ಅನ್ನದಾತರ ಹಬ್ಬಕ್ಕೆ ಅದ್ಧೂರಿ ಚಾಲನೆ

| Published : Sep 22 2024, 01:50 AM IST

ಸಾರಾಂಶ

ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಹೆಸರಿನ ಘೋಷವಾಕ್ಯದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಪ್ರವೇಶ ದ್ವಾರದಲ್ಲಿಯೇ ಜಾನುವಾರ ಪ್ರದರ್ಶನ ಮೇಳವು ಸ್ವಾಗತಿಸುತ್ತಿದೆ.

ಧಾರವಾಡ:

ರೈತರ ಜಾತ್ರೆ ಎಂದೇ ಕರೆಯುವ, ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ. 21ರಿಂದ ನಾಲ್ಕು ದಿನ ನಡೆಯಲಿರುವ ಕೃಷಿ ಮೇಳವು ಶನಿವಾರದಿಂದ ಶುರುವಾಗಿದ್ದು, ಕೃಷಿ ಮೇಳವನ್ನು ಸವಿಯಲು ರಾಜ್ಯಾದ್ಯಂತ ರೈತರು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದಾರೆ.

ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಹೆಸರಿನ ಘೋಷವಾಕ್ಯದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಪ್ರವೇಶ ದ್ವಾರದಲ್ಲಿಯೇ ಜಾನುವಾರ ಪ್ರದರ್ಶನ ಮೇಳವು ಸ್ವಾಗತಿಸುತ್ತಿದೆ. ನಾಡಿನ ವಿವಿಧೆಡೆಯಿಂದ ರೈತರು ತಮ್ಮ ಹೋರಿ, ಎತ್ತು ಹಾಗೂ ಪ್ರೀತಿಪಾತ್ರ ಜಾನುವಾರುಗಳಿಗೆ ವಿಶೇಷ ಶೃಂಗಾರ ಮಾಡಿ ತಂದಿದ್ದು ಜನರನ್ನು ಆಕರ್ಷಿಸುತ್ತಿದೆ. ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಫಲಪುಷ್ಪ ಪ್ರದರ್ಶನ ಕೈ ಬೀಸಿ ಕರೆಯುತ್ತಿದೆ. ತರಹೇವಾರಿ ಹೂಗಳು, ಕಲ್ಲಂಗಡಿಯಲ್ಲಿ ಕೆತ್ತಿದ ಸಾಧಕರ ಮೂರ್ತಿಗಳು ಗಮನ ಸೆಳೆಯುತ್ತಿವೆ. ಕೆಲಗೇರಿಯ ಕಲಾವಿದ ಉಮೇಶ ಭಾವಿಕಟ್ಟಿ ತೆಂಗಿನ ಕಾಯಿಯಲ್ಲಿ ಕೆತ್ತಿದ ಆಕರ್ಷಕ ಕೆತ್ತನೆಗಳು, ಎತ್ತು -ಚಕ್ಕಡಿ ಗಮನ ಸೆಳೆಯುತ್ತಿದೆ. ಈ ಬಾರಿ ಮೊದಲ ಬಾರಿಗೆ ನವೋದ್ಯಮಿಗಳ ಕೇಂದ್ರ ಸ್ಥಾಪಿಸಿದ್ದು, ಹೊಸದಾಗಿ ಉದ್ಯಮ ಮಾಡಬೇಕು ಎನ್ನುವವರಿಗೆ ತರಬೇತಿ ಒದಗಿಸುವಂತಿದೆ.

