ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ವೈದ್ಯರು ಔಷಧಿ ಚೀಟಿಯನ್ನು ಕನ್ನಡದಲ್ಲಿ ಬರೆಯುವಂತೆ ಸೂಚನೆ ನೀಡಲು ಸರ್ಕಾರಕ್ಕೆ ಬರೆದಿದ್ದರು. ಈ ಸಂಬಂಧ ಸರ್ಕಾರ ಕ್ರಮ ತೆಗೆದುಕೊಳ್ಳುವ ಮೊದಲೇ ಹೊಸದುರ್ಗದ ಸರ್ಕಾರಿ ವೈದ್ಯರೊಬ್ಬರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವ ಮೂಲಕ ಕನ್ನಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೊಸದುರ್ಗದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮೂಳೆ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಯು.ಎಸ್. ಸಂಜಯ್ ಗುರುವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿ ಪರೀಕ್ಷಿಸಿದ ರೋಗಿಗಳಿಗೆ ಕನ್ನಡದಲ್ಲಿಯೇ ಔಷಧಿ ಚೀಟಿ , ರೋಗ ಲಕ್ಷಣಗಳು ಹಾಗೂ ಪರಿಹಾರೋಪಾಯಗಳನ್ನು ಕನ್ನಡದಲ್ಲಿ ಬರೆಯುವ ಜತೆಗೆ ರೋಗಿಯ ದಾಖಲೆಗಳನ್ನು ಕೂಡ ಕನ್ನಡದಲ್ಲಿಯೇ ದಾಖಲಿಸುವ ಮೂಲಕ ಕನ್ನಡತನ ಮೆರೆದಿದ್ದಾರೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾಕ್ಟರ್ ಪುರುಷೋತ್ತಮ ಬಿಳಿಮಲೆ ಅವರು ಇತ್ತೀಚೆಗೆ ಆರೋಗ್ಯ ಇಲಾಖೆ ಮಂತ್ರಿ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ಕನ್ನಡದಲ್ಲಿ ಔಷಧಿ ಚೀಟಿ ಬರೆಯುವುದನ್ನು ಉತ್ತೇಜಿಸಬೇಕು. ಕನ್ನಡಕ್ಕಾಗಿ ಮುಂದೆ ಬರುವ ಇಂತಹ ವೈದ್ಯರನ್ನ ಗುರುತಿಸಿ ಅಭಿನಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಗ್ಯ ಇಲಾಖೆಯು ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಳಿಸಿತ್ತು . ಆದರೆ ಸರ್ಕಾರದ ಆದೇಶ ಹೊರಬೀಳುವ ಮುನ್ನವೇ ವೈದ್ಯರು ರೋಗಿಗಳಿಗೆ ಅರ್ಥವಾಗುವಂತೆ ಕನ್ನಡದಲ್ಲಿಯೇ ಮಾತ್ರೆಯ ಹೆಸರು, ಔಷಧಿ ಬಳಸುವ ವಿವರ, ರೋಗದ ಕಾರಣಗಳು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತ ಮಾಹಿತಿಯನ್ನು ಕನ್ನಡದಲ್ಲಿ ದಾಖಲಿಸಲು ಮುಂದಾಗಿರುವುದು ಕನ್ನಡ ಅಭಿಮಾನಿಗಳಿಗೆ ಸಂತಸ ತಂದಿದೆ.ಗುರುವಾರ ಕಿಲು ಮೂಳೆ ತಜ್ಞ ಡಾ. ಸಂಜಯ್ ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯರ ಕನ್ನಡ ಅಭಿಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನಾ ಮಹಾಪೂರವೇ ವ್ಯಕ್ತವಾಗಿದೆ. ವೈದ್ಯರು ಕನ್ನಡದಲ್ಲಿ ಮಾತ್ರೆ ಚೀಟಿಯನ್ನು ಬರೆಯುವ ವಿಚಾರಕ್ಕೆ ಸರ್ಕಾರದ ಹಂತದಲ್ಲಿ ಚರ್ಚೆಯಾಗುವುದನ್ನು ಗಮನಿಸಿ, ನಾನು ಕನ್ನಡದಲ್ಲಿ ರೋಗಿಗಳಿಗೆ ಅರ್ಥವಾಗುವಂತೆ ಔಷಧಿ ಹಾಗೂ ಚಿಕಿತ್ಸೆಯ ಮಾಹಿತಿಯನ್ನು ದಾಖಲಿಸಲು ನಿರ್ಧರಿಸಿದೆ. ಗುರುವಾರದಿಂದ ಕನ್ನಡದಲ್ಲಿ ಮಾತ್ರೆ, ಔಷಧಿ ಹೆಸರು ಹಾಗೂ ಬಳಸುವ ವಿಧಾನವನ್ನು, ರೋಗಿಗೆ ನೀಡುವ ಸಲಹೆಗಳನ್ನು ಕನ್ನಡದಲ್ಲಿಯೇ ದಾಖಲಿಸಲು ಆರಂಭಿಸಿದ್ದೇನೆ. ಕನ್ನಡದ ನೆಲದಲ್ಲಿ ಹುಟ್ಟಿರುವ ನನಗೆ ಕನ್ನಡದಲ್ಲಿ ಬರೆಯಲು ಯಾವುದೇ ತೊಂದರೆಯಾಗುವುದಿಲ್ಲ. ಚಿಕಿತ್ಸೆ ನೀಡುವಾಗ ರೋಗಿಗಳೊಂದಿಗೆ ಕನ್ನಡದಲ್ಲಿಯೇ ಸಂಭಾಷಿಸುತ್ತೇವೆ. ಈಗ ಮಾಹಿತಿಯನ್ನೂ ಕನ್ನಡದಲ್ಲಿ ದಾಖಲಿಸಲಾಗುತ್ತಿದೆ.