ಉಡುಪಿ: ವೈಭವದ ಹಗಲು ರಥೋತ್ಸವ ಸಂಪನ್ನ

| Published : Jan 16 2025, 12:48 AM IST

ಸಾರಾಂಶ

ಮಕರ ಸಂಕ್ರಮಣ ಮರುದಿನ ಸಂಪ್ರದಾಯದಂತೆ ಬುಧವಾರ ಉಡುಪಿ ಕೃಷ್ಣ ಮಠದಲ್ಲಿ ವೈಭವದ ಹಗಲು ರಥೋತ್ಸವ ಚೂರ್ಣೋತ್ಸವ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮಕರ ಸಂಕ್ರಮಣದ ಮರುದಿನ, ಸಂಪ್ರದಾಯದಂತೆ ಬುಧವಾರ ಉಡುಪಿ ಕೃಷ್ಣಮಠದಲ್ಲಿ ವೈಭವದ ಹಗಲು ರಥೋತ್ಸವ ಯಾನೆ ಚೂರ್ಣೋತ್ಸವ ಸಂಪನ್ನಗೊಂಡಿತು.

ಮಂಗಳವಾರ ರಾತ್ರಿ ನಡೆದ ಮೂರು ತೇರು ಉತ್ಸವಕ್ಕೆ ಮಳೆ ಸ್ವಲ್ಪ ಮಟ್ಟಿನ ಅಡ್ಡಿಯನ್ನುಂಟು ಮಾಡಿದ್ದರೂ, ಹಗಲು ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿ ರಥವನ್ನೆಳ‍ೆದು ಸಂಭ್ರಮಿಸಿದರು.

ಬೆಳಗ್ಗೆ 10 ಗಂಟೆಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಕೃಷ್ಣನ ಉತ್ಸವ ಮೂರ್ತಿಯನ್ನು ರಥೋರೋಹಣ ಮಾಡಿದರು. ನಂತರ ರಥದಲ್ಲಿ ದೇವರಿಗೆ ಮಂಗಳಾರತಿ ನಡೆಯಿತು. ಪುತ್ತಿಗೆ ಮಠದ ಉಭಯ ಶ್ರೀಗಳು ಮತ್ತು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ರಥದಿಂದಲೇ ಭಕ್ತರಿಗೆ ಹಣ್ಣುಹಂಪಲುಗಳ ಪ್ರಸಾದವನ್ನು ವಿತರಿಸಿದರು. ಭಕ್ತರು ಈ ಪ್ರಸಾದವನ್ನು ಪಡೆಯಲು ಬಾರೀ ಪೈಪೋಟಿಯನ್ನೇ ನಡೆಸಿದರು.

ಬಳಿಕ ಗೋವಿಂದ ಗೋವಿಂದ ಎಂದು ಮಹಿಳೆಯರೂ ಸೇರಿ ನೂರಾರು ಮಂದಿ ಭಕ್ತರು ರಥವನ್ನು ರಥಬೀದಿಯುದ್ದಕ್ಕೂ ಎಳೆದು ತಮ್ಮ ಶ್ರದ್ಧೆ ಭಕ್ತಿಯನ್ನು ತೋರಿದರು. ಮಠದ ಬಿರುದಾವಳಿ, ಮಂಗಳವಾದ್ಯ, ಚಂಡೆವಾದ್ಯಗಳು ರಥೋತ್ಸವದ ಮೆರಗನ್ನು ಹೆಚ್ಚಿಸಿದವು.

ಬೃಂದಾವನದ ಸ್ವಾಮೀಜಿ

ಹಗಲು ರಥೋತ್ಸವಕ್ಕೆ ವಿಶೇಷ ಅಭ್ಯಾಗತರಾಗಿ ಬೃಂದಾವನದ ಗೌಡೀಯ ಮಾಧ್ವ ಸಂಪ್ರದಾಯದ ರಾಧಾರಮಣ ಮಂದಿರದ ಶ್ರೀ ಡಾ.ಪುಂಡರೀಕ ಗೋಸ್ವಾಮಿ ಆಗಮಿಸಿದ್ದು, ರಥೋತ್ಸವದಲ್ಲಿ ಭಾಗವಹಿಸಿದರು.

ರಥೋತ್ಸವದ ನಂತರ ಕೃಷ್ಣ ಉತ್ಸವಕ್ಕೆ ಮಧ್ವಸರೋವರದಲ್ಲಿ ಶ್ರೀಗಳು ಅವಭೃತ ಮಾಡಿಸಿದರು. ಈ ಸಂದರ್ಭದಲ್ಲಿ ನೂರಾರು ಮಂದಿ ಭಕ್ತರು ಅವಭೃತ ಸ್ನಾನ ಮಾಡಿದರು.

ನಂತರ ಮಧ್ಯಾಹ್ನದ ಕೃಷ್ಣ ಪ್ರಸಾದ ಭೋಜನಕ್ಕೆ ಶ್ರೀಗಳಿಬ್ಬರು ಪಲ್ಲಪೂಜೆ ನಡೆಸಿದರು. ಹಗಲು ಉತ್ಸವದ ಪ್ರಯುಕ್ತ ಐದಾರು ಸಾವಿರ ಮಂದಿ ಮದ್ಯಾಹ್ನದ ಭೋಜನ ಪ್ರಸಾದ ಸ್ವೀಕರಿಸಿದರು.