ಇನ್ನು, ಮುಖ್ಯ ವೇದಿಕೆಯಿಂದ ಶುರುವಾಗಿ ಮುಖ್ಯ ರಸ್ತೆ ವರೆಗೂ ಹಾಕಲಾಗಿರುವ ವಸ್ತು ಪ್ರದರ್ಶನದಲ್ಲಿ 600ಕ್ಕೂ ಹೆಚ್ಚು ಮಳಿಗೆಗಳು ರೈತರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿವೆ. ಕೃಷಿ ಯಂತ್ರೋಪಕರಣ, ಕೃಷಿ ವಿಜ್ಞಾನ, ತಂತ್ರಜ್ಞಾನದ ಮಾದರಿಗಳು ಹೀಗೆ ಕೃಷಿ ಹಾಗೂ ಕೃಷಿ ಪೂರಕ ಸಂಬಂಧಿತ ಮಾಹಿತಿಯು ಮೇಳದಲ್ಲಿ ದೊರೆಯುತ್ತಿದೆ. ಇದರೊಂದಿಗೆ ರೈತರ ಆವಿಷ್ಕಾರಗಳು, ವಿಶೇಷ ಸಾಧನೆಗೈದ ರೈತರೊಂದಿಗೆ ಸಂವಾದ ಸೇರಿದಂತೆ ಕೃಷಿ ತಂತ್ರಜ್ಞಾನವನ್ನು ರೈತರಿಗೆ ತೋರಿಸಲಾಗುತ್ತದೆ.

ಬೀಜ ಮೇಳಕ್ಕೆ ಚಾಲನೆ:

ಮುಖ್ಯ ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿತ್ತನೆ ಬೀಜಗಳನ್ನು ಬುಟ್ಟಿಗೆ ಹಾಕುವ ಮೂಲಕ ಬೀಜ ಮೇಳಕ್ಕೆ ಅಧಿಕೃತ ಚಾಲನೆ ನೀಡಿದರು. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದೆ. ಕೃಷಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕಳೆದ ಬಜೆಟ್‌ನಲ್ಲಿ ₹ 1.25 ಲಕ್ಷ ಕೋಟಿ ಅನುದಾನ ನಿಗದಿಪಡಿಸಿದೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ಯೋಜನೆ ಅಡಿ ಕೇಂದ್ರ ಸರ್ಕಾರವು ನೇರವಾಗಿ ರೈತ ಅಕೌಂಟ್‌ಗೆ ₹ 3.5 ಲಕ್ಷ ಕೋಟಿ ವಿತರಿಸಿದೆ. ಭತ್ತ, ಜೋಳ, ಮೆಕ್ಕೆಜೋಳ, ಗೋದಿ, ಹೆಸರು ಸೇರಿದಂತೆ ಎಲ್ಲ ಬೆಳೆಗಳನ್ನು ಅತ್ಯಧಿಕ ದರದಲ್ಲಿ ಸರ್ಕಾರ ಖರೀದಿ ಮಾಡುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ. ರೈತರಿಗೋಸ್ಕರ ಇರುವ ಪ್ರಮುಖ ಯೋಜನೆಗಳ ಬಗ್ಗೆ ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪ್ರಚುರ ಪಡಿಸಬೇಕೆಂದರು.

ಬೀಜೋತ್ಪಾದನೆಯಲ್ಲಿ ಸಾಧನೆ ಮಾಡಿದ ಬ್ಯಾಹಟ್ಟಿಯ ಪರಿಕ್ಷಿತಾ ಹಿರೇಗೌಡರ, ಪ್ರಭುಲಿಂಗ ಗುಡಿ ಹಾಗೂ ಜೋಗೆಲ್ಲಾಪೂರದ ಶಿಲ್ಪಾ ಪಾಟೀಲ ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಕುಲಪತಿ ಡಾ. ಪಿ.ಎಲ್‌. ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಇದ್ದರು. ಇಂದು ಅಧಿಕೃತ ಚಾಲನೆ...

ಕೃಷಿ ಮೇಳಕ್ಕೆ 2ನೇ ದಿನ ಭಾನುವಾರ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಆದರೆ, ಅವರ ಬರುವಿಕೆ ಇನ್ನೂ ಖಾತ್ರಿಯಾಗಿಲ್ಲ. ಅವರ ಬದಲಾಗಿ ಕೃಷಿ ಸಚಿವ ಚಲುವರಾಯ ಸ್ವಾಮಿ ಅಥವಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.