ಎಲ್ಲರ ಗಮನ ಸೆಳೆಯುತ್ತಿರುವ ಸರ್ಕಾರಿ ಶಾಲೆ

| Published : Apr 01 2024, 12:47 AM IST

ಸಾರಾಂಶ

ಶಾಲೆಯಲ್ಲಿ ಶಿಕ್ಷಣದ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವುದು, ಪರಿಸರ ಸಂರಕ್ಷಣೆ, ಕೈ ತೋಟ ಬೆಳೆಸುವುದು,ನೀರಿನ ಮಿತ ಬಳಕೆ, ತ್ಯಾಜ್ಯ ನಿರ್ವಹಣೆ,ಜೀವನದ ಮೌಲ್ಯಗಳನ್ನು ತಿಳಿಸುವುದು ಹೀಗೆ ಅನೇಕ ಪಟ್ಯೇತರ ಚಟುವಟಿಕೆಗಳ ಬಗ್ಗೆ ಆದ್ಯತೆ ನೀಡಲಾಗಿದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಶಿಕ್ಷಕರ ಸೇವಾ ಮನೋಭಾವ, ಗ್ರಾಮಸ್ಥರ ಸಹಕಾರ, ಮಕ್ಕಳಲ್ಲಿ ಕಲಿಯುವ ಹುಮ್ಮಸ್ಸು ಇಷ್ಟಿದ್ದರೆ ಸಾಕು ಯಾವುದೇ ಸರ್ಕಾರಿ ಶಾಲೆಯನ್ನೂ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಅಭಿವೃದ್ಧಿಪಡಿಸಬಹುದು, ಎಂದು ನಿರೂಪಿಸಿದೆ ತೊಂಡೇಬಾವಿ ಹೋಬಳಿಯ, ಕಲ್ಲಿನಾಯಕನಹಳ್ಳಿ ಸರ್ಕಾರಿ ಶಾಲೆ.ಇಲ್ಲಿನ ಶಿಕ್ಷಕರ ಪರಿಶ್ರಮ ಅಪಾರ, ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಮುತುವರ್ಜಿ ವಹಿಸಿ ಶಿಕ್ಷಣ ಬೋಧಿಸುವ ರೀತಿ ಎಲ್ಲಾ ಶಾಲೆಗಳಿಗೂ ಮಾದರಿಯಾಗಿದೆ, ಮನೆಯೇ ಮೊದಲ ಪಾಠ ಶಾಲೆ ಎಂಬಂತೆ,ಎಲ್ಲಾ ಮಕ್ಕಳಿಗೂ ಸಂಸ್ಕಾರವಂತರಾಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.

ಶಿಕ್ಷಣದ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವುದು, ಪರಿಸರ ಸಂರಕ್ಷಣೆ, ಕೈ ತೋಟ ಬೆಳೆಸುವುದು,ನೀರಿನ ಮಿತ ಬಳಕೆ, ತ್ಯಾಜ್ಯ ನಿರ್ವಹಣೆ,ಜೀವನದ ಮೌಲ್ಯಗಳನ್ನು ತಿಳಿಸುವುದು ಹೀಗೆ ಅನೇಕ ಪಟ್ಯೇತರ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಕಲಿಸುವುದರಿಂದ, ಗ್ರಾಮ ಪಂಚಾಯಿತಿಯ ದೇವರಹಳ್ಳಿ, ಕ್ರಿಶ್ಚಿಯನ್ ಕಾಲೋನಿ, ಬಂದಾರ್ಲಹಳ್ಳಿ, ಬಸವಾಪುರ ಇನ್ನು ಹಲವು ಗ್ರಾಮಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ.

ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒಂದೊಂದಾಗಿ ಶಿಕ್ಷಣ ಇಲಾಖೆ ಮತ್ತು ಪಂಚಾಯಿತಿಯ ಸಹಕಾರ ಪಡೆದು ಮಾಡಲಾರಂಭಿಸಿದರು. ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕವಾದ ಮತ್ತು ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಲಾಯಿತು. ಕುಡಿಯುವ ನೀರಿಗಾಗಿ ಆರ್‌ಒ ಪ್ಲಾಂಟ್ ನ್ನು ಸಹ ನಿರ್ಮಿಸಲಾಗಿದೆ.

