ಸಾರಿಗೆ ಬಸ್ಸಿನಲ್ಲಿ ಗೃಹಣಿಯಿಂದ ಚಿನ್ನದ ಸರ ಕಳವು

| Published : Apr 22 2024, 02:02 AM IST

ಸಾರಾಂಶ

ವಿ.ಎ.ಅರ್ಚನಾ ತಮ್ಮ ಹ್ಯಾಂಡ್ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 4.02 ಲಕ್ಷ ರು ಮೌಲ್ಯದ, 60 ಗ್ರಾಂ ಡಾಲರ್ ಸಹಿತ ಚಿನ್ನದ ಸರವನ್ನು ಅಪರಿಚಿತ ಮಹಿಳೆ ಲೂಟಿ ಮಾಡಿ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ಅರ್ಚನಾ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಹಿಳೆ ಗೃಹಣಿಯನ್ನು ವಂಚಿಸಿ ಆಕೆ ಬ್ಯಾಗಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು ಅಪಹರಿಸಿರುವ ಘಟನೆ ಪಟ್ಟಣದ ಶಿವಪುರದ ಬಳಿ ಶನಿವಾರ ಸಂಜೆ ಜರುಗಿದೆ. ರಾಮನಗರ ತಾಲೂಕು ಕೂಟಗಲ್ ಹೋಬಳಿಯ ಜಾಲಮಂಗಲದ ಶಿವಕುಮಾರ್ ಪತ್ನಿ ವಿ.ಎ.ಅರ್ಚನಾ ತಮ್ಮ ಹ್ಯಾಂಡ್ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 4.02 ಲಕ್ಷ ರು ಮೌಲ್ಯದ, 60 ಗ್ರಾಂ ಡಾಲರ್ ಸಹಿತ ಚಿನ್ನದ ಸರವನ್ನು ಅಪರಿಚಿತ ಮಹಿಳೆ ಲೂಟಿ ಮಾಡಿ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ಅರ್ಚನಾ ದೂರು ನೀಡಿದ್ದಾರೆ. ಗೃಹಿಣಿ ಅರ್ಚನಾ ಮದ್ದೂರಿನ ಚೆನ್ನೇಗೌಡನ ದೊಡ್ಡಿಯ ಶಿವ ಕನ್ವೆನ್ಷನ್ ಹಾಲಿನಲ್ಲಿ ಸಂಬಂಧಿಕರ ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಮನಗರದಿಂದ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಮದ್ದೂರಿಗೆ ಬರುತ್ತಿದ್ದರು. ಈ ವೇಳೆ ಶಿವಪುರದ ಬಳಿ ಅಪರಿಚಿತ ಮಹಿಳೆ ನೀವು ಎಲ್ಲಿ ಇಳಿಯುತ್ತೀರಿ? ಎಂದು ಅರ್ಚನಾ ಅವರನ್ನು ಪರಿಚಯ ಮಾಡಿಕೊಂಡ ನಂತರ ಆಕೆ ಹ್ಯಾಂಡ್ ಬ್ಯಾಗಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದಾರೆ. ಮಹಿಳೆ ಸಂಜೆ 7 ಗಂಟೆ ಸುಮಾರಿಗೆ ಮದ್ದೂರು ಬಸ್ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದಾಳೆ. ನಂತರ ಅರ್ಚನಾ ತಮ್ಮ ಹ್ಯಾಂಡ್ ಬ್ಯಾಗನ್ನು ಪರಿಶೀಲಿಸಿದಾಗ ಸರ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮದ್ದೂರು ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.