ಸಾರಾಂಶ
ಕನ್ನಡಪ್ರಭ ವಾರ್ತೆ, ಬೀದರ್
ಹೈದ್ರಾಬಾದ್ ನಿಜಾಮರ ಆಳ್ವಿಕೆ ರಜಾಕಾರರ ದಬ್ಬಾಳಿಕೆಯಿಂದ ವಿಮೋಚನೆಗೊಂಡ ದಿನ ಇದಾಗಿದ್ದು, ಕಲ್ಯಾಣ ಕರ್ನಾಟಕ ವಿಮೋಚನಾ ಇತಿಹಾಸವನ್ನು ಇಂದಿನ ಯುವ ಜನಾಂಗ ತಪ್ಪದೇ ಅರಿತುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಅವರು ಬುಧವಾರ ಜಿಲ್ಲಾಡಳಿತದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಪುರಾಣ, ಇತಿಹಾಸ, ಶರಣ ಸಂಸ್ಕೃತಿ, ಧಾರ್ಮಿಕ, ಸಾಮಾಜಿಕ, ಭಾಷಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತನ್ನದೆಯಾದ ಸಿರಿವಂತ ಪರಂಪರೆ ಹೊಂದಿದೆ. ಈ ಎಲ್ಲ ಇತಿಹಾಸವನ್ನು ಇಂದಿನ ಯುವ ಪೀಳಿಗೆಯು ಅರಿತುಕೊಳ್ಳಬೇಕೆಂದು ನುಡಿದರು.
1947ರ ಆಗಸ್ಟ್ 15ರಂದು ಇಡೀ ಭಾರತ ದೇಶಕ್ಕೆ ಸ್ವಾತಂತ್ರ‍್ಯ ದೊರೆತರೂ ಹೈದ್ರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ‍್ಯ ದೊರೆಯಲಿಲ್ಲ. ನಿಜಾಮರು ಭಾರತ ಒಕ್ಕೂಟದಲ್ಲಿ ಸೇರಲು ಒಪ್ಪದೆ ಸ್ವತಂತ್ರರಾಗಿ ಉಳಿದರು. ನಮ್ಮ ಭಾಗದಲ್ಲಿ ಸ್ವಾತಂತ್ರ‍್ಯ ಸಿಕ್ಕರೂ ರಾಷ್ಟ್ರಧ್ವಜ ಹಾರಿಸುವಂತಿರಲಿಲ್ಲ. ವಂದೇ ಮಾತರಂ ಗೀತೆ ಹೇಳುವಂತಿಲ್ಲ. ಹಾಡಿದರೆ ಜೈಲು ಶಿಕ್ಷೆ ಅನುಭವಿಸುವಂತಾಗುತ್ತಿತ್ತು. ಕನ್ನಡ ಶಾಲೆ ನಡೆಸು ವಂತಿರಲಿಲ್ಲ. ಕೊನೆಗೂ ಸೇನಾ ಕಾರ್ಯಾಚರಣೆಯ ಮೂಲಕ ಕಲ್ಯಾಣ ಕರ್ನಾಟಕ 1948 ಸೆಪ್ಟೆಂಬರ್ 17ರಂದು ವಿಮೋಚನೆಗೊಂಡು ಭಾರತ ಒಕ್ಕೂಟ ಸೇರಿತು ಇದೆಲ್ಲದರ ಜೊತೆಗೆ 2ನೇ ಜಲಿಯನ್ ವಾಲಾಬಾಗ್ ಎಂದು ಕರೆಯಿಸಿಕೊಳ್ಳುವ ಗೋರ್ಟಾ ಹತ್ಯಾಕಾಂಡವು ಅತ್ಯಂತ ಭೀಕರವಾಗಿತ್ತು ಇದರಲ್ಲಿ ಅನೇಕ ಜನರನ್ನು ಹತ್ಯೆ ಮಾಡಲಾಗಿತ್ತು. ಈ ವಿಮೋಚನೆಗೆ ಹೋರಾಡಿದ ಅನೇಕ ಮಹನೀಯರು ಸದಾ ಸ್ಮರಣೀಯರು ಎಂದರು.ಶತಮಾನಗಳ ಶಾಪ, ದಬ್ಬಾಳಿಕೆ :
ಶತಮಾನಗಳ ಶಾಪ, ದಬ್ಬಾಳಿಕೆಯಿಂದಾಗಿ ನಮ್ಮ ಕಲ್ಯಾಣ ಕರ್ನಾಟಕ ಭಾಗ ಉಳಿದ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ಅತ್ಯಂತ ಹಿಂದುಳಿದಿದೆ. ಈ ಬೇಡಿಕೆಯನ್ನು ಅಂದಿನ ಯುಪಿಎ ಸರ್ಕಾರ ಸೋನಿಯಾ ಗಾಂಧಿ ಅವರ ಸಲಹೆ ಹಾಗೂ ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನೇತೃತ್ವದಲ್ಲಿನ ಸರ್ಕಾರ ಸಂವಿಧಾನದ 371 ವಿಧಿಗೆ ತಿದ್ದುಪಡಿ ತರುವ ಮೂಲಕ ವಿಶೇಷ ಸ್ಥಾನಮಾನ ನೀಡಿ ಈ ಕನಸನ್ನು ನನಸು ಮಾಡಲಾಯಿತು ಎಂದರು.ಕಾಂಗ್ರೆಸ್ ಕೊಡುಗೆ ಸ್ಮರಣೀಯ:
371ಜೆ ತಿದ್ದುಪಡಿಯಿಂದಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರ ನೇಮಕಾತಿಯಲ್ಲಿ ನಮ್ಮ ಭಾಗದ ಯುವಕರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ಲಭಿಸುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರಲ್ಲಿ ಇದಕ್ಕೆ ನಿಯಮ ರೂಪಿಸಿ ಜಾರಿಗೆ ತಂದು ಕಲ್ಯಾಣ ಕರ್ನಾಟಕ ಭಾಗದಲ್ಲಿನ ಖಾಲಿ ಸ್ಥಾನಗಳಿಗೆ ನೇಮಕಾತಿ, ನಮ್ಮ ಭಾಗದ ಯುವಜನರಿಗೆ ಸೂಕ್ತ ಶಿಕ್ಷಣ, ಉದ್ಯೋಗ ಹಾಗೂ ಶಿಕ್ಷಣ ಲಭಿಸುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.ಕಾರ್ಯಕ್ರಮದಲ್ಲಿ ಸಂಸದ ಸಾಗರ ಖಂಡ್ರೆ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷರಾದ ಮೊಹ್ಮದ ಗೌಸ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ, ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.