ಸಾರಾಂಶ
ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವಿಶ್ವವೇದಾಂತ ಪರಿಷತ್ ಕಾರ್ಯಕ್ರಮ ಶನಿವಾರ ದೇಶ- ವಿದೇಶಗಳ ಸಂತರ ಸಮಾಗಮಕ್ಕೆ ಸಾಕ್ಷಿ ಆಯಿತು
ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವಿಶ್ವವೇದಾಂತ ಪರಿಷತ್ ಕಾರ್ಯಕ್ರಮವು ಶನಿವಾರ ದೇಶ- ವಿದೇಶಗಳ ಸಂತರ ಸಮಾಗಮಕ್ಕೆ ಸಾಕ್ಷಿಯಾಯಿತು. ಸ್ಥಳೀಯ ವಿವಿಧ ಮಠಾಧೀಶರ ಜತೆ ಯುರೋಪಿನ ಕ್ರೊಯೇಶಿಯಾದ ಮಾತೆ ಡಾ. ಕ್ರಿಸ್ಟೀನಾ ಬಾಬಿಕ ಪಾಲ್ಗೊಂಡು ಸಿದ್ಧಾರೂಢರ ಮಹಿಮೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನುಡಿದ ''''ಯೋಗಕ್ಷೇಮಂ ವಹಾಮ್ಯಹಮ್'''' ಎಂಬ ವಾಕ್ಯ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ಸಿದ್ಧರಾಮ ಶ್ರೀಗಳು ಪಾಲ್ಗೊಂಡು ಆಶೀರ್ವಚನ ನೀಡಿ, ಗುರು ಕರುಣೆ ಇಲ್ಲದೇ ಜೀವನವಿಲ್ಲ. ಗುರುಕೃಪೆ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.ಪರಮಾತ್ಮನನ್ನು ಕಾಣಿ
ಯುರೋಪ್ ಕ್ರೊಯೇಶಿಯಾದ ಮಾತೆ ಡಾ. ಕ್ರಿಸ್ಟೀನಾ ಬಾಬಿಕ ಆಶೀರ್ವಚನ ನೀಡಿ, ಶಿವ ಎಂದರೆ ಪ್ರಜ್ಞೆ. ನಮಃ ಶಿವಾಯ ಎಂಬ ಪಂಚಾಕ್ಷರ ಮಂತ್ರವೇ ಭಕ್ತರಿಗೆ ತಾರಕ. ಜಲ, ವಾಯು, ಅಗ್ನಿ, ಭೂಮಿ, ಆಕಾಶ ತತ್ವಗಳಿಂದ ರೂಪಿಸಲ್ಪಟ್ಟಿರುವ ಮನುಷ್ಯ ದೇಹವು ಪ್ರಕೃತಿಯೊಂದಿಗೆ ಸೇರಿಕೊಂಡಿದೆ. ಹಾಗಾಗಿ ಅದು ಪರಮಾತ್ಮ ತತ್ವದಿಂದ ಬೇರೆಯಾಗಿಲ್ಲ. ಆತ್ಮವೇ ಪರಮಾತ್ಮ ಎಂಬುದೇ ಸತ್ಯ. ತನ್ನಲ್ಲಿ ಪರಮಾತ್ಮನನ್ನು ಕಂಡವರೇ ಧನ್ಯರು ಎಂದರು.ಪರಮಾತ್ಮನ ಅವತಾರ
ಹೊಸಪೇಟೆ ಚಿಂತಾಮಣಿ ಮಠದ ಶಿವಾನಂದ ಭಾರತಿ ಚಿಂತಾಮಣಿ ಶ್ರೀಗಳು ಮಾತನಾಡಿ, ಜ. ಶಂಕರಾಚಾರ್ಯರು ಸಂಸ್ಕೃತದಲ್ಲಿ ಬರೆದ ಅದ್ವೈತ ತತ್ವೋಪದೇಶಗಳನ್ನು ಕನ್ನಡದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಜನರಿಗೆ ತಿಳಿಯುವ ಭಾಷೆಯಲ್ಲಿ ತಲುಪಿಸಲು ಪ್ರಯತ್ನಪಟ್ಟು ಸಫಲರಾದ ಶ್ರೀ ಸಿದ್ಧಾರೂಢರು ಪರಮಾತ್ಮನ ಅವತಾರವೇ ಎಂಬುದರಲ್ಲಿ ಸಂದೇಹವಿಲ್ಲ ಎಂದರು.ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಗಳು ಪ್ರವಚನ ನೀಡಿ, ಇಂಥ ವೇದಾಂತ ಪರಿಷತ್ ಕಾರ್ಯಕ್ರಮಗಳು ಭಾರತದ ಪ್ರಾಚೀನ ಸಂಸ್ಕೃತಿಯ ಪುನರುತ್ಥಾನಕ್ಕೆ ಮಹತ್ವದ ಕೊಡುಗೆ ನೀಡಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ರಾಜರಾಜೇಶ್ವರಿ ಪೀಠದ ಮಹಾಮಂಡಲೇಶ್ವರ ಜಯೇಂದ್ರ ಪುರಿ ಶ್ರೀಗಳು. ಉಪ್ಪಾರಟ್ಟಿಯ ನಾಗೇಶ್ವರ ಚೈತನ್ಯ ಸ್ವಾಮೀಜಿ, ಶಿಶುವಿನಹಳ್ಳಿಯ ಶಾಂತಮ್ಮ ತಾಯಿ ಪ್ರವಚನ ನೀಡಿದರು.ಯುವಜನರಿಗೆ ವೇದಾಂತ ಪರಿಷತ್ ಮಾರ್ಗದರ್ಶಿಯಾಗಲಿಹುಬ್ಬಳ್ಳಿ:
ಯುವಜನರು ಭಾರತದ ಪರಂಪರೆ, ಸಂಸ್ಕಾರ ಮರೆತಿರುವ ಇಂದಿನ ಸಂದರ್ಭದಲ್ಲಿ ವಿಶ್ವ ವೇದಾಂತ ಪರಿಷತ್ ನಂತಹ ಕಾರ್ಯಕ್ರಮಗಳು ಅಂಥವರಿಗೆ ಮಾರ್ಗದರ್ಶನ ಮಾಡಲಿ ಎಂದು ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.ನಗರದ ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವಿಶ್ವವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ "ಶೃತಿ ವಿಚಾರ ಚಂದ್ರೋದಯ " ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.ರಾಜನಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು, ಗಜದಂಡ ಸ್ವಾಮಿಗಳು, ಶಿಶುವಿನಾಳದ ಶಾಂತಮ್ಮ ತಾಯಿ, ಕಸ್ತೂರಿ ತಾಯಿ, ತಿರುಪತಿಯ ಸ್ವರೂಪಾನಂದ ಸ್ವಾಮೀಜಿ, ಹುಬ್ಬಳ್ಳಿಯ ಅಭಿನವ ಸಿದ್ಧಾರೂಢ ಸ್ವಾಮೀಜಿ ಮೊದಲಾದವರನ್ನು ಟ್ರಸ್ಟ್ ಕಮಿಟಿ ಪರವಾಗಿ ಸನ್ಮಾನಿಸಲಾಯಿತು.