ಉತ್ತಮ ಜೀವನಶೈಲಿ ಸದೃಢ ಆರೋಗ್ಯಕ್ಕೆ ಸಹಕಾರಿ

| Published : Oct 11 2023, 12:46 AM IST

ಸಾರಾಂಶ

ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವುದರಿಂದ ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು. ಒಳ್ಳೆಯ ಆಹಾರ ಸೇವನೆ ಹಾಗೂ ದಿನನಿತ್ಯ ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ನಗರದಲ್ಲಿ ವಿಶ್ವ ರೇಬಿಸ್ ದಿನ ಹಾಗೂ ವಿಶ್ವ ಹೃದಯ ದಿನ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಮತ್ತು ಸೈಕಲ್ ಕ್ಲಬ್ ಶಿವಮೊಗ್ಗ ಆಶ್ರಯದಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೇಬೀಸ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಸೋಂಕಿತ ಪ್ರಾಣಿ ಕಡಿತ, ವಿಶೇಷವಾಗಿ ನಾಯಿ ಕಡಿತದಿಂದ ಹರಡುತ್ತದೆ. ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿ ತಕ್ಷಣ ವೈದ್ಯರಲ್ಲಿಗೆ ತೆರಳಿ ಸೂಕ್ತ ಲಸಿಕೆ ಹಾಕಿಸಿಕೊಂಡಲ್ಲಿ, ರೇಬೀಸ್ ಅನ್ನು ಶೇ.100ರಷ್ಟು ನಿಯಂತ್ರಿಸಬಹುದು. ಪ್ರಾಣಿ ಕಡಿತದ ನಂತರವೂ ಸೂಕ್ತ ಲಸಿಕೆ ಪಡೆದಲ್ಲಿ ರೇಬೀಸ್‌ನಿಂದ ಪಾರಾಗಬಹುದು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಪ್ರತಿದಿನ 30 ನಿಮಿಷ ಲಘು ವ್ಯಾಯಾಮ, ಸಮತೋಲನ ಆಹಾರ ಹವ್ಯಾಸಗಳನ್ನು ಪಾಲಿಸಬೇಕು. ಮದ್ಯಪಾನ, ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ನಾಯಿ ಸಾಕಿರುವವರು ತಪ್ಪದೇ ನಾಯಿಗೆ ರೇಬಿಸ್ ಲಸಿಕೆ ಹಾಕಿಸಬೇಕು. ನಾಯಿ ಅಥವಾ ಇತರ ಪ್ರಾಣಿ ಕಡಿತಕ್ಕೆ ಒಳಗಾಗುವ ಅಪಾಯ ಇರುವವರು ಕಡಿತಕ್ಕೆ ಒಳಗಾಗುವ ಮುನ್ನವೇ ರೇಬೀಸ್ ವಿರುದ್ಧದ ಲಸಿಕೆ ಪಡೆದಲ್ಲಿ ಮುಂದೇನಾದರೂ ಪ್ರಾಣಿ ಕಡಿತಕ್ಕೆ ಒಳಗಾದಲ್ಲಿ ರೇಬೀಸ್‌ನಿಂದ ಪಾರಾಗಬಹುದು ಎಂದು ತಿಳಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ ಓ. ಮಾತನಾಡಿ, ರೇಬೀಸ್ ವಿರುದ್ಧದ ಲಸಿಕೆ ಮತ್ತು ಆರ್‌ಐಜಿ ಚುಚ್ಚುಮದ್ದು ಸಾಕಷ್ಟು ದಾಸ್ತಾನು ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿದೆ. ನಾಯಿ, ಬೆಕ್ಕು ಇತರೇ ಯಾವುದೇ ಪ್ರಾಣಿ ಕಡಿತಕ್ಕೆ ಒಳಗಾದ ವ್ಯಕ್ತಿಗಳಿಗೆ ಉಚಿತವಾಗಿ ಸಿಗಲಿದೆ ಎಂದರು. ರೇಬೀಸ್ ಒಂದು ನೋಟಿಫೈಯಬಲ್ ಡಿಸೀಜ್ ಆಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ರೀಬೀಸ್ ರೋಗಿಯು ದಾಖಲಾದಲ್ಲಿ ಸರ್ಕಾರಕ್ಕೆ ವರದಿ ಮಾಡಬೇಕಾಗುತ್ತದೆ. ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮವು 2030 ರೊಳಗೆ ಭಾರತವನ್ನು ರೇಬೀಸ್‌ಮುಕ್ತ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು. ಜಾಥಾದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಕಿರಣ್ ಎಸ್.ಕೆ., ಶಿವಮೊಗ್ಗ ತಾಲೂಕು ವೈದ್ಯಾಧಿಕಾರಿ ಡಾ. ಜಿ.ಬಿ.ಚಂದ್ರಶೇಖರ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಸಾಂಕ್ರಾಮಿಕ ರೋಗತಜ್ಞೆ ಡಾ. ದಿವ್ಯ, ಕಾರ್ಯಕ್ರಮ ಸಂಯೋಜಕ ಡಾ. ಅಫೀಫಾ ನದಾಫ್, ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಗಿರೀಶ್ ಕಾಮತ್, ನರಸಿಂಹಮೂರ್ತಿ, ಹರೀಶ್ ಪಟೇಲ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು. - - - -10ಎಸ್‌ಎಂಜಿಕೆಪಿ04: ಶಿವಮೊಗ್ಗ ನಗರದಲ್ಲಿ ಮಂಗಳವಾರ ವಿಶ್ವ ರೇಬಿಸ್ ದಿನ ಹಾಗೂ ವಿಶ್ವ ಹೃದಯ ದಿನ ಪ್ರಯುಕ್ತ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಚಾಲನೆ ನೀಡಿದರು.