ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆಯಲ್ಲಿ 1009ನೇ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ರಾಮಾನುಜಾಚಾರ್ಯರಿಗೆ ದ್ವಾದಶಾರಾಧನೆಯೊಂದಿಗೆ ಸತತ 3 ಗಂಟೆಗಳ ಕಾಲ ಮಹಾಭಿಷೇಕ ವೈಭವದಿಂದ ನೆರವೇರಿತು.

ರಾಮಾನುಜಾಚಾರ್ಯರಿಗೆ ಬೆಳಗ್ಗೆ ಪುಷ್ಪಮಂಟಪ ವಾಹನೋತ್ಸವ ಮತ್ತು ಈಯಲ್ ಶಾತ್ತುಮೊರೆ ನಡೆದ ನಂತರ ಕಲ್ಯಾಣಿಯಿಂದ ಮೆರವಣಿಗೆಯಲ್ಲಿ ಪವಿತ್ರ ತೀರ್ಥತಂದು 9.30ಕ್ಕೆ ಪರಾಭವನಾಮ ಸಂವತ್ಸರದ ಚಿತ್ತಿರೈ, ವೈಶಾಖಮಾಸದ ಷಷ್ಠಿಕೂಡಿದ ಆರಿದ್ರಾನಕ್ಷತ್ರದ ಶುಭದಂದು ಆದಿಶೇಷ ಅವತಾರವಾದ ರಾಮಾನುಜಾಚಾರ್ಯರಿಗೆ ಸ್ನಪನಪೂರ್ವಕವಾಗಿ ದ್ವಾದಶಾರಾಧನೆಯೊಂದಿಗೆ ಹಾಲು, ಮೊಸರು, ಜೇನು, ಎಳೆನೀರು ಹರಿಷಿಣ, ಶ್ರೀಗಂಧ ಮುಂತಾದ ಮಂಗಳ ದ್ರವ್ಯಗಳಿಂದ ವೇದಘೋಷ ಮಂಗಳವಾದ್ಯದೊಂದಿಗೆ ಮಹಾಭಿಷೇಕ ನೆರವೇರಿಸಲಾಯಿತು.

ದ್ವಾದಶಾರಾಧನೆಗೆ ಹನ್ನೆರಡುಬಗೆಯ ಪುಷ್ಪಮಾಲೆಗಳಿಂದ ಅಲಂಕರಿಸಿ ಹನ್ನೆರಡುಬಗೆಯ ಹಣ್ಣುಗಳಿಂದ ನಿವೇಧನ ಮಾಡಲಾಯಿತು. ಮಹಾಭಿಷೇಕದ ನಂತರ ಚೆಲುವನಾರಾಯಣಸ್ವಾಮಿ ಪಾದುಕಾ ಮರ್ಯಾದೆ ನೆರವೇರಿಸಲಾಯಿತು. ದೇಗುಲದ ಆವರಣವನ್ನು ತಳಿರುತೋರಣ ಚಪ್ಪರಗಳಿಂದ ಸಿಂಗಾರ ಮಾಡಲಾಗಿತ್ತು. ರಾಮಾನುಜರ ಸನ್ನಿಧಿಯ ಮೇಲ್ಬಾಗ ವಿವಿಧ ಹಣ್ಣುಗಳು, ಪುಷ್ಪಗಳು ಹಾಗೂ ಲಾವಂಛದಿಂದ ಅಲಂಕಾರ ಮಾಡಲಾಗಿತ್ತು. ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಸೇರಿದಂತೆ ತಮಿಳುನಾಡು ಆಂಧ್ರಪ್ರದೇಶ ಸೇರಿದಂತೆ ನಾಡಿದ ವಿವಿಧ ಭಾಗಗಳಿಂದಲೂ ಸಹಸ್ರಾರು ಭಕ್ತರು ತಿರುನಕ್ಷತ್ರ ಮಹೋತ್ಸವದಲ್ಲಿ ಭಾಗವಹಿಸಿ ರಾಮಾನುಜರ ವಿವಿಧ ಉತ್ಸವಗಳ ವೈಭವವನ್ನು ಕಣ್ತುಂಬಿಕೊಂಡರು.

ಆಚಾರ್ಯ ರಾಮಾನುಜರು 14 ವರ್ಷಗಳ ಕಾಲ ಮೇಲುಕೋಟೆ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಭೂವೈಕುಂಠವನ್ನಾಗಿಸಿದ್ದರು. ದೊರೆ ಬಿಟ್ಟಿದೇವನಿಗೆ ವೈಷ್ಣವ ದೀಕ್ಷೆ ನೀಡಿ ‘ವಿಷ್ಣುವರ್ಧನ’ ಎಂದು ಪನರ್ ನಾಮಕರಣ ಮಾಡಿದ ನಂತರ ಹೊಯ್ಸಳರ ಆಳ್ವಿಕೆ ಅತ್ಯಂತ ಬಲಿಷ್ಠವಾಯಿತು.


