ಅಸಹಾಯಕತೆ, ಸಂಕಷ್ಟಗಳಿಂದ ರೋಸಿಹೊಗಿರುವ ಕಾಲಘಟ್ಟದಲ್ಲಿ ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಪುಸ್ತಕ ಜನಾರ್ಪಣೆ ಮಾಡುತ್ತಿರುವುದು ಚೈತನ್ಯದಾಯಕವಾಗಿದೆ ಎಂದು ಲೇಖಕಿ ಬಾ.ಹ. ರಮಾಕುಮಾರಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ, ತುಮಕೂರುಅಸಹಾಯಕತೆ, ಸಂಕಷ್ಟಗಳಿಂದ ರೋಸಿಹೊಗಿರುವ ಕಾಲಘಟ್ಟದಲ್ಲಿ ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಪುಸ್ತಕ ಜನಾರ್ಪಣೆ ಮಾಡುತ್ತಿರುವುದು ಚೈತನ್ಯದಾಯಕವಾಗಿದೆ ಎಂದು ಲೇಖಕಿ ಬಾ.ಹ. ರಮಾಕುಮಾರಿ ಅಭಿಪ್ರಾಯಪಟ್ಟರು.ಅವರು ಸೌಹಾರ್ದ ಕರ್ನಾಟಕ, ಬಂಡಾಯ ಸಾಹಿತ್ಯ ಸಂಘಟನೆ, ಹಾಗೂ ಸಮುದಾಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಪುಸ್ತಕ ಜನಾರ್ಪಣೆ ಮಾಡಿ ಮಾತನಾಡಿದರು.ಬಹುತ್ವ ಭಾರತದ ಆಶಯವನ್ನು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ಸಹಕಾರಿಯಾಗಿದ್ದು, ಸ್ವಾಮಿ ವಿವೇಕಾನಂದ ಸೌಹಾರ್ದ ಸಂಕೇತ ಲೇಖನ ಗಮನಾರ್ಹವಾಗಿದೆ. ಸಾಮಾಜಿಕ ಸಂಕಟವನ್ನು ಅರ್ಥ ಮಾಡಿಸುವ ಈ ಕೃತಿ ಸೌಹಾರ್ದ ಎನ್ನುವುದು ಇಂದು ನಮ್ಮ ಜಪವಾಗಬೇಕು ಎಂಬುದನ್ನು ಸಾರಿ ಹೇಳುತ್ತದೆ. ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್‌ರವರ ಬಹುತ್ವದ ಆಶಯಗಳನ್ನು ಪ್ರತಿಬಿಂಬಿಸುವ, ಸದಾ ಎಚ್ಚರದ ಸ್ಥಿತಿಯನ್ನು ಸ್ಥಿರಿಕರಿಸುವ ಇಂತಹ ಪುಸ್ತಕಗಳು ಪದೇ ಪದೇ ಓದಬೇಕಾದ ತುರ್ತು ಇದೆ ಎಂದು ಪ್ರತಿಪಾದಿಸಿದರು.ಪುಸ್ತಕ ಕುರಿತು ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜ್ಯೋತಿ ಮಾತನಾಡಿ, ಬರಗೂರರ ತಾಯ್ತತನದ ಆಶಯವನ್ನು ಬಿಂಬಿಸುವ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ ಎಲ್ಲರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾಳಜಿವಹಿಸಬೇಕು ಎಂದರು.ದ್ವೇಷದ ಬೆಂಕಿಗೆ ಸೌಹಾರ್ದತೆಯ ನೀರೆರೆದು ಜವಾಬ್ದಾರಿ ಇರುವವರು ಮಧ್ಯಸ್ಥಿಕೆ ವಹಿಸಬೇಕು. ಈ ಪುಸ್ತಕವನ್ನು ಯುವಜನತೆಗೆ ಹೆಚ್ಚು ಹೆಚ್ಚು ತಲುಪಿಸಬೇಕು. ತಾಯ್ತತನಕ್ಕೆ ಸೌಹಾರ್ದತೆಗೆ ಕನ್ನಡ ಭಾಷೆ ಹೆಸರಾಗಿದ್ದು, ಭಾರತೀಯರು ದ್ವೇಷೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಅವರು ಈ ಪುಸ್ತಕ ಹೊಸ ಪ್ರಜ್ಞೆ ಮೂಡಿಸಬಲ್ಲದು ಎಂದು ತಿಳಿಸಿದರು. ದ್ವೇಷೋತ್ಪಾದನೆಯ ಮಾತನಾಡುವ ಜನಕ್ಕೆ ಈ ಕೃತಿ ಭಾರತದಲ್ಲಿ ಕಾಲ ಕಾಲಕ್ಕೆ ನಡೆದಿರುವ ಸಾಮಾಜಿಕ ಬದಲಾವಣೆಗೆ ಕಾರಣರಾದ ಸಂತರ, ಹೋರಾಟಗಾರರ ಇತಿಹಾಸವನ್ನು ದಾಖಲಿಸಿ ಪಾಠ ಹೇಳಿರುವುದು ವಿಶೇಷ ಎಂದರು.ಸಾಹಿತಿ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ. ಓ. ನಾಗರಾಜು ಮಾತನಾಡಿ, ರಾಜ್ಯದ ೨೦ಕ್ಕು ಹೆಚ್ಚು ಜಿಲ್ಲೆಗಳಲ್ಲಿ ಏಕಾಕಾಲದಲ್ಲಿ ಬರಗೂರರ ಈ ಕೃತಿ ಬಿಡುಗಡೆಯ ಜೊತೆಗೆ ೫೦ ಕ್ಕೂ ಹೆಚ್ಚು ಮಂದಿ ಈ ಪುಸ್ತಕ ಕುರಿತ ಮಾತನಾಡುತ್ತಿರುವುದು ದಾಖಲೆಯೇ ಸರಿ ಎಂದರು. ಬರಗೂರು ರಾಮಚಂದ್ರಪ್ಪನವರು ಅಪ್ಪಟ ಪ್ರಜಾಪ್ರಭುತ್ವವಾದಿ ಒಕ್ಕೂಟ ವ್ಯವಸ್ಥೆಯ ಪ್ರತಿಪಾದಕರಾಗಿದ್ದು ಸಂವಿಧಾನದ ಆಶಯಗಳನ್ನು ಈ ಕೃತಿ ಒಳಗೊಂಡಿರುವುದು ವಿಶೇಷ ಎಂದರು.ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್ ಮಾತನಾಡಿ, ದ್ವೇಷ ಅಸೂಯೆ ಅಧಿಕಾರ ಹಿಡಿಯುವ ಅಸ್ತ್ರಗಳಾಗಿರುವ ಇಂದಿನ ಸಂದರ್ಭಗಳಲ್ಲಿ ಸೌಹಾರ್ದತೆಯನ್ನು ಕಟ್ಟುವ ನಿಟ್ಟಿನಲ್ಲಿ ಪುಸ್ತಕ ನೀಡಿರುವ ಬರಗೂರರು ಅಭಿನಂದನಾರ್ಹರು ಅತಿರೇಕದ ಚಟುವಟಿಕೆಗಳ ವಿರುದ್ಧ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕನ್ನಡ ಉಪನ್ಯಾಸಕ ಹಾಗೂ ಚಿಂತಕ ಅಶ್ವತ್ಥನಾರಾಯಣ ಗುಟ್ಟೆ ಮಾತನಾಡಿ ಬರಗೂರರು ತಮ್ಮ ಸಾಮಾಜಿಕ ಸಂಕಷ್ಠಗಳಿಗೆ ಯಾವುದೇ ಧಾರ್ಮಿಕ ಪುಣ್ಯ ಕ್ಷೇತ್ರಗಳನ್ನು ಹುಡುಕಿಕೊಂಡು ಹೋಗುವುದಿಲ್ಲ. ಬದಲಾಗಿ ಬುದ್ಧ, ಬಸವ, ಅಂಬೇಡ್ಕರ್, ವಿವೇಕಾನಂದ, ಕುವೆಂಪು ಹೀಗೆ ಹಲವು ದಾರ್ಶನಿಕರ ವಿಚಾರಗಳನ್ನು ಅಳವಡಿಸಿಕೊಂಡು ಅದನ್ನೆ ಪ್ರತಿಪಾದಿಸುತ್ತಾರೆ. ಬರಗೂರರ ಈ ಕೃತಿ ಸಾಮಾಜಿಕ ಸಂಕಟಗಳಿಗೆ ಮದ್ದಾಗಿ ಕಾರ್ಯನಿರ್ವಹಿಸಬಲ್ಲದು. ಜನಪರ ಸಾಮಾಜಿಕ ಕಾಳಜಿಗೆ ಬದ್ದರಾಗಿರುವ ಬರಗೂರು ಸಾಮಾಜಿಕ ಸಂಕಟಗಳಿಗೆ ಬಾಯಾಗುತ್ತಾರೆ. ಸೌಹಾರ್ದ ಭಾರತವನ್ನು ಪ್ರತಿಪಾದಿಸುವವರಿಗೆ ಈ ಕೃತಿ ಸ್ನೇಹಿತನಂತೆ ಕೆಲಸ ಮಾಡುತ್ತದೆ. ಈ ಕೃತಿಯನ್ನು ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವನ್ನಾಗಿ ಮಾಡಿದಲ್ಲಿ ಸೌಹಾರ್ದ ಬಾರತವನ್ನು ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ಕೆ.ದೊರೈರಾಜ್ ಮಾತನಾಡಿ, ಬರಗೂರರು ಸೌಹಾರ್ದ ಭಾರತವನ್ನು ಕಟ್ಟಲು ಈ ನಿಟ್ಟಿನಲ್ಲಿ ಹೆಚ್ಚು ಕ್ರೀಯಾಶೀಲರಾಗಲು ಈ ಹೊತ್ತಿಗೆಯನ್ನು ಜನತೆಗೆ ಕೊಟ್ಟಿದ್ದಾರೆ. ಸೌಹಾರ್ದ ಭಾರತ ಕಟ್ಟುವವರ ಸಂಖ್ಯೆ ಹೆಚ್ಚಾಗಬೇಕು. ಇಂದು ನಾವು ಯಾರನ್ನು ವಿರೋದಿಸುತ್ತಿದ್ದೇವೊ ಅವರಿಗೆ ಮತ ಹಾಕುತ್ತಿದ್ದೇವೆ ಎಂದು ವಿಷಾದಿಸಿದರು. ದ್ವೇಷ ಹುಟ್ಟುಹಾಕುವವರಿಗೆ ಓಟು ಹಾಕುವುದಾದದರೆ ಅರ್ಥವಿಲ್ಲ. ಜಾತಿವಾದ, ಕೋಮುವಾದ ತನ್ನನ್ನು ತಾನು ಕೊಂದುಕೊಳ್ಳಲು ಸಹಕರಿಸುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ಆಧ್ಯಾತ್ಮದ ಮೂಲಕ, ಧರ್ಮದ ಮೂಲಕ ಇಂದು ಕೋಮುವಾದವನ್ನು ಪಸರಿಸಲಾಗುತ್ತಿದೆ. ನಮ್ಮಲ್ಲಿ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ವಿಷಾದಿಸಿದ ದೊರೈರಾಜ್ ಸೌಹಾರ್ದ ಭಾರತ ಕಟ್ಟಲು ಸಾಹಿತ್ಯ ಆಕರವನ್ನು ಒದಗಿಸುತ್ತದೆ. ಮುಂದಿನ ಪೀಳಿಗೆಗೆ ಈ ಕೃತಿ ಮಾರ್ಗದರ್ಶನ ನೀಡುವಂತಿದ್ದು ನಮಗೆ ಸರ್ವನಾಶದ ಭಾರತ ಬೇಡ, ಸೌಹಾರ್ದ ಭಾರತ ಬೇಕು ಅನ್ನುವುದು ಈ ಕೃತಿಯ ತಿರುಳಾಗಿದ್ದು ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಈ ಪುಸ್ತಕ ಕುರಿತು ಮಾತನಾಡುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಿ.ಸಿ.ಶೈಲಾನಾಗರಾಜ್, ಮಿರ್ಜಾಬಷೀರ್, ಪ್ರೊ. ಪದ್ಮಪ್ರಸಾದ್, ಡಾ. ಲಕ್ಷ್ಮಣದಾಸ್, ರಾಜೇಂದ್ರನಾಯಕ್, ಲಕ್ಷ್ಮೀಕಾಂತರಾಜೇ ಅರಸ್, ಎ. ರಾಮಚಂದ್ರ, ಲಕ್ಷ್ಮಣ್, ಗೋವಿಂದಯ್ಯ ಎಚ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು ರಾಘವೇಂದ್ರ ಎಸ್ ಸ್ವಾಗತಿಸಿ, ಅಶ್ವತ್ಥಯ್ಯ ವಂದಿಸಿ, ಪವನ್‌ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.