡುಪಿ: ಇಲ್ಲಿನ ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್ ಚರ್ಚ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಹಿಂದುಗಳ ಮನೆಗಳಿಗೆ ಭೇಟಿ ನೀಡಿ ಶುಭಾಶಯ ಕೋರಿ, ಸಿಹಿತಿಂಡಿಗಳನ್ನು ಹಂಚಲಾಯಿತು. ಅಂಗಡಿಗಳ ವ್ಯಾಪಾರಿಗಳಿಗೆ, ರಿಕ್ಷಾ ಚಾಲಕರಿಗೆ ಹಾಗೂ ಬಾಡಿಗೆ ವಸತಿಯಲ್ಲಿರುವ ಬಾಂದವರಿಗೆ ಸಹ ಸಿಹಿಯೊಡನೆ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ನಂತರ ಈ ದೀಪಗಳ ಹಬ್ಬವನ್ನು ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಭಾವಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಥೆಡ್ರಲ್ ಧರ್ಮಗುರು ಮೊನ್ಸಿಂಞಾರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು, ನಾವು ನಮಗಾಗಿ ಜೀವಿಸದೆ, ಪರಸ್ಪರರಿಗೋಸ್ಕರ ಬೆಳಕಾಗಿ ಉಜ್ವಲವಾಗಿ ಜೀವಿಸಬೇಕು. ಒಗ್ಗೂಡಿ ಸೌಹಾರ್ದದಿಂದ ಬಾಳಬೇಕು ಹಾಗೂ ಸಾಮರಸ್ಯದಿಂದ ಬೆಳೆಯಬೇಕು ಎಂದು ಕರೆ ನೀಡಿದರು.
ಕಾಥೆಡ್ರಲ್ ಸಹಾಯಕ ಗುರು ರೆ. ಫಾ. ಪ್ರದೀಪ್ ಕಾರ್ಡೋಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಹಾಗೂ ಅಂಗಡಿ ಮಾಲಕರ ಸಂಘದ ಸಂಚಾಲಕ ವಿಜಯ್ ಸುವರ್ಣ ಅವರು, ಕ್ರೈಸ್ತ ಹಾಗೂ ಹಿಂದೂ ಬಾಂದವರ ಬಾಂದವ್ಯ ಅಪ್ಪಟ ಪ್ರೀತಿಮಯ. ಬೇದಭಾವವಿಲ್ಲದೆ ಐಕ್ಯತಾ ಭಾವದಿಂದ ಹಬ್ಬವನ್ನು ಆಚರಿಸುತ್ತಿರುವುದು ಹರ್ಷದ ವಿಷಯ ಎಂದು ಹೇಳಿದರು.ಹಬ್ಬದ ಪ್ರಯುಕ್ತ ಎಂಟು ಮಂದಿ ಉಭಯ ಸಮಾಜಸೇವಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸಲಾಯಿತು.ಚರ್ಚ್ ಕಥೋಲಿಕ್ ಸಭೆಯ ಅಧ್ಯಕ್ಷೆ ಮಾರ್ಸೆಲಿನ್ ಶೇರಾ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್ ಸಿಕ್ವೇರ, ಕಾರ್ಯದರ್ಶಿ ಎವ್ಜಿನ್ ರೆಬೆಲ್ಲೊ, 20 ಆಯೋಗಗಳ ಸಂಯೋಜಕಿ ಪ್ರೇಮ ಲುವಿಸ್ ಹಾಗೂ ಆಯೋಗದ ಸಚೇತಕ್ ಜೆಫ್ರಿ ಡಯಾಸ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))