ಸಿದ್ಧಾರೂಢರ ಮಠದಲ್ಲಿ ಅದ್ಧೂರಿ ಲಕ್ಷ ದೀಪೋತ್ಸವ

| Published : Nov 21 2025, 02:00 AM IST

ಸಾರಾಂಶ

ಸಿದ್ಧಾರೂಢ ಮಠದ ಪ್ರಾಂಗಣದಲ್ಲಿ ಹಚ್ಚಲಾಗಿದ್ದ ಲಕ್ಷಾಂತರ ದೀಪಗಳ ಬೆಳಕಿನಿಂದಾಗಿ ಆವರಣವೆಲ್ಲ ಜಗಮಗಿಸುತ್ತಿತ್ತು. ಭಕ್ತರಿಂದ ಸಿದ್ಧಾರೂಢ ಮಹಾರಾಜ ಕೀ ಜೈ, ಗುರುನಾಥಾರೂಢ ಮಹಾರಾಜ ಕೀ ಜೈ ಘೋಷಣೆಗಳು ಮುಗಿಲು ಮುಟ್ಟಿದವು.

ಹುಬ್ಬಳ್ಳಿ:

ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಇಲ್ಲಿನ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ಸಂಭ್ರಮದಿಂದ ನೆರವೇರಿತು.

ಶ್ರೀಮಠದ ಪ್ರಾಂಗಣದಲ್ಲಿ ಹಚ್ಚಲಾಗಿದ್ದ ಲಕ್ಷಾಂತರ ದೀಪಗಳ ಬೆಳಕಿನಿಂದಾಗಿ ಆವರಣವೆಲ್ಲ ಜಗಮಗಿಸುತ್ತಿತ್ತು. ಭಕ್ತರಿಂದ ಸಿದ್ಧಾರೂಢ ಮಹಾರಾಜ ಕೀ ಜೈ, ಗುರುನಾಥಾರೂಢ ಮಹಾರಾಜ ಕೀ ಜೈ ಘೋಷಣೆಗಳು ಮುಗಿಲು ಮುಟ್ಟಿದವು. ಈ ಬಾರಿ ಹೊಲದಲ್ಲಿ ಎತ್ತುಗಳೊಂದಿಗೆ ಬಿತ್ತನೆ ಕಾರ್ಯ ಮಾಡುತ್ತಿರುವ 100 ಅಡಿ ಉದ್ದದ ನೇಗಿಲುಯೋಗಿ ರಂಗೋಲಿ ಚಿತ್ರವು ಲಕ್ಷ ದೀಪೋತ್ಲವದ ಪ್ರಮುಖ ಆಕರ್ಷಣೆಯಾಗಿತ್ತು. ಇದರೊಂದಿಗೆ ಬಗೆಬಗೆಯ ಬೃಹದಾಕಾರದಲ್ಲಿ ಬಿಡಿಸಲಾಗಿದ್ದ ರಂಗೋಲಿಯ ಮೇಲೆ ಭಕ್ತರು ಪಣತೆಗಳನ್ನಿಟ್ಟು ದೀಪ ಬೆಳಗಿಸಿ ಸಂಭ್ರಮಿಸಿದರು.

ಅನ್ಯರಾಜ್ಯದ ಭಕ್ತರು:

ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಧಾರವಾಡ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡರು.

ವಿಶೇಷ ಪೂಜೆ:

ಕಾರ್ತಿಕ ಮಾಸದ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ಸಿದ್ಧಾರೂಢರ ಸ್ವಾಮೀಜಿಗೆ ವಿಶೇಷ ಪೂಜೆ-ಪುನಸ್ಕಾರ ನಡೆದವು. ಬೆಳಗ್ಗೆಯಿಂದ ತಂಡೋಪ ತಂಡವಾಗಿ ಬಂದ ಭಕ್ತರು ಆರೂಢರ ದರ್ಶನ ಪಡೆದರು.

ಲಕ್ಷ ದೀಪೋತ್ಸವಕ್ಕೆ ಚಾಲನೆ:

ಸಂಜೆ ನಡೆದ ಲಕ್ಷ ದೀಪೋತ್ಸವಕ್ಕೆ ಶ್ರೀಮಠದ ಟ್ರಸ್ಟ್ ಕಮಿಟಿ ಮುಖ್ಯ ಆಡಳಿತಾಧಿಕಾರಿ ಹಾಗೂ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್. ಭಾರತಿ ಚಾಲನೆ ನೀಡಿದರು. ಈ ವೇಳೆ ಶಾಂತಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ, ಉಪಾಧ್ಯಕ್ಷ ವಿನಾಯಕ ಘೋಡಕೆ, ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ ಸೇರಿದಂತೆ ಹಲವರಿದ್ದರು.