ಧಾನಿಗಳಿಂದ ನೆರವು

ಕರ್ಟೆವಾ ಅಗ್ರಿ ಸೈನ್ಸ್ ಸಂಸ್ಥೆಯಿಂದ, ಶಾಲೆಯ ಉನ್ನತಿಕರಣಕ್ಕಾಗಿ ಕಂಪ್ಯೂಟರ್, ಪ್ರೊಜೆಕ್ಟರ್, ಮತ್ತು ಎಲ್ಲಾ ಕೊಠಡಿಗಳಿಗೂ ಗ್ರೀನ್ ಬೋರ್ಡ್, ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಗ್ರಾಮದ ಮುಖಂಡರು, ಸ್ಮಾರ್ಟ್ ಟಿವಿ ಮತ್ತು ಪ್ರಿಂಟರ್ ನ್ನು ಕೊಡುಗೆಯಾಗಿ ನೀಡಿದ್ದಾರೆ. ಸ್ವಾಮಿ ವಿವೇಕಾನಂದ ಟ್ರಸ್ಟ್ ನವರು ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನ ಲ್ಯಾಬ್ ಗೆ ಸಹಕಾರ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆದ್ಯತೆ

ಶಾಲೆಯಲ್ಲಿ ನಿರಂತರವಾಗಿ ಪ್ರತಿಭಾ ಕಾರಂಜಿ, ರಸಪ್ರಶ್ನೆ, ಮತ್ತು ಕ್ರೀಡೆಗಳಾದ ವಾಲಿಬಾಲ್, ಥ್ರೋ ಬಾಲ್ ಇನ್ನೂ ಹಲವು ಬಗೆಯ ಕಾರ್ಯಕ್ರಮ ಗಳಿಂದ ವಿದ್ಯಾರ್ಥಿಗಳಲ್ಲಿ ಉತ್ಸಾಹ ಹೆಚ್ಚಿಸುವ ಕೆಲಸ ಮಾಡುತ್ತಾರೆ. ಮಕ್ಕಳ ಜ್ಞಾನರ್ಜನೆಗಾಗಿ ಬಗೆ ಬಗೆಯ ಪುಸ್ತಕಗಳ ಗ್ರಂಥಾಲಯ ಮತ್ತು ವಿಜ್ಞಾನ ಗ್ರಂಥಾಲಯದ ನಿರ್ಮಾಣ. ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಗಿಡಗಳ ಪೋಷಣೆ ಮತ್ತು ಕೈ ತೋಟ ನಿರ್ವಹಣೆ. ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಶಾಲೆಗೆ ಭೇಟಿ ಇಲ್ಲಿನ ಪರಿಸರ ಮತ್ತು ಮಕ್ಕಳ ಕಲಿಕಾ ವಿಧಾನವನ್ನು ಮನಸಾರೆ ಕೊಂಡಾಡಿದ್ದರು.

ಶಾಲಾ ಶಿಕ್ಷಕರ ಮುತುವರ್ಜಿ ಮತ್ತು ಪೋಷಕರ ಸಹಕಾರ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಇಂದು ಈ ಶಾಲೆ ತಾಲ್ಲೂಕಿನಲ್ಲಿ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ, ಶಾಲೆಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಧಿಸುವ ಛಲವೊಂದಿದ್ದರೆ ಎಂತಹ ಕಠಿಣ ಕೆಲಸವನ್ನು ಸಾಧಿಸಿ ತೋರಿಸಬಹುದೆಂಬುದಕ್ಕೆ ಈ ಸರ್ಕಾರಿ ಶಾಲೆಯ ಶಿಕ್ಷಕರು ಮಾದರಿಯಾಗಿ ನಿಂತಿದ್ದಾರೆ.

.....................

ಕೋಟ್‌....ಶಿಕ್ಷಕರ ಸಂಕಲ್ಪ, ಗ್ರಾಮಸ್ಥರ ಸಹಕಾರದಿಂದ ಮತ್ತು ಮಕ್ಕಳ ಜ್ಞಾನದ ಹಸಿವು ಕಲ್ಲಿನಾಯಕನಹಳ್ಳಿ ಶಾಲೆಯನ್ನು ತಾಲ್ಲೂಕಿನಲ್ಲಿ ಮಾದರಿ ಶಾಲೆಯನ್ನಾಗಿ ಮಾಡಿದೆ.

ಶ್ರೀನಿವಾಸ ಮೂರ್ತಿ. ಕ್ಷೇತ್ರ ಶಿಕ್ಷಣಧಿಕಾರಿ