ರಾಮಾನುಜರ ಸಲಹೆಯಂತೆ ವಿಷ್ಣುವರ್ಧನ ಪ್ರತಿವಿಜಯೋತ್ಸವಗಳ ಪ್ರತೀಕವಾಗಿ ಕರ್ನಾಟಕದಲ್ಲಿ ಅಪೂರ್ವ ಶಿಲ್ಪಕಲಾ ವೈಭವಗಳಿಂದ ಕೂಡಿದ ಪಂಚನಾರಾಯಣಸ್ವಾಮಿ ದೇವಾಲಯಗಳನ್ನು ನಿರ್ಮಾಣ ಮಾಡಿ ಕರುನಾಡಿಗೆ ವಿಶಿಷ್ಠವಾದ ಕೊಡುಗೆ ನೀಡಿದನು.ರಾಮಾನುಜಾಚಾರ್ಯರು ತಮಿಳುನಾಡಿನ ಶ್ರೀರಂಗಂ, ಕಂಚಿ, ಆಂದ್ರಪ್ರದೇಶದ ತಿರುಮಲೆ ದಿವ್ಯಕ್ಷೇತ್ರಗಳಂತೆ ಮೇಲುಕೋಟೆಗೆ ಸಹ ಭಾರತದಲ್ಲಿ ವಿಶೇಷಸ್ಥಾನವನ್ನು ತಂದುಕೊಟ್ಟ ಪರಿಣಾಮ ಯದುಗಿರಿಯಲ್ಲಿ ರಾಮಾನುಜರ ತಿರುನಕ್ಷತ್ರಮಹೋತ್ಸವ ಆಚರಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಹತ್ತುದಿನಗಳಕಾಲ ಪೇಶುಮ್‌ರಾಮಾನುರಿಗೆ ವೈವಿಧ್ಯಮಯ ಅಲಂಕಾರಗಳು, ಅಭಿಷೇಕ-ಮಹಾಭಿಷೇಕಗಳು, ಪುಷ್ಪ ಕೈಂಕರ್ಯಸೇವೆಗಳು, ವಾಹನೋತ್ಸವಗಳು ಮಹಾರಥೋತ್ಸವ ವೈಭವೋಪೇತವಾಗಿ ನಡೆದವು.

ರಾಮಾನುಜರಿಗೆ ಮಾಲೆ ಮರ್ಯಾದೆ ಸಮರ್ಪಣೆ

ತಿರುನಕ್ಷತ್ರ ಮಹೋತ್ಸವದಲ್ಲಿ ರಾಮಾನುಜರಿಗೆ ಭಾರತದ ಅತ್ಯಂತ ಪ್ರಮುಖ ದಿವ್ಯಕ್ಷೇತ್ರಗಳ ಮಾಲೆ ಮರ್ಯಾದೆಗಳು ಅರ್ಪಣೆಯಾದವು. ತಿರುಮಲ-ತಿರುಪತಿ ಶ್ರೀನಿವಾಸನ ದೇವಸ್ಥಾನ ಶ್ರೀಪೆರಂಬೂದೂರು, ಸ್ವಾಮಿ ರಾಮಾನುಜರ ಸನ್ನಿಧಿ, ಶ್ರೀರಂಗಂನ ರಂಗನಾಥನ ದಿವ್ಯಕ್ಷೇತ್ರ ಸೇರಿದಂತೆ ಪ್ರಮುಖ ಕ್ಷೇತ್ರಗಳಿಂದ ಮಾಲೆಮರ್ಯಾದೆ ಸಹ ಸಮರ್ಪಣೆಯಾಯಿತು. ಹತ್ತು ದಿನಗಳಕಾಲ ನಡೆದ ತಿರುನಕ್ಷತ್ರ ಮಹೋತ್ಸವದ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಜೊತೆಗೆ ಆಗಮೋಕ್ತವಾದ ಧಾರ್ಮಿಕ ವಿಧಿವಿದಾನಗಳ ಕೈಂಕರ್ಯಗಳನ್ನು ಅರ್ಚಕ ವಿದ್ವಾನ್‌ ಬಿ.ವಿ.ಆನಂದಾಳ್ವಾರ್, ಆಗಪ್ರವೀಣ ವಿದ್ವಾನ್‌ ಭಾ.ವಂ.ರಾಮಪ್ರಿಯ ಸಹೋದರರು, ಇವರೊಡನೆ ಕೈಂಕರ್ಯಪರರು, ಸ್ಥಾನೀಕರು ನೇಮೀಸೇವೆಗಳನ್ನು ಅನೂಚಾನ ಸಂಪ್ರದಾಯದಂತೆ ನೆರವೇರಿಸಿದರು.

ದೇಗುಲದ ಇಒ ಶೀಲಾ ಮಾರ್ಗದರ್ಶನದಲ್ಲಿ ಪಾರುತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸನರಸಿಂಹನ್‌ಗುರೂಜಿ ಮತ್ತು ಪರಿಚಾರಕ ಎಂ.ಎನ್.ಪಾರ್ಥಸಾರಥಿ ರಾಮಾನುಜರ ತಿರುನಕ್ಷತ್ರ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದರು.